ಆಳಂದ: ಹೊಸದಿಲ್ಲಿಯಲ್ಲಿ ಜಿ20 ಶೃಂಗಸಭೆ ವೇಳೆ ನಡೆದ ಕೃಷಿ ವಸ್ತು ಪ್ರದರ್ಶನದಲ್ಲಿ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ತಡಕಲ್ ಗ್ರಾಮದ ಮಿಲೆಟ್ ಎಫ್‌ಪಿಒ ಗಮನ ಸೆಳೆದಿದೆ. ಕೃಷಿ ಕ್ಷೇತ್ರದಲ್ಲಿ ಭಾರತ ಸಾಧಿ ಸಿದ ಪ್ರಗತಿಯನ್ನು ಜಿ20 ರಾಷ್ಟ್ರಗಳ ನಾಯಕರ ಪತ್ನಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೃಂಗಸಭೆ ಅಂಗವಾಗಿ ಹೊಸದಿಲ್ಲಿ ಯಲ್ಲಿ ಭಾರತೀಯ ಕೃಷಿ ಸಂಶೋಧನ ಸಂಸ್ಥೆಯ ಆವರಣದಲ್ಲಿ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಇಲ್ಲಿ ಹಸುರು ಕ್ರಾಂತಿಯಿಂದ ಹಿಡಿದು ಸಿರಿ ಧಾನ್ಯ ಕೃಷಿವರೆಗೂ ದೇಶದ ಸಾಧನೆ ಅನಾವರಣಗೊಂಡಿದೆ. ಈ ಪ್ರದರ್ಶನದಲ್ಲಿ ಭಾರತೀಯ ಸಿರಿಧಾನ್ಯ ಸಂಶೋಧನ ಸಂಸ್ಥೆ, ಹೈದ್ರಾಬಾದ್ (ಐಸಿಎಆರ್-ಐಐಎಂಆರ್), ಎಸ್‌ಎಫ್‌ಎಸಿ, ಹೊಸದಿಲ್ಲಿಯಿಂದ ಸ್ಥಾಪಿಸ ಲಾದ ಆಳಂದ ಭೂತಾಯಿ ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ನೂಸರ್ ಕಂಪೆನಿ ಲಿ., ತಡಕಲ್‌ನ ಕಂಪೆನಿಯೂ ಭಾಗವಹಿಸಿತ್ತು.
ಈ ಕಂಪೆನಿಯ ಉತ್ಪನ್ನಗಳ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಧಾನಿ ಮೋದಿ ತಮ್ಮ 97ನೇ ಮನ್ ಕೀ ಬಾತ್‌ನಲ್ಲಿ ಪ್ರಸ್ತಾವಿಸಿದ್ದರು. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ, ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಅವರ ಪತ್ನಿ ಯೊಕೊ ಕಿಶಿದಾ ಸಹಿತ 15 ದೇಶಗಳ ನಾಯಕರ ಪತ್ನಿಯರು ಐಎಆರ್‌ಐ ಕ್ಯಾಂಪಸ್‌ಗೆ ಭೇಟಿ ನೀಡಿದ್ದರು. ಕೃಷಿಗೆ ಸಂಬಂಧಿಸಿದ ಸ್ಮಾರ್ಟ್ ಅಪ್ಲಿಕೇಶನ್‌ಗಳು, ಸುಸ್ಥಿರ ಆರೋಗ್ಯ, ಕಡಿಮೆ ಸ್ಥಳದಲ್ಲಿ ಹೆಚ್ಚು ಬೆಳೆ ಬೆಳೆಯುವ ವರ್ಟಿಕಲ್ ಕೃಷಿ, ಜಲ ಕೃಷಿ ಸಹಿತ ಸುಸ್ಥಿರ ಕೃಷಿಗಳ ವಸ್ತು ಪ್ರದರ್ಶನ ವೀಕ್ಷಿಸಿದರು.
ಆಳಂದ ಭೂತಾಯಿ ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ನೂಸರ್ ಕಂಪೆನಿ ಲಿ. ತಡಕಲ್‌ನಿಂದ ಅಶ್ವಿನಿ ಬೆಳ್ಳೆ, ರಾಜಶ್ರೀ ಶಾಂತಿನಾಥ ಪಾಟೀಲ ಭಾಗವಹಿಸಿದ್ದರು.