Advertisement

ಏರಿ ಒಡೆದು ಅಕ್ಷರಶಃ ಕೆರೆಯಾದ ಅರೆಕೆರೆ

12:53 AM Nov 25, 2019 | Lakshmi GovindaRaj |

ಬೆಂಗಳೂರು: ಹೆಚ್ಚು-ಕಡಿಮೆ ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ನಗರದ ಮೂರನೇ ಕೆರೆಯ ಏರಿ ಒಡೆದು ಅವಾಂತರ ಸೃಷ್ಟಿಸಿದ ಘಟನೆ ಭಾನುವಾರ ಅರೆಕೆರೆ ವಾರ್ಡ್‌ನಲ್ಲಿ ನಡೆದಿದೆ. ಭರ್ತಿಯಾಗಿದ್ದ ಕೆರೆಯ ಏರಿ ಒಡೆದು ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಕೆಲವೇ ಹೊತ್ತಿನಲ್ಲಿ ಕೆರೆಯ ನೀರು ಒಂದು ಕಿ.ಮೀ.ವರೆಗೂ ವ್ಯಾಪಿಸಿತು. ಪರಿಣಾಮ ಹುಳಿಮಾವು ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟಿತ್ತು. ಏರಿ ತಾನೇಗೆ ಒಡೆದಿಲ್ಲ, ಬದಲಿಗೆ ಕಿಡಿಗೇಡಿಗಳು ಬೇಕಂತಲೇ ಕೆರೆ ಏರಿ ಒಡೆದಿದ್ದಾರೆ. ಈ ಕುರಿತು ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸುಮಾರು 20 ಅಡಿಯಷ್ಟು ಕೆರೆ ಏರಿ ಒಡೆದಿದ್ದರಿಂದ 2500ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಅರೆಕೆರೆಯ ಕೆರೆ ಸುತ್ತಲಿನ ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಠ ಒಂದರಿಂದ ಗರಿಷ್ಠ ಆರು ಅಡಿಯಷ್ಟು ನೀರು ನಿಂತಿತ್ತು. ಇದರಿಂದ ತಗ್ಗುಪ್ರದೇಶದ ಮನೆಗಳಲ್ಲಿನ ದಿನಸಿ ಸಾಮಗ್ರಿ, ಹಾಸಿಗೆ, ಟಿವಿ, ಮತ್ತಿತರ ವಸ್ತುಗಳು, ವಾಹನಗಳು ನೀರಿನಲ್ಲಿ ತೇಲಾಡಿದವು. ಒಂದೆರಡು ಆಸ್ಪತ್ರೆಗಳಿಗೂ ನೀರು ನುಗ್ಗಿದ್ದರಿಂದ ರೋಗಿಗಳು ಕೂಡ ಪರದಾಡುವಂತಾಯಿತು. ಈ ನಡುವೆ ವಿದ್ಯುತ್‌ ಸಂಪರ್ಕ ಕೂಡ ಕಡಿತಗೊಂಡಿದ್ದರಿಂದ ಜಲಾವೃತಗೊಂಡ ಪ್ರದೇಶವು ಕತ್ತಲೆಯಲ್ಲಿ ಮುಳುಗಿತ್ತು.

ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು, ವಾರಾಂತ್ಯದ ರಜಾ ಮೂಡ್‌ನ‌ಲ್ಲಿದ್ದ ನಿವಾಸಿಗಳಿಗೆ ದಿಢೀರ್‌ ನುಗ್ಗಿದ ನೀರು ನೆಮ್ಮದಿ ಕದಡಿತು. ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಹತ್ತಿರದ ಕಲ್ಯಾಣ ಮಂಟಪಗಳಲ್ಲಿ ತಾತ್ಕಾಲಿಕ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಊಟ, ಕುಡಿಯುವ ನೀರು, ಹೊದಿಕೆಗಳನ್ನು ಕಲ್ಪಿಸಲಾಗಿದೆ. ಈ ಮಧ್ಯೆ ಮಧ್ಯಾಹ್ನ 12ರ ವೇಳೆಗೆ ನೀರು ನಿಧಾನವಾಗಿ ರಸ್ತೆ ಆವರಿಸುತ್ತಿದ್ದಂತೆ ತಗ್ಗುಪ್ರದೇಶಗಳಲ್ಲಿದ್ದ ಕೆಲವರು ಎಚ್ಚೆತ್ತು ಸ್ವಯಂಪ್ರೇರಿತವಾಗಿ ಮನೆಗಳನ್ನು ಖಾಲಿ ಮಾಡಿದ್ದೂ ಇದೆ. ಹುಳಿಮಾವು ಸಂಪೂರ್ಣ ಜಲಾವೃತವಾಗಿದ್ದರಿಂದ ರಸ್ತೆ ಮತ್ತು ಚರಂಡಿಯ ವ್ಯತ್ಯಾಸ ಕೂಡ ಗೊತ್ತಾಗದಂತಾಗಿತ್ತು. ಮಕ್ಕಳು, ಮಹಿಳೆಯರು, ವೃದ್ಧರಿಗೆ ಇದರ ಬಿಸಿ ತುಸು ಜೋರಾಗಿ ತಟ್ಟಿತು.

ಹತ್ತಿರದ ನ್ಯಾನೋ ಆಸ್ಪತ್ರೆಯಂತೂ ಸಂಪೂರ್ಣ ಜಲಾವೃತವಾಗಿತು. ಆಸ್ಪತ್ರೆಯ ನೆಲಮಹಡಿಯಲ್ಲಿ ತೀವ್ರ ನಿಗಾ ಘಟಕ ಇದ್ದುದರಿಂದ ಅಲ್ಲೆಲ್ಲಾ ನೀರು ನುಗಿತು. ವೈದ್ಯಕೀಯ ಉಪಕರಣಗಳು, ಔಷಧಿಗಳು, ರೋಗಿಗಳ “ಕೇಸ್‌ ಹಿಸ್ಟರಿ’ ಎಲ್ಲವೂ ನೀರುಪಾಲಾಯಿತು. ಹುಳಿಮಾವು ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕೇವಲ 100 ಮೀಟರ್‌ ದೂರ ಕ್ರಮಿಸಲಿಕ್ಕೂ ಮೂರು ಕಿ.ಮೀ. ಸುತ್ತಿ ಬರಬೇಕಾಯಿತು. ಭಾನುವಾರ ಇದ್ದರೂ ಸಂಚಾರದಟ್ಟಣೆ ಉಂಟಾಯಿತು.

ನಾಲ್ಕು ಬೋಟು; ನೂರಾರು ಜನರ ರಕ್ಷಣೆ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪಡೆ ಹಾಗೂ ಸಿವಿಲ್‌ ಡಿಫೆನ್ಸ್‌ ತಂಡ, ನೂರಕ್ಕೂ ಅಧಿಕ ಜನರನ್ನು ಸುರಕ್ಷಿತ ಜಾಗಕ್ಕೆ ಕರೆತಂದು ಬಿಟ್ಟಿತು. ಅಲ್ಲದೆ, ನಾಲ್ಕು ಬೋಟುಗಳನ್ನು ನಿಯೋಜಿಸಿದ್ದು, ಅದರಲ್ಲಿಯೂ 30-40 ಜನರನ್ನು ಕರೆತರಲಾಗಿದೆ. ಧ್ವನಿವರ್ಧಕದ ಮೂಲಕವೂ ಸ್ಥಳಾಂತರಗೊಳ್ಳೂವಂತೆ ನಿವಾಸಿಗಳಿಗೆ ಮನವಿ ಮಾಡಲಾಗಿದೆ. ಸುಮಾರು ಆರೇಳು ಕಡೆಗಳಲ್ಲಿ 7 ಅಡಿಗಳಿಗಿಂತ ಹೆಚ್ಚು ನೀರು ನಿಂತಿರುವುದು ಕಂಡುಬಂದಿದೆ. ಸುರಕ್ಷಿತ ಜಾಗಕ್ಕೆ ಬಂದ ಕೆಲವರು, ತಮ್ಮ ಪೈಕಿಯವರು ಅಲ್ಲಿಯೇ (ಜಲಾವೃತಗೊಂಡ ಸ್ಥಳದಲ್ಲಿ) ಉಳಿದಿದ್ದಾರೆ ಎಂದು ಅಲವತ್ತುಕೊಂಡರು. ಅಂತಹವರನ್ನೂ ರಕ್ಷಿಸುವ ಕಾರ್ಯ ನಡೆದಿದೆ ಎಂದು ಸಿವಿಲ್‌ ಡಿಫೆನ್ಸ್‌ ಕ್ಷಿಪ್ರ ಸ್ಪಂದನಾ ಪಡೆಯ ಕಮಾಂಡಿಂಗ್‌ ಆಫೀಸರ್‌ ಚೇತನ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

ಈ ನಡುವೆ ಟಿಪ್ಪರ್‌ಗಳಿಂದ ಮಣ್ಣು ತಂದು ಒಡೆದ ಏರಿಯನ್ನು ಮುಚ್ಚು ಕೆಲಸ ನಡೆದಿದೆ. ಸಂಜೆ ಹೊತ್ತಿಗಾಗಲೇ ಏರಿಯಿಂದ ನೀರು ಹರಿಯುವುದು ಸ್ಥಗಿತಗೊಂಡಿತ್ತು. ಅದರ ಪರಿಣಾಮ ಮಾತ್ರ ಮುಂದುವರಿದಿತ್ತು. 132 ಎಕರೆ ವಿಸ್ತೀರ್ಣದ ಕೆರೆ ಬಿಬಿಎಂಪಿಗೆ ಸೇರಿದ್ದು, ಕೆರೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ನೀರು ಸಂಗ್ರಹ ಆಗಿತ್ತು ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಈ ಕೆರೆ ಇನ್ನೂ ಪಾಲಿಕೆಗೆ ಹಸ್ತಾಂತರಗೊಂಡಿಲ್ಲ. ಬಿಡಿಎ ಸುಪರ್ದಿಯಲ್ಲಿಯೇ ಇದೆ ಎಂದು ಮೇಯರ್‌ ಎಂ. ಗೌತಮ್‌ ಕುಮಾರ್‌ ಸ್ಪಷ್ಟಪಡಿಸಿದರು.

ಒಡೆದಿದ್ದರ ಹಿಂದೆ “ಒತ್ತುವರಿ’ ಶಂಕೆ: ಕೆರೆ ಏರಿ ಒಡೆಯಲು ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ, ಒತ್ತುವರಿಗೆ ಅನುಕೂಲಕ್ಕಾಗಿ ಕಿಡಿಗೇಡಿಗಳು ಕೆರೆ ನೀರು ಚರಂಡಿಗೆ ಹರಿಸುವಾಗ ಘಟನೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಕೆರೆ ಭರ್ತಿಯಾದರೆ ಒತ್ತುವರಿ ಮಾಡುವುದು ಅಸಾಧ್ಯ. ಹಾಗಾಗಿ, ರಾಜಕಾಲುವೆ ಅಥವಾ ಚರಂಡಿಗೆ ನೀರು ಹರಿಸುತ್ತಿದ್ದರು. ಈ ವೇಳೆ ಏರಿ ಒಡೆದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಆದರೆ, ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪೂರ್ವಸಿದ್ಧತೆ ಮಾಡಿಕೊಳ್ಳದೆ, ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಬಿಬಿಎಂಪಿ ಅರೆಕೆರೆ ವಾರ್ಡ್‌ ಸದಸ್ಯೆ ಭಾಗ್ಯಲಕ್ಷ್ಮೀ ಮುರಳಿ ಆರೋಪಿಸಿದ್ದಾರೆ.

ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ?
ಬೆಂಗಳೂರು: ಹುಳಿಮಾವು ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ಬಿಬಿಎಂಪಿಗೆ ಹಸ್ತಾಂತರಿಸುವಂತೆ 2016ರಲ್ಲಿ ಸರ್ಕಾರ ಆದೇಶ ಮಾಡಿದರು ಈವರೆಗೂ ಬಿಡಿಎ ಕೆರೆಯನ್ನು ಪಾಲಿಗೆ ಹಸ್ತಾಂತರ ಮಾಡಿಲ್ಲ. ಬಿಡಿಎ ಅಧೀನದಲ್ಲಿದ್ದ ಕೆರೆಯನ್ನು ಅಭಿವೃದ್ಧಿ ಪಡಿಸುವುದಕ್ಕೆ ಬಿಡಿಎ ಅಧಿಕಾರಿಗಳು ಮುಂದಾಗಿದ್ದರು. ಕೆರೆಯಲ್ಲಿ ಮಳೆ ಬಂದು ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದ್ದರಿಂದ ಕಾಮಗಾರಿ ನಡೆಸುವುದಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಬಿಡಿಎ ಅಧಿಕಾರಿಗಳು ಕೆರೆ ನೀರು ಹೊರ ಹರಿಸುವುದಕ್ಕೆ ಮುಂದಾಗಿದ್ದೇ ಅನಾಹುತಕ್ಕೆ ಕಾರಣ ಎನ್ನುವ ಆರೋಪ ವ್ಯಕ್ತವಾಗಿದೆ.

ಸುಮಾರು 140 ಎಕರೆ ಪ್ರದೇಶದಲ್ಲಿರುವ ಹುಳಿಮಾವು ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರ 2016ರಲ್ಲಿ ಆದೇಶ ಮಾಡಿತ್ತು. ಆದರೆ, ಬಿಡಿಎ ಕೆರೆ ಒತ್ತುವರಿ, ಜಲಾನಯನ ಪ್ರದೇಶ, ಸರಹದ್ದು ಸರ್ವೇ ಮಾಡಿ ಬಿಬಿಎಂಪಿಗೆ ಹಸ್ತಾಂತರ ಮಾಡಬೇಕಿತ್ತು. ಆದರೆ, ಈವರೆಗೂ ಮಾಡಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಯಾರೋ ಕೆರೆ ಏರಿ ಒಡೆದಿದ್ದಾರೆ!: ಯಾರೋ ಕೆರೆ ಏರಿ ಒಡೆದು ಹಾಕಿದ್ದಾರೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ಮೇಯರ್‌ ಹೇಳಿಕೆ ನೀಡಿದರು. ಆದರೆ, ಅದನ್ನು ಒಪ್ಪದ ಅರೆಕೆರೆ ವಾರ್ಡ್‌ನ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮೀ, ಮೇಯರ್‌ ಅವರು ಈಗ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ. ಬಿಡಿಎ ಗುತ್ತಿಗೆದಾರ ಕಾರ್ತಿಕ್‌ ಎಂಬವರು ಕೆರೆ ಏರಿ ಒಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಮಗು ಉಳಿಯುತ್ತದೆ ಅನ್ನೋ ನಂಬಿಕೆ ಇರಲಿಲ್ಲ!
ಬೆಂಗಳೂರು: “ಮಗು ಉಳಿಯುತ್ತದೆಯೋ ಇಲ್ಲವೋ ಎನ್ನುವ ನಂಬಿಕೆ ನನಗಿರಲಿಲ್ಲ. ದೇವರು ದೊಡ್ಡವನು. ಮಗು ಉಳಿದಿದೆ’ ಭಾನುವಾರ ಕೆರೆ ಏರಿ ಒಡೆದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಸಾವಿನ ಅಂಚಿನಿಂದ ಮಗುವನ್ನು ಉಳಿಸಿಕೊಂಡ ಗೌರಮ್ಮ ಅವರ ಮಾತುಗಳಿವು. ಆ ಪ್ರವಾಹದ ವಾತಾವರಣದಿಂದ ಹೊರಕ್ಕೆ ಬಂದ ಅನುಭವವನ್ನು ಹುಳಿಮಾವಿನ ಕೃಷ್ಣಾ ಲೇಔಟ್‌ನ ಗೌರಮ್ಮ “ಉದಯವಾಣಿ’ಯೊಂದಿಗೆ ಹಂಚಿಕೊಂಡರು.

“ಭಾನುವಾರ ಬೆಳಗ್ಗೆ ಕೆರೆ ಏರಿ ಒಡೆದಿದೆ ಎಂದು ಮೊದಲು ಗೊತ್ತಾಗಲಿಲ್ಲ. ಮೊದಲು ಯಾವುದೋ ಒಳಚರಂಡಿಯಿಂದ ನೀರು ಬರುತ್ತಿದೆ ಎಂದು ಭಾವಿಸಿ, ಬಚ್ಚಲು ಮನೆಯನ್ನು ಸ್ವತ್ಛ ಮಾಡುತ್ತಿದ್ದೆ. ಆದರೆ, ಏಕಾಏಕಿ ಪ್ರವಾಹದಂತೆ ನೀರು ಮನೆ ಒಳಗೆ ನುಗ್ಗಿತು. ಐದು ತಿಂಗಳ ಮಗು ತೊಟ್ಟಿಲಿನಲ್ಲಿತ್ತು. ತೊಟ್ಟಿಲು ಮುಟ್ಟುವ ಹಂತದಷ್ಟು ನೀರು, ಅರೆಕ್ಷಣ ತಡಮಾಡಿದ್ದರೂ, ನೀರಿನಲ್ಲಿ ಮಗು ಮುಳುಗುವ ಅಪಾಯವಿತ್ತು ಎಂದು ಆ ಭಯಾನಕ ವಾತಾವರಣವನ್ನು ನೆನಪಿಸಿಕೊಳ್ಳುತ್ತಾರೆ.

ಅಲ್ಲಿಂದ ಹೊರಕ್ಕೆ ಪವಾಡದ ರೀತಿಯಲ್ಲಿ ಮಗುವನ್ನು ಹೊರಕ್ಕೆ ತೆಗೆದುಕೊಂಡು ಬಂದೆ. ಅಲ್ಲಿಂದ ಆಚೆಗೆ ಬರುವವರೆಗೆ ಮಗು ಉಳಿಯುತ್ತದೆ ಎನ್ನುವ ನಂಬಿಕೆ ಇರಲಿಲ್ಲ. ಮಗುವನ್ನು ಉಳಿಸಿಕೊಳ್ಳುವ ಭರದಲ್ಲಿ ಮನೆಯಲ್ಲಿನ ಯಾವೊಂದು ವಸ್ತುವನ್ನೂ ತೆಗೆದುಕೊಳ್ಳಲಿಲ್ಲ. ಮಗುವಿನ ಹೆಸರಿನಲ್ಲಿದ್ದ 2 ಲಕ್ಷ ರೂ.ಗಳ ಭಾಗ್ಯಲಕ್ಷ್ಮೀ ಬಾಂಡ್‌ ನೀರು ಪಾಲಾಗಿದೆ. ಇದೇ ಘಟನೆ ರಾತ್ರಿ ವೇಳೆ ನಡೆದಿದ್ದರೆ ಮಗು ಉಳಿಯುತ್ತಿರಲಿಲ್ಲ ಎಂದು ಆಘಾತದ ಪರಿಸ್ಥಿತಿಯಲ್ಲೂ ಅವರು ಸುಧಾರಿಸಿಕೊಳ್ಳುತ್ತಾರೆ.

ಸಮುದಾಯ ಭವನದಲ್ಲಿ ಕಣ್ಣೀರು
ಬೆಂಗಳೂರು: ಹುಳಿಮಾವಿನ ಅರೆಕೆರೆ ಅನಾಹುತದಿಂದ ಸಮಸ್ಯೆ ಏದುರಿಸುತ್ತಿರುವವರಿಗಾಗಿ ಕೃಷ್ಣಾ ಲೇಔಟ್‌ ಸಮುದಾಯ ಭವನದಲ್ಲಿ ಬಿಬಿಎಂಪಿ ಭಾನುವಾರ ರಾತ್ರಿ ಊಟದ ವ್ಯವಸ್ಥೆ ಮಾಡಿತ್ತು. ಆದರೆ, ಭಾನುವಾರ ಬೆಳಗ್ಗೆ ಇದ್ದ ವಾತಾವರಣ ಮಧ್ಯಾಹ್ನದ ವೇಳೆಗೆ ಬದಲಾಗಿತ್ತು. ಬೆಳಗ್ಗೆ ತಮ್ಮ ಮನೆಗಳಲ್ಲಿ ಆಹಾರ ಸೇವಿಸಿದ್ದವರು, ರಾತ್ರಿ ಸಮುದಾಯ ಭವನಕ್ಕೆ ಬರಬೇಕಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಅನ್ನದ ತಟ್ಟೆಯನ್ನು ಕೈಯಲ್ಲಿ ಹಿಡಿದವರಾರೂ ಅದನ್ನು ಸುಲಭವಾಗಿ ಸೇವಿಸುವ ಸ್ಥಿತಿಯಲ್ಲಿ ಇರಲಿಲ್ಲ.

ದುಃಖದಿಂದಲೇ ಆಹಾರ ಸೇವನೆ ಮಾಡಿದರು. ಇನ್ನು ಭಾನುವಾರವೆಂದರೆನೇ ವಿಶ್ರಾಂತಿಯ ದಿನ. ಆದರೆ, ಅರೆಕೆರೆ ನಿವಾಸಿಗಳಿಗೆ ಅದು ಸಜೆ ದಿನವಾಗಿ ಬದಲಾಗಿತ್ತು. ಭಾನುವಾರ ಮಧ್ಯಾಹ್ನನದಿಂದ ಇಲ್ಲಿನ ಸ್ಥಳೀಯರು ಕಂಗಾಲಾಗಿ ಹೋಗಿದ್ದರು. ಯಾವುದೋ ದೊಡ್ಡ ಪ್ರವಾಹದಿಂದ ತಪ್ಪಿಸಿಕೊಂಡ ಭಾವ, ಜೀವ ಉಳಿಯಿತು ಎನ್ನುವ ಸಮಾಧಾನ ಅದರೊಟ್ಟಿಗೇ, ನೀರಲ್ಲಿ ಕೊಚ್ಚಿಹೋದ ಸಾಮಗ್ರಿಗಳು, ದಾಖಲೆಗಳಿಗೆ ಏನು ಮಾಡುವುದು ಎನ್ನುವ ನೋವು ಒತ್ತರಿಸಿ ಬರುತ್ತಿತ್ತು.

ಕಾಮಗಾರಿ ನಡೆಯುತ್ತಿರಲಿಲ್ಲ; ಮೇಯರ್‌
ಕೆರೆಯಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿರಲಿಲ್ಲ. ಕೆರೆಯು ಭರ್ತಿಯಾಗಿತ್ತು. ಸ್ಥಳೀಯ ಕೆಲ ಕಿಡಿಗೇಡಿಗಳು ಪೈಪ್‌ ಮೂಲಕ ನೀರನ್ನು ಚರಂಡಿಗೆ ಹರಿಸಲು ಯತ್ನಿಸಿದ್ದು, ನೀರಿನ ಒತ್ತಡಕ್ಕೆ ಕೆರೆ ಒಡೆದಿರುವ ಸಾಧ್ಯತೆ ಇದೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಗೆ ಪಾಲಿಕೆಯಿಂದ ದೂರು ದಾಖಲಿಸಲಾಗುವುದು.
-ಎಂ.ಗೌತಮ್‌ ಕುಮಾರ್‌, ಮೇಯರ್‌

ಎಫ್ಐಆರ್‌ ದಾಖಲು
ಕಿಡಿಗೇಡಿಗಳಿಂದ ಈ ಕೃತ್ಯ ಸಂಭವಿಸಿರುವ ಸಾಧ್ಯತೆ ಇದೆ. ಅದೇನೇ ಇರಲಿ, ಘಟನೆ ಬಗ್ಗೆ ಎಫ್ಐಆರ್‌ ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
– ಬಿ.ಎಚ್‌. ಅನಿಲ್‌ ಕುಮಾರ್‌, ಆಯುಕ್ತರು, ಬಿಬಿಎಂಪಿ

ಪಾಲಿಕೆಗೆ ಸಹಕಾರ; ಬಿಡಿಎ
ಹುಳಿಮಾವು ಕೆರೆ ಪ್ರಾಧಿಕಾರದ ಅಧೀನದಲ್ಲಿತ್ತು. ಈ ಹಿಂದೆಯೇ ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಆದಾಗ್ಯೂ ಕೆರೆ ಏರಿ ಒಡೆದ ತಕ್ಷಣ ಸಂಬಂಧಪಟ್ಟ ಬಿಡಿಎ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಬಿಬಿಎಂಪಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ.
-ಡಾ.ಜಿ.ಸಿ.ಪ್ರಕಾಶ್‌, ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)

Advertisement

Udayavani is now on Telegram. Click here to join our channel and stay updated with the latest news.

Next