ಹಾಸನ: ಸಜ್ಜನರು, ರಾಜಕೀಯ ಮುತ್ಸದ್ಧಿಗಳ ಕ್ಷೇತ್ರವೆಂದೇ ಗುರುತಿಸಿಕೊಂಡಿದ್ದ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ
ಇತ್ತೀಚಿನ ಚುನಾವಣೆಗಳಲ್ಲಿ ಹಣಬಲದವರ ಪ್ರಾಬಲ್ಯ ಹೆಚ್ಚುತ್ತಿದೆ. ಸ್ವಾತಂತ್ರ್ಯ ನಂತರ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ನಾಮ ನಿರ್ದೇಶನಗೊಂಡಿದ್ದ ಜಿ.ಎ.ತಿಮ್ಮಪ್ಪಗೌಡ ಅವರು ಈ ಕ್ಷೇತ್ರವನ್ನು 1952ರ ಪ್ರಥಮ ಚುನಾವಣೆಯಲ್ಲಿ ಪ್ರತಿನಿಧಿಸಿದ ಪ್ರಥಮ ಶಾಸಕರು.
ಈ ಕ್ಷೇತ್ರದಲ್ಲಿ ಗೆದಿದ್ದ ಬಹುತೇಕರು ಎರಡು ಮೂರು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ನೀರಾವರಿ ತಜ್ಞ ಎಚ್.ಎನ್ .ನಂಜೇಗೌಡ ಅವರು ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜನತಾ ಪರಿವಾರದ ಹಿರಿಯ ನಾಯಕ, ಸರಳ, ಸಜ್ಜನ ರಾಜಕಾರಣಿ ಎಂದೇ ಗುರುತಿಸಿದ್ದ ಕೆ.ಬಿ.ಮಲ್ಲಪ್ಪ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿರುವುದು ಈ ಕ್ಷೇತ್ರದ ದಾಖಲೆ.
ಈಗಲೂ ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಪ್ರಾಮಾಣಿಕ ರಾಜಕಾರಣಿ ಎಂದು ಗುರುತಿಸಿರುವ ಎ.ಟಿ. ರಾಮಸ್ವಾಮಿ ಅವರು ಈ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದು, ಈ ಬಾರಿಯ ಚುನಾವಣೆಯಲ್ಲೂ ಅವರು ಹುರಿಯಾಳು. ಈಗಾಗಲೇ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಈ ಬಾರಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದಾರೆ.
ನಡೆಯುತ್ತಿದ್ದ ಈ ಕ್ಷೇತ್ರ ಈಗ ಅತ್ಯಂತ ಪ್ರಭಾವಿ ಹಾಗೂ ಸೂಕ್ಷ್ಮ ಕ್ಷೇತ್ರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುತ್ತಿದ್ದು, ಅವರ ಎದುರಾಳಿ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ. ಹಾಗಾಗಿ ಈ ಕ್ಷೇತ್ರ ಈ ಬಾರಿಯ ಕುತೂಹಲದ ಕ್ಷೇತ್ರವಾಗಿದೆ.
ಬಿಜೆಪಿಯಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್. ಯೋಗಾರಮೇಶ್ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು 32 ಸಾವಿರ ಮತಗಳನ್ನು ಪಡೆದು ಫಲಿತಾಂಶವನ್ನೇ ಬುಡಮೇಲು ಮಾಡಿದ್ದ ಯೋಗಾರಮೇಶ್ ಅವರ ಸ್ಪರ್ಧೆಯಿಂದಾಗಿ ಈಗ ತ್ರಿಕೋನ ಸ್ಪರ್ಧೆಯ ಚಿತ್ರಣ ರೂಪು ಗೊಳ್ಳುತ್ತಿದ್ದು, 2013ರ ಚುನಾವಣೆಯ ಚಿತ್ರಣವೇ ಈ ಬಾರಿಯೂ ಕಂಡು ಬರುತ್ತಿದೆ.
ಎನ್.ನಂಜುಂಡೇಗೌಡ