ಕಲಬುರಗಿ: ಬೆಂಗಳೂರನಲ್ಲಿ ಇದ್ದರೆ ಬೆಂಗಳೂರಲ್ಲೇ ಇದ್ದಿರಿ ಎನ್ನುತ್ತೀರಿ, ಹಳ್ಳಿಕಡೆ ಹೋದರೆ ಶಂಕ ಊದುತ್ತಿದ್ದಾರೆ ಎನ್ನುತ್ತೀರಿ. ಜನರ ಕಷ್ಟ ಅರ್ಥ ಮಾಡಿಕೊಳ್ಳಲು ಈ ಪ್ರಯತ್ನ ಮಾಡಬಾರದಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
ಬಿಜೆಪಿಯ ಜನಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಹಾಗೆ ದಿನಕ್ಕೆರಡು ಸಲ ಕ್ಯಾಮರಾ ಬಂದು ನಿಲ್ಲಕ್ಕಾಗಲ್ಲ. ಜನರ ಸಮಸ್ಯೆ ಅಲಿಸಲು ಮುಂದಾದರೆ ಶಂಕ ಊದುತ್ತಿದ್ದಾರೆ ಎಂದು ಟೀಕೆ ಮಾಡಲಾಗುತ್ತಿದೆ ಎಂದರು.
ಬಿಟ್ ಕಾಯಿನ್ ಪ್ರಕರಣ ಬಯಲಿಗೆಳೆದಿದ್ದೆ ನಾವು. 2018 ರಲ್ಲಿ ಶ್ರೀಕಿ ಕಾಂಗ್ರೆಸ್ ನವರ ಮಕ್ಕಳ ಜೊತೆಗಿದ್ದ. ಆಗ ಚಾರ್ಜ ಶೀಟ್ ಹಾಕದೆ ಪ್ರಕರಣ ಮುಚ್ಚಿ ಹಾಕಿದ್ದು ಕಾಂಗ್ರೆಸ್ ಎಂದು ಟೀಕಿಸಿದ ಗೃಹ ಸಚಿವರು, ಕಾಂಗ್ರೆಸ್ ನವರ ಮಕ್ಕಳ ಜೊತೆಗೆ ಶ್ರೀಕಿ ಗೋವಾದ ಹೋಟೆಲ್ ನಲ್ಲಿದ್ದಾಗ ಅರೆಸ್ಟ್ ಮಾಡಲಾಗಿದೆ. ಆತನನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದ್ದೇ ತಪ್ಪು ಎನ್ನುವ ರೀತಿ ಕಾಂಗ್ರೆಸ್ ಮಾತಾಡುತ್ತಿದೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು ಅಣಕಿಸಬೇಡಿ: ಸರ್ಕಾರಕ್ಕೆ ಎಚ್ ಡಿಕೆ ತರಾಟೆ
ಶ್ರೀಕಿಗೆ ಆತನಿಗೆ ನಿತ್ಯ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಕಿದ್ದೇ ಕಾಂಗ್ರೆಸ್ ಪಕ್ಷ. ಈಗ ಶಾಸಕ ಪ್ರಿಯಾಂಕ್ ಖರ್ಗೆ ಬಲು ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾರೆ. ಹೀಗಿದ್ದಲ್ಲಿ ಸಿಎಂ ಬೊಮ್ಮಾಯಿ ತಲೆದಂಡ ಯಾಕಾಗುತ್ತದೆ. ಏನಾದರೂ ಆಗುವುದಿದ್ದರೆ ಅದು ಕಾಂಗ್ರೆಸ್ ನವರ ತಲೆ ದಂಡವಾಗುತ್ತದೆ. ಹಿಂದಿನ ಸರಕಾರ ಶ್ರೀಕಿಯನ್ನು ಏಕೆ ಬಂಧನ ಮಾಡಲಿಲ್ಲ. ಅವರು ಮುಚ್ಚಿ ಹಾಕಿದ್ದನ್ನು ನಾವು ಬಿಚ್ಚಿ ಇಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಒಟ್ಟಾರೆ ಬೊಮ್ಮಾಯಿ ಸರ್ಕಾರದಲ್ಲಿ ಕಾಂಗ್ರೆಸ್ ನಿರುದ್ಯೋಗಿಯಾಗಿದೆ. ಯಾವುದೇ ವಿಚಾರಗಳಿಲ್ಲ. ಹಾಗಾಗಿ ಅನಗತ್ಯವಾಗಿ ಮಾತಾಡುತ್ತಿದ್ದಾರೆ. ಇದಕ್ಕೆ ಜನ ಕಿವಿಗೊಡುವುದಿಲ್ಲ ಎಂದರು.
ಹಂಸಲೇಖ ವಿರುದ್ಧ ದೂರು ದಾಖಲೆ ವಿಚಾರ: ಗೀತ ರಚನೆಕಾರ ಹಂಸಲೇಖ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಹಂಸಲೇಖ ಅವರಿಗೂ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ. ಬಸವನಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವರ ಆರಗ ಜ್ಞಾನೇಂದ್ರ ತಿಳಿಸಿದರು.