ಕಾಪು: ಸುಮಾರು 4.50 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿರುವ ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಸಪರಿವಾರ ಶ್ರೀ ನಾಗಬ್ರಹ್ಮ
ಸ್ಥಾನದಲ್ಲಿ ನವೀಕೃತ ಶಿಲಾಮಯ ದೇಗುಲ ಸಮರ್ಪಣೆ, ಬಿಂಬ ಪ್ರತಿಷ್ಠಾಪನೆ, ಬ್ರಹ್ಮಕಲಶ ಮಹೋತ್ಸವವು ಎ. 22ರಿಂದ ಮೊದಲ್ಗೊಂಡು ಮೇ 2ರ ವರೆಗೆ ಜರಗಲಿದೆ.
ಶಿಲಾಮಯ ಗರ್ಭಗುಡಿ ಸಹಿತವಾದ ಗಜಪೃಷ್ಠಾಕಾರದ ಗಣಪತಿಯ ನೂತನ ಗುಡಿ ನಿರ್ಮಾಣಗೊಂಡಿದ್ದು, ತೀರ್ಥ ಮಂಟಪ, ಸುತ್ತುಪೌಳಿ ಮತ್ತುಸಪರಿವಾರ ಶ್ರೀ ನಾಗ್ರಬ್ರಹ್ಮಾದಿ ಸನ್ನಿಧಿಯೂ ಪುನರ್ ನಿರ್ಮಾಣಗೊಂಡಿದ್ದು, ದೇಗುಲದ ತಂತ್ರಿ ವೇ| ಮೂ| ಕಳತ್ತೂರು ಉದಯ ತಂತ್ರಿಗಳ ನೇತೃತ್ವದಲ್ಲಿ ದೇಗುಲ ಸಮರ್ಪಣೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಮಾರಂಭ ನಡೆಯಲಿದೆ.
ಎಪ್ರಿಲ್ 22ರಂದು ಸಾಮೂಹಿಕ ಪ್ರಾರ್ಥನೆ, ಎ. 24ರಂದು ಹೊರೆ ಕಾಣಿಕೆ ಸಮರ್ಪಣೆ, ಎ. 26ರಂದು ನಾಗಬ್ರಹ್ಮಾದಿ ಪರಿವಾರ ದೇವರುಗಳ ಪುನಃ ಪ್ರತಿಷ್ಠೆ, ಎ. 29ರಂದು ಮಹಾಲಿಂಗೇಶ್ವರ, ಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ, ಮೇ 2ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಹಾಗೂ ಮೇ 16ರಂದು ವಾರ್ಷಿಕ ಮಹೋತ್ಸವ ಜರಗಲಿದೆ.
ಎ. 29ರಂದು ಸಂಜೆ 6.30ಕ್ಕೆ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ, ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮೇ 2ರಂದು ಸಂಜೆ 6.30ಕ್ಕೆಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ ವಿನಯಕುಮಾರ್ ಸೊರಕೆ ಭಾಗವಹಿಸಲಿದ್ದಾರೆ.
ಎ. 22ರಿಂದ ಮೇ 2ರ ವರೆಗೆ ಪ್ರತೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪಂಜಿತ್ತೂರು
ಗುತ್ತು ರವಿರಾಜ ಶೆಟ್ಟಿ, ಉಪಾಧ್ಯಕ್ಷ ಕೆ. ಲೀಲಾಧರ ಶೆಟ್ಟಿ, ಕೋಶಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವೇಣುಗೋಪಾಲ ತಂತ್ರಿ, ಜೊತೆ ಕಾರ್ಯದರ್ಶಿ ಜಲಂಚಾರು ರಘುಪತಿ ತಂತ್ರಿ ಮತ್ತು ಸಮಿತಿಯ ಪ್ರಕಟನೆ ತಿಳಿಸಿದೆ.