ಬೆಂಗಳೂರು: ಮೊಬೈಲ್‌ಗಳನ್ನು ಕದ್ದು ಮಹಿಳೆಯರ ಮೊಬೈಲ್‌ಗೆ ಆಶ್ಲೀಲ ಚಿತ್ರಗಳನ್ನು ವಾಟ್ಸ್‌ಆ್ಯಪ್ ಮಾಡಿದ್ದ ಅಪ್ರಾಪ್ತನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ವರ್ತೂರು ನಿವಾಸಿಯಾದ ಹದಿನೇಳರ ಹರೆಯದ ಈತನ ಬಂಧನದಿಂದ ಆರು ಪ್ರಕರಣಗಳು ಬೆಳಕಿಗೆ ಬಂದಿದ್ದು, 17 ಮೊಬೈಲ್‌ಗಳು, ಎರಡು ಲ್ಯಾಪ್‌ಟಾಪ್, ಬೆಳ್ಳಿ ಆಭರಣ, ನಾಲ್ಕು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಆರೋಪಿಯು ಕೆಲ ದಿನಗಳ ಹಿಂದೆ ಎಚ್‌ಎಎಲ್ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ರಾತ್ರಿ ವೇಳೆ ಕಿಟಕಿಯಲ್ಲಿ ರಾಡ್ ಹಾಕಿ ಬಾಗಿಲು ತೆಗೆದು ಮನೆಯೊಳಗೆ ನುಗ್ಗಿದ್ದ. ಬಳಿಕ ಬೆಡ್‌ರೂಂನಲ್ಲಿ ಮಲಗಿದ್ದ ದಂಪತಿ ಬಳಿ ತೆರಳಿ ಮೊಬೈಲ್ ಕಳವು ಮಾಡಿ ಅಲ್ಲಿದ್ದ ವ್ಯಕ್ತಿಯ ಫೋಟೋ ಕ್ಲಿಕ್ಕಿಸಿದ್ದ. ಬಳಿಕ ಅಲ್ಲಿದ್ದ ಲಿಪ್‌ಸ್ಟಿಕ್ ತೆಗೆದುಕೊಂಡು “ಸರಿಯಾಗಿ ಮಲಗೋ ಗೂಬೆ’ ಎಂದು ಗೋಡೆಯ ಮೇಲೆ ಬರೆದು ಪರಾರಿಯಾಗಿದ್ದ. ಇಷ್ಟಾದರೂ ದಂಪತಿಗೆ ಎಚ್ಚರವಾಗಿರಲಿಲ್ಲ.
ಮಾರನೇ ದಿನ ಆ ವ್ಯಕ್ತಿಯ ಹೆಂಡತಿಗೆ ಅಶ್ಲೀಲ ಚಿತ್ರವನ್ನು ವಾಟ್ಸ್‌ಆ್ಯಪ್ ಕಳುಹಿಸಿದ್ದ. ಪತಿಯ ಮೊಬೈಲ್‌ನಿಂದ ಫೋಟೋ ಬಂದಿದ್ದರಿಂದ ಆಕೆ ವಿಚಲಿತರಾಗಿದ್ದರು. ಅಲ್ಲದೇ ಮೊಬೈಲ್ ಕದ್ದಿರುವ ವ್ಯಕ್ತಿಯ ಕೆಲಸವೇ ಇದು ಎಂಬ ನಿರ್ಧಾರಕ್ಕೆ ದಂಪತಿ ಬಂದಿದ್ದರು. ಬಳಿಕ ಠಾಣೆಗೆ ತೆರಳಿ ದೂರು ನೀಡಿದ್ದರು. ಮೊಬೈಲ್ ಜಾಡು ಹಿಡಿದು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗೆ ತಾಯಿ ಮಾತ್ರ ಇದ್ದು, ಆಕೆ ಮನೆಗೆಲಸ ಮಾಡುತ್ತಾರೆ.
ಈತನಿಗೆ ನಿರ್ದಿಷ್ಟ ಕೆಲಸವಿಲ್ಲ. ಕಳ್ಳತನವನ್ನೇ ಕಸುಬು ಮಾಡಿಕೊಂಡು ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ನಗ-ನಾಣ್ಯ, ದ್ವಿಚಕ್ರ ವಾಹನ ದೋಚುತ್ತಿದ್ದ. ಬಳಿಕ ಮಾರಾಟ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡಿ ಕಳೆಯುತ್ತಿದ್ದ. ಜತೆಗೆ ಕಾಮಚೇಷ್ಟೆಯನ್ನು ರೂಢಿಸಿಕೊಂಡಿದ್ದ. ಆರೋಪಿ ಕಳವು ಮಾಡಲು ಮಹಿಳಾ ಪಿಜಿಗಳು, ಹೆಂಗಸರಿರುವ ಮನೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಹಿಂದೆಯೂ ಕೆಲ ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ ಬಳಿಕವೂ ಕುಚೇಷ್ಟೆ ಮುಂದುವರಿಸಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.