Advertisement

ಮಟಾಶ್‌ಗೆ ಅಪ್ಪು ಸಾಂಗ್‌

11:08 AM Jun 18, 2018 | |

“ಲಾಸ್ಟ್‌ ಬಸ್‌’ ನಂತರ ನಿರ್ದೇಶಕ ಅರವಿಂದ್‌ “ಮಟಾಶ್‌’ ಚಿತ್ರ ಮಾಡುತ್ತಿರುವ ಬಗ್ಗೆ ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಬಹುತೇಕ ಹೊಸಬರ ಜತೆ “ಮಟಾಶ್‌’ ಮಾಡಿರುವ ಅರವಿಂದ್‌, ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಪುನೀತ್‌ ರಾಜಕುಮಾರ್‌ ಚಿತ್ರಕ್ಕೊಂದು ಹಾಡು ಹಾಡಿದ್ದಾರೆ. 

Advertisement

ಹೌದು, ಇದೇ ಮೊದಲ ಸಲ ಪುನೀತ್‌ ರಾಜಕುಮಾರ್‌ ಅವರು ಉತ್ತರ ಕರ್ನಾಟಕ ಭಾಷೆಯಲ್ಲಿ ಹಾಡಿದ್ದಾರೆ. ಈ ಹಾಡು ಚಿತ್ರದ ಆರಂಭದಲ್ಲೇ ಮೂಡಿಬರಲಿದೆ. ಚಿತ್ರದ ಕಲಾವಿದರನ್ನು ಪರಿಚಯಿಸುವ ಈ ಹಾಡಲ್ಲಿ, ಯುವ ಪೀಳಿಗೆ ಹೇಗೆಲ್ಲಾ ಹಣ ಮಾಡಲು ಕೆಲ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೆ, ಯಾವ ದಾರಿ ಹಿಡಿಯುತ್ತದೆ, ಬೆಟ್ಟಿಂಗ್‌, ಬಿಜಿನೆಸ್‌ ಹೀಗೆ ಹಲವು ವಿಧದ ದಾರಿಯಲ್ಲಿ ಸಾಗುತ್ತಾರೆ ಎಂಬ ಕುರಿತಾದ ಹಾಡಿಗೆ ಪುನೀತ್‌ ಧ್ವನಿಯಾಗಿದ್ದಾರೆ.

ಇತ್ತೀಚೆಗೆ ಆಕಾಶ್‌ ಸ್ಟುಡಿಯೋದಲ್ಲಿ ಹಾಡು ಹಾಡುವ ಮೂಲಕ ಮೊದಲ ಸಲ ಉತ್ತರ ಕರ್ನಾಟಕ ಭಾಷೆಯಲ್ಲಿ ಹಾಡಿದ ಖುಷಿಯಲ್ಲಿದ್ದಾರೆ. ಅಂದಹಾಗೆ, ಬಿಜಾಪುರದ ಸುನೀಲ್‌ ಕುಮಾರ್‌ ಸುಧಾಕರ್‌ ಅವರು ಬರೆದ “ಸಜ್ಜೆ ರೊಟ್ಟಿ ಚವಳಿಕಾಯಿ …’ ಎಂಬ ಗೀತೆಯನ್ನು ಹಾಡಿದ್ದಾರೆ. ನಿರ್ದೇಶಕ ಅರವಿಂದ್‌ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉಳಿದಂತೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರಕ್ಕೆ ಮಲ್ಲಿಕಾರ್ಜುನ್‌ ಸಂಭಾಷಣೆಗೆ ಸಾಥ್‌ ನೀಡಿದ್ದಾರೆ.

ಎಲ್ಲಾ ಸರಿ, “ಮಟಾಶ್‌’ ಅಂದರೇನು? “ಅಪನಗಧೀಕರಣ ಆಗಿದ್ದರ ಹಿಂದಿನ ಕಥೆಯೇ ಈ “ಮಟಾಶ್‌’ ಹಿನ್ನೆಲೆ’ ಎಂಬುದು ನಿರ್ದೇಶಕ ಅರವಿಂದ್‌ ಅವರ ಮಾತು. “ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇರಲಿವೆ. “ಲಾಸ್ಟ್‌ ಬಸ್‌’ನಲ್ಲಿ ನಟಿಸಿದ್ದ ಸಮರ್ಥ್ ನರಸಿಂಹರಾಜು, ಅನುಪಮ್‌ ಖೇರ್‌ ನಟನಾ ಶಾಲೆಯಲ್ಲಿ ತರಬೇತಿ ಪಡೆದಿರುವ ಯುವ ಪ್ರತಿಭೆ ಗಣೇಶ್‌, ವಿ. ಮನೋಹರ್‌, ರಾಘವೇಂದ್ರ ರಾಮಕೊಪ್ಪ , ಅಮೋಘ ಸೇರಿದಂತೆ ಇನ್ನಷ್ಟು ಹೊಸ ಮುಖಗಳು ಇಲ್ಲಿ ಕಾಣಿಸಿಕೊಂಡಿವೆ.

ಇದೊಂದು ಕಾಮಿಕಲ್‌ ಥ್ರಿಲ್ಲರ್‌. ಅಪನಗಧೀಕರಣ ನಂತರ ಆದಂತಹ ಸತ್ಯ ಘಟನೆಗಳ ಆಧಾರಿತ ಕಾಲ್ಪನಿಕ ಸಿನಿಮಾ ಇದು. ಆ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಅನುಕೂಲಕ್ಕೆ ಏನೆಲ್ಲಾ ಮಾಡಿದರು. ಯಾವುದನ್ನೆಲ್ಲಾ ಬಳಸಿಕೊಂಡರು ಎಂಬುದನ್ನು ಒಂದು ಯೂಥ್‌ಫ‌ುಲ್‌ ಸ್ಟೋರಿ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂಬುದು ಅರವಿಂದ್‌ ಮಾತು. ಚಿತ್ರಕ್ಕೆ ಗಿರೀಶ್‌ ಪಟೇಲ್‌, ಸತೀಶ್‌ ಪಾಟಕ್‌, ಚಂದ್ರಶೇಖರ್‌ ಜೊತೆಗೂಡಿ ಅರವಿಂದ್‌ ಕೂಡ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next