ಕಲಬುರಗಿ: ವೈದ್ಯಕೀಯ ಸೇವೆಯಲ್ಲಿ ಈಗಾಗಲೇ ಸಾಕಷ್ಟು ಮುಂಚೂಣಿಯಲ್ಲಿ ಇರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್‌ಡಿಬಿ) ಮಂಡಳಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕೊರೊನಾ ನಿಯಂತ್ರಣಕ್ಕೆ ಹಲ ವಾರು ನಿಟ್ಟಿನಲ್ಲಿ ಸ್ಪಂದಿಸುತ್ತಿದ್ದಾರೆ.
ಕೊರೊನಾ ಮೊದಲ ಅಲೆ ಬಂದ ಸಂದರ್ಭದಲ್ಲೇ ಇಲ್ಲಿನ ಗುಲ್ಬರ್ಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಧುನಿಕ ವೈದ್ಯಕೀಯ ಉಪಕರಣಗಳಿಗೆ ಸೂಕ್ತ ಅನುದಾನ, ಪ್ಲಾಸ್ಮಾ ಥೆರಪಿ, ಹೆಲ್ಪ್ ಲೈನ್ ಕಾರ್ಯಾರಂಭ ಸೇರಿದಂತೆ ಇತರ ವೈದ್ಯಕೀಯ ಸೇವೆಗಳಿಗೆ ಮುಂಚೂಣಿಯಾಗಿ ಆಸಕ್ತಿಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ತಮ್ಮ ತಂದೆ, ಮಾಜಿ ಶಾಸಕ ದಿ|ಚಂದ್ರಶೇಖರ ಪಾಟೀಲ ರೇವೂರ ಹೆಸರಿನ ಫೌಂಡೇಷನ್ ಮೂಲಕ ಉಚಿತ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಈ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳನ್ನು ಉಚಿತವಾಗಿ ಕರೆದುಕೊಂಡು ಬರಲಾಗುತ್ತಿದೆ ಹಾಗೂ ಬಿಡಲಾಗುತ್ತಿದೆ.
ಸೂಪರ್ ಮಾರ್ಕೆಟ್‌ದಲ್ಲಿರುವ ಆದರ್ಶ ಮೆಡಿಕಲ್ ಮೇಲ್ಮಹಡಿಯಲ್ಲಿ ಸಹೋದರ ಡಾ| ಅಲೋಕ ಸಿ. ಪಾಟೀಲ ಮುನ್ನಡೆಸುತ್ತಿರುವ ಆದರ್ಶ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿಸಿ ಅತ್ಯುತ್ತಮ ಚಿಕಿತ್ಸೆ ಕಲ್ಪಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಇವಿಷ್ಟೇ ಅಲ್ಲದೇ ನಿರಂತರವಾಗಿ ಅಧಿಕಾರಿಗಳ ಸಭೆ ನಡೆಸಿ, ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಆಕ್ಸಿಜೆನ್ -ಇಂಜೆಕ್ಷನ್ ಕೊರತೆ ಆಗದಂತೆ ಹಾಗೂ ಇತರೆ ವೈದ್ಯಕೀಯ ಸೇವೆ ಕಲ್ಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಜತೆಗೆ ಆಸ್ಪತ್ರೆಗಳಲ್ಲಿನ ರೋಗಿಗಳ ಸಂಬಂಧಿಕರಿಗೆ ಅನ್ನದಾಸೋಹ ಕಲ್ಪಿಸುತ್ತಿರುವ ಕಾರ್ಯ ಮಾದರಿಯಾಗಿದೆ.
ಕಳೆದ ಒಂದೂವರೆ ತಿಂಗಳಿಂದ ಕ್ಷೇತ್ರ ಬಿಟ್ಟು ಕದಲದೇ ನಿರಂತರವಾಗಿ ಸಭೆ ನಡೆಸುತ್ತಾ ಕೊವಿಡ್ ಕೇರ್ ಸೆಂಟರ್ ಸ್ಥಾಪನೆ, ನಗರದ ವಾರ್ಡ್‌ಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ, ಜನಜಾಗೃತಿ ಮೂಡಿಸಿರುವುದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ತೆರಳಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವೈದ್ಯಕೀಯ ಸೇವೆಗೆ ಕೆಕೆಆರ್‌ಡಿಬಿ ಹಣ ಅನುದಾನ ಒದಗಿಸಿದ್ದಲ್ಲದೇ, ಹಣ ಬಳಕೆಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿರುವುದು ಆರೋಗ್ಯ ಸುಧಾರಣೆ ಕಾರ್ಯಗಳಿಗೆ ಸ್ಫೂರ್ತಿಯಾಗಿದೆ ಎನ್ನಬಹುದಾಗಿದೆ. ಸತತ ಸಂಪರ್ಕ: ಒಂದು ದಿನ ಬಿಟ್ಟು ಒಂದು ದಿನ ಎನ್ನುವಂತೆ ಅಧಿಕಾರಿಗಳ ಸಭೆ ನಡೆಸಿ, ಕೊರೊನಾ ನಿಯಂತ್ರಣ ಹಾಗೂ ಪರಿಸ್ಥಿತಿ ಮಾಹಿತಿ ಪಡೆದು ಸೂಕ್ತ ಸಲಹೆ ನೀಡುತ್ತಿದ್ದಾರೆ. ಅಲ್ಲದೇ ಕೆಲ ಲೋಪದೋಷ ಪತ್ತೆ ಹಚ್ಚಿ, ಸೂಕ್ತ ನಿರ್ದೇಶನ ನೀಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಸತತವಾಗಿ ಸಂಬಂಧಪಟ್ಟವರೊಂದಿಗೆ ನಿರಂತರ ಸಂಪರ್ಕ ಹೊಂದಿ, ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.