ರಾಯಚೂರು: ವರನಟ ಡಾ|ರಾಜ್‌ಕುಮಾರ್ ರೀತಿಯಲ್ಲೇ ಅವರ ಮಗ ಪುನೀತ್ ರಾಜ್‌ಕುಮಾರ್ ಕೂಡ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಪರಮ ಭಕ್ತರಾಗಿದ್ದರು. 2020ರಲ್ಲಿ ನಡೆದ ರಾಯರ ಗುರುವೈಭವೋತ್ಸವಕ್ಕೆ ಆಗಮಿಸಿದ್ದ ಅವರು, ಗಾಯನ ಮಾಡಿ ಭಕ್ತಿ ಸಮರ್ಪಿಸಿದ್ದರು. ವರನಟ ಡಾ|ರಾಜ್ ಕುಮಾರ್ ಕುಟುಂಬಕ್ಕೂ ರಾಯರ ಮಠಕ್ಕೂ ಅವಿ ನಾಭಾವ ಸಂಬಂಧ ಎಂದರೆ ತಪ್ಪಾಗಲಿಕ್ಕಿಲ್ಲ.
ಡಾ| ರಾಜ್‌ಕುಮಾರ್ ರಾಯರ ಪಾತ್ರ ನಿಭಾಯಿಸಿದ ಮೇಲೆ ಮಠದ ಮೇಲಿನ ಒಲವು ಇನ್ನೂ ಹೆಚ್ಚಾಗಿತ್ತು. ಡಾ|ರಾಜ್‌ಕುಮಾರ್ ತರುವಾಯ ಅವರ ಮಕ್ಕಳಾದ ಡಾ|ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕೂಡ ಮಠಕ್ಕೆ ಸದಾ ಭೇಟಿ ನೀಡುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್ ಒಮ್ಮೆ ರಾಯರ ಮಠದಲ್ಲಿ ಉರುಳು ಸೇವೆ ಮಾಡಿ ಭಕ್ತಿ ಸಮರ್ಪಿಸಿದ್ದರು.
ಯಾವುದೇ ಸಿನಿಮಾಗಳು ಬಿಡುಗಡೆಯಾದಾಗ, ಶೂಟಿಂಗ್‌ನಿಂದ ಕೊಂಚ ವಿರಾಮ ಪಡೆದಾಗ ಅಥವಾ ಈ ಭಾಗದಲ್ಲಿ ಎಲ್ಲಿಯಾದರೂ ಶೂಟಿಂಗ್ ನಡೆ ದಾಗ ಪುನೀತ್ ರಾಜ್‌ಕುಮಾರ್ ಕಡ್ಡಾಯವಾಗಿ ಮಂತ್ರಾಲಯಕ್ಕೆ ಬಂದು ರಾ ಯರ ದರ್ಶನ ಪಡೆದು ಹೋಗುವ ಪರಿಪಾಟ ಇಟ್ಟುಕೊಂಡಿದ್ದರು. ಅವರ ಕೊನೆಯ ಸಿನಿಮಾ “ಯುವರತ್ನ’ ಬಿಡುಗಡೆಯಾದಾಗಲೂ ರಾಯರ ಸನ್ನಿ ಧಿಗೆ ಬಂದು ಮಂಚಾಲಮ್ಮದೇವಿ, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದ್ದರು.
ಗುರು ವೈಭವೋತ್ಸವದ ವೇಳೆ ತಮ್ಮ ಅನುಭವ ಹಂಚಿಕೊಂಡಿದ್ದ ಅಪ್ಪು, ನಾವು ಯಾವಾಗ ಮಂತ್ರಾಲಯಕ್ಕೆ ಬಂದರೂ ನಮ್ಮ ಮನೆಗೆ ಬಂದಂತೆ ಅನು ಭವ ವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಪ್ಪಾಜಿ ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆ ಯನ್ನು ತಿಳಿಸುತ್ತಿದ್ದರು. ಗುರುವಾರ ಬಂದರೆ ಸಾಕು ರಾಯರನ್ನು ನೆನಪಿಸುತ್ತಿದ್ದರು. ಮನೆಯ ಪೂಜಾ ಮಂದಿರದಲ್ಲಿ “ಪೂಜ್ಯಾಯ ರಾಘ ವೇಂದ್ರಾಯ..’ ಶ್ಲೋಕ ವನ್ನು ಪಠಿಸುವಂತೆ ಸೂಚಿಸುತ್ತಿದ್ದರು ಎಂದು ಸ್ಮರಿಸಿದ್ದರು ಪುನೀತ್.
ಇದನ್ನೂ ಓದಿ:- ಕನ್ನಡದ ಕಂದನಿಗೆ ಉದಯವಾಣಿ ಕಂಬನಿ
ಮೂರು ಭಕ್ತಿ ಗೀತೆ ಹಾಡುವ ಭರವಸೆ: ಮಂತ್ರಾಲಯದಲ್ಲಿ ನಡೆಯುವ ರಾಯರ ಆರಾಧನೆ ವೇಳೆ ಮೂರು ಭಕ್ತಿಗೀತೆಗಳನ್ನು ಹಾಡುವುದಾಗಿ ಅಪ್ಪು ಹೇಳಿದ್ದರು. ಆದರೆ, ವಿಧಿ ಆ ಮಾತನ್ನು ನಡೆಸಿಕೊಡಲು ಬಿಡಲಿಲ್ಲ. ರಾಯರ ವರ್ಧಂತ್ಯುತ್ಸವದ ವೇಳೆ ಆಗಮಿಸಿದ ಪುನೀತ್‌ರಾಜ್ ಕುಮಾರ್ ರನ್ನು ಸನ್ಮಾನಿಸಿದ್ದ ಶ್ರೀ ಮಠದ ಪೀಠಾಧಿ ಪತಿ ಶ್ರೀಸುಬುಧೇಂದ್ರ ತೀರ್ಥರು, ಡಾ| ರಾಜ್‌ಕುಮಾರ್ ಅವರು ರಚಿಸಿ, ಹಾಡಿದ ಹಾಡುಗಳನ್ನು ನೀವು ಹಾಡಿ ರಾಯರಿಗೆ ಗಾಯನ ಸೇವೆ ಸಲ್ಲಿಸಬೇಕು ಎಂದಿದ್ದರು. ಇದಕ್ಕೆ ಪುನೀತ್ ಕೂಡ ಒಪ್ಪಿದ್ದರು.
ಅಲ್ಲದೇ, ಕೂಡಲೇ ಮೈಕ್ ತೆಗೆದುಕೊಂಡು ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ’ ಹಾಡನ್ನು ಹಾಡಿ ಭಕ್ತಿ ಸಮರ್ಪಿಸಿದ್ದರು.
ಮಂತ್ರಾಲಯ ಮಠದ ಸುಬುಧೇಂದ್ರ ಶ್ರೀ ಸಂತಾಪ
ರಾಯಚೂರು: ನಟ ಪುನೀತ್‌ರಾಜ್ ಕುಮಾರ್ ನಿಧನಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.ಪುನೀತ್ ನಿಧನ ನಾಡಿನ ಜನತೆಗೆ ಮಾತ್ರವಲ್ಲದೇ ನಮಗೂ ಮಠದ ಅಸಂಖ್ಯ ಭಕ್ತರಿಗೂ ಅಪಾರ ನೋವುಂಟು ಮಾಡಿದೆ. ಅವರು ಮಠಕ್ಕೆ ಬಂದು ಹೋಗಿದ್ದು ಇವತ್ತಿಗೂ ಕಣ್ಣಿಗೆ ಕಟ್ಟಿದಂತೆ ಇದೆ.
ಅವರ ತಂದೆಯಂತೆ ಪುನೀತ್ ಕೂಡ ಸಾಕಷ್ಟು ಅಭಿಮಾನ ಗಳಿಸಿದ್ದರು. ಉತ್ತಮ ನಟನಾಗಿ ಪರಿಪೂರ್ಣತೆ ಹೊಂದಿದ್ದರು. ಕನ್ನಡ ಚಿತ್ರರಂಗ ಪರಿಪೂರ್ಣ ಯುವ ನಟನನ್ನು ಕಳೆದುಕೊಂಡಿದೆ. ಮಠಕ್ಕೆ ಬಂದಾಗ ತುಂಬಾ ಭಾವುಕರಾಗಿ ಭಕ್ತಿಗೀತೆ ಹಾಡಿದ್ದರು. ಮಠದಲ್ಲಿ ಭಕ್ತಿ ಸಂಗೀತ ನಡೆಸುವ ಬಗ್ಗೆಯೂ ತಿಳಿಸಿದ್ದರು ಎಂದು ಸ್ಮರಿಸಿದರು.
ಮಂತ್ರಾಲಯ ಮಠಕ್ಕೂ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೂ ಅನೇಕ ದಶಕಗಳ ನಂಟಿದೆ. ಪುನೀತ್ ಹುಟ್ಟುವ ಮುನ್ನವೇ ಅವರ ತಂದೆಯವರು ಮಠದ ಭಕ್ತರಾಗಿದ್ದರು. ರಾಜ್ ಕುಮಾರ್ ಅವರು ಹಾಗೂ ಮಕ್ಕಳಾದ ಶಿವಣ್ಣ, ರಾಘವೇಂದ್ರ, ಪುನೀತ್ ಸಾಮಾನ್ಯ ಭಕ್ತರಂತೆ ಮಠಕ್ಕೆ ಬಂದು ಹೋಗುತ್ತಿದ್ದರು. ಅವರ ಕುಟುಂಬಕ್ಕೆ ರಾಯರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶ್ರೀಗಳು ತಿಳಿಸಿದ್ದಾರೆ.