ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಜನರು ಅನುಭವಿಸುತ್ತಿರುವ ಕುಡಿಯುವ ನೀರಿನ ತೊಂದರೆ ಬಗೆಹರಿಯಲಿದೆ. ಜೊತೆಗೆ ದಿನದ 24 ಗಂಟೆ ಕಾಲ ನೀರು ಸಹ ದೊರೆಯಲಿದೆ.
ಹೌದು. ದಾವಣಗೆರೆಯಲ್ಲಿ ದಿನದ 24 ಗಂಟೆಯೂ ನೀರು ಸರಬರಾಜು ಮಾಡುವಂತಹ ಜಲಸಿರಿ ಯೋಜನೆಗೆ ಅತಿ ಅಗತ್ಯವಾಗಿದ್ದ ಬ್ಯಾರೇಜ್ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಹರಿಹರ ತಾಲೂಕಿನ ರಾಜನಹಳ್ಳಿ ಹತ್ತಿರ
ತುಂಗಭದ್ರಾ ನದಿಗೆ 97.74 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬ್ಯಾರೇಜ್ ಪರಿಣಾಮ ದಾವಣಗೆರೆ ಮಹಾನಗರಕ್ಕೆ ಅತಿ ಅಗತ್ಯವಾದ ನೀರು ದೊರೆಯಲಿದೆ. ಆ ನೀರು ದಿನದ 24 ಗಂಟೆಯೂ ಪೂರೈಕೆ ಆಗಲಿದೆ.
ಶಾಸಕ ಶಾಮನೂರು ಶಿವಶಂಕರಪ್ಪ ಗೃಹ ಕಚೇರಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಬ್ಯಾರೇಜ್ ನಿರ್ಮಾಣದ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಅಂತಿಮವಾಗಿ ಕಾಮಗಾರಿಗೆ ಮಂಜೂರಾತಿ ಸಹ ನೀಡಲಾಯಿತು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆ ನಗರದಲ್ಲಿ ನೀರಿನ ತೊಂದರೆ ನಿವಾರಿಸಲು ರಾಜನಹಳ್ಳಿ ಹತ್ತಿರ ತುಂಗಭದ್ರಾ ನದಿಗೆ 97.74 ಕೋಟಿ ವೆಚ್ಚದ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳುವಂತಾಗಬೇಕು. ಬ್ಯಾರೇಜ್ ನಿರ್ಮಿಸುವುದರಿಂದ ದಾವಣಗೆರೆ ನಗರಕ್ಕೆ 24 ಗಂಟೆ ನೀರು ಪೂರೈಸುವ ಜಲಸಿರಿ ಯೋಜನೆ ಸಬಲೀಕರಣಕ್ಕೆ ಸಹಾಯಕವಾಗಲಿದೆ. ಮುಂದಿನ ದಿನಗಳಲ್ಲಿ ನೀರಿನ ತೊಂದರೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಆಶಾದ್ ಆರ್.ಷರೀಫ್, ಮೇಯರ್ ಶೋಭಾ ಪಲ್ಲಾಗಟ್ಟೆ, ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಶಿವನಳ್ಳಿ ರಮೇಶ್, ಪಿ.ಎನ್. ಚಂದ್ರಶೇಖರ್, ಆಯುಕ್ತ ಮಂಜುನಾಥ್ ಬಳ್ಳಾರಿ, ಅಧೀಕ್ಷಕ ಅಭಿಯಂತರ ಎನ್. ಸತೀಶ್, ಸ್ಮಾರ್ಟ್‌ಸಿಟಿ ಯೋಜನೆಯ ಸೇವಾನಾಯ್ಕ, ಹೈಡೆಕ್ ಸಂಸ್ಥೆಯ ಅಧಿಕಾರಿ ವರ್ಗದವರು ಇದ್ದರು.