Advertisement

4 ಸಾವಿರ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ

06:00 AM Aug 16, 2018 | Team Udayavani |

ಬೆಂಗಳೂರು : ಹತ್ತು ಸಾವಿರ ಪದವೀಧರ ಶಿಕ್ಷಕರ ನೇಮಕ ಗೊಂದಲ ಬಗೆಹರಿಯುವ ಮುನ್ನವೇ ರಾಜ್ಯ ಸರ್ಕಾರ ಹೊಸದಾಗಿ ನಾಲ್ಕು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮೋದಿಸಿರುವುದು ಮತ್ತಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಸರ್ಕಾರಿ ಪ್ರಾಥಮಿಕ ಶಾಲೆಯ 6 ರಿಂದ 8ನೇ ತರಗತಿಯಲ್ಲಿ ಖಾಲಿ ಇರುವ 10 ಸಾವಿರ ಹುದ್ದೆಯ ಭರ್ತಿಗೆ 2016-17ನೇ ಸಾಲಿನಲ್ಲಿ ಅನುಮೋದನೆ ನೀಡಿ 2017ರ ಸೆಪ್ಟೆಂಬರ್‌ನಿಂದಲೇ ಪ್ರಕ್ರಿಯೆ ಆರಂಭವಾಗಿತ್ತು. ಜಿಲ್ಲಾ ಮಟ್ಟದಲ್ಲಿ ನೇಮಕಾತಿ ಪ್ರಾಧಿಕಾರ ರಚಿಸಿ, ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿ ಎರಡು ತಿಂಗಳು ಕಳೆದರೂ, ಸುಸೂತ್ರವಾಗಿ ಕೌನ್ಸೆಲಿಂಗ್‌ ನಡೆಸಲು ಸಾಧ್ಯವಾಗಿಲ್ಲ. ಅಂಕಗಳಲ್ಲಿ ಏರುಪೇರಾಗಿರುವುದನ್ನು ಸರಿಪಡಿಸುವಷ್ಟರಲ್ಲಿ ಕಟ್‌ಆಫ್ ಕಂಟಕ ಎದುರಾಗಿತ್ತು. ಕಟ್‌ಆಫ್ ಅಂಕ ಎಷ್ಟಿರಬೇಕು ಎಂಬ ವರದಿ ಇನ್ನೂ ಬಂದಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರ 2018-19ನೇ ಸಾಲಿಗೆ ಹೊಸದಾಗಿ 4 ಸಾವಿರ ಪದವೀಧರ ಶಿಕ್ಷಕರ ನೇಮಕಕ್ಕೆ ಆಗಸ್ಟ್‌ 14ರಂದು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಗಣಿತ ಮತ್ತು ವಿಜ್ಞಾನದ 4,233, ಆಂಗ್ಲ ಭಾಷೆಯ 4,531 ಹಾಗೂ ಸಮಾಜ ವಿಜ್ಞಾನದ 1,236 ಹುದ್ದೆ ಸೇರಿ 10 ಸಾವಿರ ಪದವೀಧರ ಶಿಕ್ಷಕ ಹುದ್ದೆಗೆ ಆರಂಭದಲ್ಲಿ ಹೊರಡಿಸಿದ್ದ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿತ್ತು. 1:2 ಅನುಪಾತದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಸಂಖ್ಯೆ ಹುದ್ದೆಗಿಂತಲೂ ಕಡಿಮೆ ಇದೆ.  ಹತ್ತು ಸಾವಿರ ಹುದ್ದೆಗಳನ್ನೇ ಸಮರ್ಪಕವಾಗಿ ಭರ್ತಿ ಮಾಡಿಕೊಳ್ಳಲಾಗದ ಸರ್ಕಾರ  ಹೊಸದಾಗಿ 4 ಸಾವಿರ ಹುದ್ದೆಗೆ ಅನುಮತಿ ನೀಡಿರುವುದು ಅಭ್ಯರ್ಥಿಗಳಲ್ಲಿ ಇನ್ನಷ್ಟು ಆಂತಕ ಹುಟ್ಟುಹಾಕಿದೆ.

10 ಸಾವಿರ ಹುದ್ದೆಗೆ 50,633 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು, ಅದರಲ್ಲಿ 1:2 ಅನುಪಾತದ ಪಟ್ಟಿಯಲ್ಲಿ 2264 ಅಭ್ಯರ್ಥಿಗಳು ಅರ್ಹರಾಗಿದ್ದರು. ಉಳಿದ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಯಾವುದೇ ತೀರ್ಮಾನ ಸರ್ಕಾರ ತೆಗೆದುಕೊಂಡಿಲ್ಲ. ಈಗಾಗಲೇ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳನ್ನೇ ಹೊಸ ಹುದ್ದೆಗೆ ಪರಿಗಣಿಸಲಾಗುತ್ತದೆಯೋ ಅಥವಾ ಹೊಸದಾಗಿ ಅರ್ಜಿ ಕರೆಯುತ್ತಾರೋ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಮೊದಲು 10 ಸಾವಿರ ಹುದ್ದೆ ಭರ್ತಿ ಮಾಡಿಕೊಂಡ ನಂತರ ಹೊಸ ಹುದ್ದೆ ಭರ್ತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಶಿಕ್ಷಕ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಇಲಾಖೆಯಿಂದ ಪ್ರಸ್ತಾವನೆ 
2018ರ ಮಾರ್ಚ್‌ಗೆ ನಿವೃತ್ತಿ ಹೊಂದುವ ಶಿಕ್ಷಕರು ಮತ್ತು ಖಾಲಿ ಇರುವ ಜಿಲ್ಲಾವಾರು ಹುದ್ದೆಗೆ ಅನುಗುಣವಾಗಿ 2017-18 ಹಾಗೂ 2018-19ನೇ ಸಾಲಿಗೆ ತಲಾ 4 ಸಾವಿರ ಪದವೀಧರ ಶಿಕ್ಷಕರ ನೇಮಕಕ್ಕೆ ಅನುಮತಿ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದನ್ನು ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಆರ್ಥಿಕ ಇಲಾಖೆಯ ಅನುಮತಿ ಪಡೆದು ನೇಮಕಾತಿಗೆ ಅನುಮೋದನೆ ನೀಡಿದೆ. 

Advertisement

ಕಟ್‌ಆಫ್ ಕಂಟಕ 
ಪದವೀಧರ ಶಿಕ್ಷಕರ ನೇಮಕಾತಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪೇಪರ್‌ 2 ಮತ್ತು 3ರಲ್ಲಿ ಕ್ರಮವಾಗಿ 50 ಮತ್ತು 60 ನಿರ್ದಿಷ್ಟ ಅಂಕ (ಕಟ್‌ ಆಫ್) ಪಡೆದವರು ಮಾತ್ರ ಅರ್ಹರು ಎಂದು ಸರ್ಕಾರ ಈ ಹಿಂದೆ ತಿಳಿಸಿತ್ತು. ನಂತರ ಕಟ್‌ ಆಫ್ ಅಂಕವನ್ನೇ ರದ್ದು ಮಾಡಲಾಗಿತ್ತು¤. ಇದಕ್ಕೆ ಪದವಿ – ನಾನ್‌ ಸೆಮಿಸ್ಟರ್‌ ಅಭ್ಯರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಟ್‌ ಆಫ್ ಅಂಕವನ್ನು ಪುನರ್ನಿಗದಿ ಮಾಡಲಾಗಿತ್ತು. ಇಷ್ಟಾದರೂ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಟ್‌ ಆಫ್ ಅಂಕ ನಿಗದಿ ಮಾಡಲು ಎನ್‌ಐಸಿ (ರಾಷ್ಟ್ರೀಯ ಮಾಹಿತಿ ದತ್ತಾಂಶ ಕೇಂದ್ರ)ಯಿಂದ ವರದಿ ಕೇಳಲಾಗಿದೆ.

ನಾಲ್ಕು ಸಾವಿರ ಪದವೀಧರ ಶಿಕ್ಷಕರ ನೇಮಕಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕಡತಕ್ಕೆ ಆರ್ಥಿಕ ಇಲಾಖೆಯ ಒಪ್ಪಿಗೆ ಸಿಕ್ಕಿರುವ ಮಾಹಿತಿ ಇದೆ. ಆದರೆ, ಸರ್ಕಾರದ ಅನುಮೋದನೆ ಆದೇಶ ಇನ್ನೂ ಸಿಕ್ಕಿಲ್ಲ.
– ಬಿ.ಕೆ.ಬಸವರಾಜ, ನಿರ್ದೇಶಕ, ಪ್ರಾಥಮಿಕ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next