Advertisement

ಲಂಬಾಣಿ ಭಾಷೆಗೆ ಮಾನ್ಯತೆ ನೀಡಿ

10:13 AM Aug 28, 2017 | Team Udayavani |

ಕಲಬುರಗಿ: ಲಂಬಾಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು
ಗುಲಬರ್ಗಾ ವಿವಿ ಅಂಬೇಡ್ಕರ್‌ ಭವನದಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ಬಂಜಾರಾ ಯುವ ಚಿಂತನ ಶಿಬಿರದ
ಸಮಾರೋಪ ಸಮಾರಂಭದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯದಲ್ಲಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕುವಂತೆ ಒತ್ತಾಯಿಸಿ ಸಹಿ ಸಂಗ್ರಹ ಮತ್ತು ಪತ್ರ ಚಳವಳಿ ನಡೆಸುವುದು. ಬಂಜಾರಾ ಸಮಾಜಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆ ಸೇರಿದಂತೆ ವಿವಿಧ ನಿರ್ಣಯ ಕೈಗೊಳ್ಳಲಾಯಿತು. ಗುಲಬರ್ಗಾ ವಿವಿಯ ಸಂತ ಸೇವಾಲಾಲ ಅಧ್ಯಯನ ಪೀಠ, ಪರ್ಯಾಯ ಸಮಾಜ ಕಾರ್ಯ ಮಹಾವಿದ್ಯಾಲಯ, ಬೆಂಗಳೂರಿನ ಹಮ್‌ ಗೋರ್‌ ಕಟಮಾಳ್ಳೋ ಕರ್ನಾಟಕ ಸಂಘಟನೆ ಆಶ್ರಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ಡಾ| ಅಂಬೇಡ್ಕರ ಸ್ಮರಣಾರ್ಥ ಶಿಬಿರದಲ್ಲಿ ದೇಶವ್ಯಾಪಿ ನೆಲೆಸಿರುವ ಬಂಜಾರಾ ಸಮುದಾಯದವರ ರಾಷ್ಟ್ರವ್ಯಾಪಿ ಸಮೀಕ್ಷೆ ಅಗತ್ಯ ಎಂದು ಶಿಬಿರ ಪ್ರತಿಪಾದಿಸಿತು. ಸಂಘಟಕ ಅನಂತನಾಯಕ ಮಾತನಾಡಿ, ಅಲೆಮಾರಿಗಳಾಗಿರುವ ಬಂಜಾರಾ ಸಮುದಾಯದ ಜನರನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ತರುವ ಉದ್ದೇಶ ಮತ್ತು ವಿಶಿಷ್ಟ ಸಂಸ್ಕೃತಿಯಿರುವ ಸಮುದಾಯದಲ್ಲಿ ಸಂಘಟನೆ ಮತ್ತು ಒಗ್ಗಟ್ಟು ತರುವುದು ಶಿಬಿರದ ಉದ್ದೇಶವಾಗಿದೆ ಎಂದರು. ಭಾಷಾ ಸಮಸ್ಯೆ, ಸಂಘಟನೆ, ನಿರುದ್ಯೋಗ, ಸಾಮಾಜಿಕ ಜಾಲತಾಣ, ನೌಕರರ ಸಮಸ್ಯೆ, ಮಾಧ್ಯಮ, ಉದ್ಯೋಗಾವಕಾಶ, ಮಹಿಳಾ ಸಬಲೀಕರಣ ಇತ್ಯಾದಿ ಜ್ವಲಂತ ವಿಷಯಗಳ ಬಗ್ಗೆ ರಮೇಶ ಜಾಧವ್‌, ಡಾ| ಶಾರದಾ ಜಾಧವ್‌, ಖಂಡ್ಯಾ ನಾಯಕ, ಗುರು ಚವ್ಹಾಣ, ಡಾ|ಹರಿಶ್ಚಂದ್ರ, ಪ್ರತಿಮಾ ಕೆ.ಆರ್‌., ಮಂಜುನಾಥ, ಮಕ್ತುಂಬಿ, ನಾಗರಾಜ ಗೋಷ್ಠಿಗಳಲ್ಲಿ ವಿಷಯ ಮಂಡಿಸಿದರು. ಶಿಬಿರಾರ್ಥಿ ಬಾಬಿ ಎಂ. ಜಾಧವ್‌ ಮಾತನಾಡಿ, ಬಂಜಾರಾ ಜನಾಂಗದ ಮೂಲ, ಲಮಾಣಿ ಮಾರ್ಗಗಳು, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಂಜಾರಾ ಜನಾಂಗದ ಕೊಡುಗೆ, ಬಂಜಾರರ ಮೌಖೀಕ ಸಾಹಿತ್ಯ, ಸಂಸ್ಕೃತಿ, ಕಲೆ, ಆಧುನಿಕ ಆಯಾಮಗಳನ್ನು ತಿಳಿದುಕೊಳ್ಳಲು ಶಿಬಿರ ಅವಕಾಶ ಕಲ್ಪಿಸಿತು. ಆಲ್‌ ಇಂಡಿಯಾ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ ರಾಠೊಡ, ಸಮಾಜದ ಪ್ರಮುಖರಾದ ಇಂದ್ರನಾಯಕ, ಪಿ.ಜಿ.ರಾಠೊಡ, ಡಾ| ಆನಂದ ನಾಯಕ,, ಮಹೇಶ ರಾಠೊಡ, ಸಂತೋಷ ರಾಠೊಡ, ಶಿವರಂಜನ ಸತ್ಯಂಪೇಟ್‌ ಹಾಗೂ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next