Advertisement

ವ್ಯಾಪ್ತಿ ಮೀರಿ ಟೆಂಡರ್‌ಗೆ ಅನುಮೋದನೆ

12:21 PM Nov 05, 2018 | |

ಬೆಂಗಳೂರು: ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸ್ಥಾಪಿಸಿದ 13 ಬಯೋ ಮಿಥನೈಸೇಷನ್‌ ಘಟಕಗಳ ನಿರ್ಮಾಣಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ನಿಗದಿತ ದರಕ್ಕಿಂತಲೂ ಹೆಚ್ಚಿನ ಮೊತ್ತ ಪಾವತಿಸಿದ್ದು, ಹಿಂದಿನ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್‌ಗೆ ಅನುಮೋದನೆ ನೀಡುವುದು ಬಯಲಾಗಿದೆ.

Advertisement

ಹಸಿ ತ್ಯಾಜ್ಯ ಸಂಸ್ಕರಣೆಯಿಂದ ವಿದ್ಯುತ್‌ ಉತ್ಪಾದಿಸಿ ಬೀದಿ ದೀಪಗಳಿಗೆ ಬಳಸುವ ಉದ್ದೇಶದಿಂದ ನಗರದ 13 ಕಡೆಗಳಲ್ಲಿ ಬಯೋ ಮಿಥನೈಸೇಷನ್‌ ಘಟಕಗಳನ್ನು ನಿರ್ಮಿಸಲು ಪಾಲಿಕೆ ನಿರ್ಧರಿಸಿತ್ತು. ಆದರೆ, ಘಟಕಗಳ ನಿರ್ಮಾಣ ಹಾಗೂ ನಿರ್ವಹಣೆ ಮೊತ್ತ ಹೆಚ್ಚಿಸಿದ ಬಳಿಕ ಸರ್ಕಾರದ ಗಮನಕ್ಕೆ ತರದೆ ಬಿಬಿಎಂಪಿ ಆಯುಕ್ತರು ಕಾರ್ಯಾಧಿಕಾರ ಮೀರಿ ಟೆಂಡರ್‌ಗೆ ಅನುಮೋದನೆ ನೀಡಿರುವುದು ಲೆಕ್ಕಪರಿಶೋಧನಾ ವರದಿಯಲ್ಲಿ ಪತ್ತೆಯಾಗಿದೆ.

ಮಂಡೂರಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಅಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆ ವೇಳೆ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ನಗರದ 13 ಕಡೆಗಳಲ್ಲಿ ನಿತ್ಯ 5 ಟನ್‌ ಹಸಿ ತ್ಯಾಜ್ಯ ಸಂಸ್ಕರಣೆ ಮಾಡುವ ಘಟಕಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿತ್ತು. ಅದರಂತೆ ಪ್ರತಿ ಘಟಕ ನಿರ್ಮಾಣ ಹಾಗೂ ನಿರ್ವಹಣೆಗೆ ಪಾಲಿಕೆ 65 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ಪಡೆದಿತ್ತು. 

ಎರಡು ಬಾರಿ ಟೆಂಡರ್‌ ಕರೆದು ಮೂರನೇ ಬಾರಿ ಬೆಂಗಳೂರಿನ ಅಶೋಕ್‌ ಬಯೋ ಗ್ರೀನ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಪುಣೆಯ ಮೈಲೆಮ್‌ ಎಂಜಿನಿಯರ್ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ದರ ಸಂಧಾನದ ಬಳಿಕ ಪ್ರತಿ ಘಟಕ ನಿರ್ಮಾಣ ಹಗೂ ಮೂರು ವರ್ಷಗಳ ನಿರ್ವಹಣೆಗೆ 1.25 ಕೋಟಿ ರೂ.ಗಳಿಗೆ ಟೆಂಡರ್‌ ಅಂತಿಮಗೊಳಿಸಿದೆ. 

ಅಂದಾಜಿಗಿಂತಲೂ ಶೇ.57.30ರಷ್ಟು ಅಧಿಕ ದರ ನೀಡಿರುವುದು ಅವಾಸ್ತವಿಕವಾಗಿದ್ದು, ಯೋಜನಾ ಮೊತ್ತ ಹೆಚ್ಚಿಸಿರುವ ಕುರಿತು ಸರ್ಕಾರಕ್ಕೆ ಗಮನಕ್ಕೆ ತರದೆ ಆಯುಕ್ತರ ಹಂತದಲ್ಲಿಯೇ ಟೆಂಡರ್‌ ಅನುಮೋದಿಸಿ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿದೆ. ಬಿಬಿಎಂಪಿ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್‌ಗೆ ಅನುಮೋದಿಸಿದ್ದಾರೆ ಎಂದು 2015-16ನೇ ಸಾಲಿನ ಲೆಕ್ಕಪರಿಶೋಧನೆ ವರದಿಯಲ್ಲಿ ಉಲ್ಲೇಖೀಸಲಾಗಿದೆ. 

Advertisement

ನಿಯಮಗಳ ಉಲ್ಲಂಘನೆ: 13 ಬಯೋ ಮಿಥನೈಸೇಷನ್‌ ಘಟಕಗಳ ನಿರ್ಮಾಣ ಕಾಮಗಾರಿ ಹೆಚ್ಚು ಸಿವಿಲ್‌ ಕಾಮಗಾರಿಗಳಿಂದ ಕೂಡಿದೆ. ಆದರೆ, ಬಿಲ್ಲಿನಲ್ಲಿ ಕಾರ್ಮಿಕ ಕಲ್ಯಾಣ ನಿಧಿ ಸೆಸ್‌ ಹಾಗೂ ಗುತ್ತಿಗೆದಾರರ ಕಲ್ಯಾಣ ನಿಧಿ ಸೆಸ್‌ಗಳನ್ನು ಕ್ರಮವಾಗಿ ಶೇ.1 ಹಾಗೂ ಶೇ.0.1ರಷ್ಟು ಕಡಿತಗೊಳಿಸಿಲ್ಲ. ಇದರೊಂದಿಗೆ ಗುತ್ತಿಗೆದಾರರು ನಿಗದಿತ ಅವಧಿ ಅಂದರೆ 180 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೂ, ಗುತ್ತಿಗೆ ನಿಯಮಗಳ ಪ್ರಕಾರ ಕ್ಲಾಸ್‌ 39.1 ಅನುಗುಣವಾಗಿ ಲಿಕ್ವಿಡೇಟೆಡ್‌ ಡ್ಯಾಮೇಜ್‌ಗಳನ್ನು ಗುತ್ತಿಗೆದಾರರಿಗೆ ಪಾವತಿಸಿರುವ ಬಿಲ್‌ಗ‌ಳಲ್ಲಿ ಕಡಿತಗೊಳಿಸಿಲ್ಲ ಎಂದು ವರದಿ ತಿಳಿಸಿದೆ. 

ಮೂಲ ದಾಖಲೆ ನೀಡದ ಅಧಿಕಾರಿಗಳು: ಈ ಎಲ್ಲ ಅಂಶಗಳು ಪಾವತಿ ಕಡತಗಳಲ್ಲಿ ಲಗತ್ತಿಸಿರುವ ಮೂಲ ಕಡತದ ಟಿಪ್ಪಣಿ ಹಾಳೆಗಳ ನಕಲು ಪ್ರತಿಳನ್ನು ಪರಿಶೀಲಿಸಿ ಪಟ್ಟಿ ಮಾಡಲಾಗಿದ್ದು, ಪಾಲಿಕೆಯ ಅಧಿಕಾರಿಗಳು ಲೆಕ್ಕಪರಿಶೋಧನೆಯ ವೇಳೆ ಮೂಲ ಕಡತಗಳನ್ನು ಒದಗಿಸಿಲ್ಲ ಎಂದು ತಿಳಿಸಿರುವ ವರದಿಯು, ಹೆಚ್ಚುವರಿ ಮೊತ್ತ ನೀಡಿರುವ ಬಗ್ಗೆ ಸೂಕ್ತ ಸಮಜಾಯಿಷಿಯನ್ನು ಕೋರಿದರೂ ಈ ಬಗ್ಗೆ ಯಾವುದೇ ವಿವರಣೆ ನೀಡಿದಿರುವುದರಿಂದ ಈ ಬಾಬಿ¤ನಲ್ಲಿ ಈ ಎರಡೂ ಸಂಸ್ಥೆಗಳಿಗೆ ಪಾವತಿಸಿರುವ ಒಟ್ಟು ಮೊತ್ತ 6,77,12,871 ರೂ.ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ ಎಂದು ತಿಳಿಸಿದೆ.

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next