Advertisement

ಅಭಿವೃದ್ಧಿಗೆ 209.8 ಎಕರೆ ನೀಡಲು ಒಪ್ಪಿಗೆ

03:20 PM Aug 05, 2018 | |

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ರಸ್ತೆ ಅಗಲೀಕರಣ, ರೈಲ್ವೆ ಅಂಡರ್‌ಪಾಸ್‌, ಮೇಲ್ಸೇತುವೆ, ಎಲೆವೇಟೆಡ್‌ ಕಾರಿಡಾರ್‌ ಮತ್ತಿತರ ಹತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ 209.8 ಎಕರೆ ಜಮೀನು ಬಿಟ್ಟುಕೊಡಲು ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಶನಿವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್‌, ಸಂಚಾರ ದಟ್ಟಣೆ ನಿವಾರಣೆ ಕುರಿತ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಂಬಂಧ ತಕ್ಷಣ ಜಮೀನು ನೀಡಲಾಗುತ್ತಿದೆ. ಅದಕ್ಕೆ ಬದಲಾಗಿ ರಕ್ಷಣಾ ಸಚಿವಾಲಯ ಬಿಟ್ಟುಕೊಡುವ ಜಮೀನಿಗೆ ಸಮಾನ ಮೌಲ್ಯದ ಪರ್ಯಾಯ ಭೂಮಿಯನ್ನು ರಾಜ್ಯ ಸರ್ಕಾರ ನೀಡಬೇಕು ಎಂಬ ಷರತ್ತಿನ ಮೇಲೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಒಟ್ಟು ಹತ್ತು ಯೋಜನೆಗಳ ಪೈಕಿ ಎಂಟು ಯೋಜನೆಗಳಿಗೆ ಶಾಶ್ವತವಾಗಿ ಜಮೀನು ಬಿಬಿಎಂಪಿಗೆ ವರ್ಗಾವಣೆ ಮಾಡಲಾಗುತ್ತಿದ್ದು ಎರಡು ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆಗಳಿಗೆ ಲೈಸೆನ್ಸ್‌ ಆಧಾರದ ಮೇಲೆ ಭೂಮಿ ನೀಡಲು ಅನುಮತಿ ನೀಡಲಾಗಿದೆ ಎಂದರು.

ಜಮೀನು ಬಳಕೆಗೆ ಅವಕಾಶ ಹಾಗೂ ಪರ್ಯಾಯ ಜಮೀನು ಹಸ್ತಾಂತರ ಮತ್ತಿತರ ವಿಚಾರಗಳ ಚರ್ಚೆ ಮಾತುಕತೆಗೆ ಪರಿಹಾರಕ್ಕೆ ಸರ್ಕಾರ, ಸಚಿವಾಲಯದ ಅಧಿಕಾರಿಗಳಿರುವ ಕಾರ್ಯಪಡೆ ರಚಿಸಲಾಗುವುದು ಎಂದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಬಿಬಿಎಂಪಿ ಮೇಯರ್‌ ಆರ್‌.ಸಂಪತ್‌ರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಯಾವ್ಯಾವ ಯೋಜನೆಗೆ ಎಷ್ಟೆಷ್ಟು ಜಮೀನು 
* ಈಜಿಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆ ವರೆಗೆ ರಸ್ತೆ ನಿರ್ಮಾಣಕ್ಕೆ 21,600 ಚ. ಮೀ. (133.04 ಕೋಟಿ ರೂ. ಮೌಲ್ಯ).
* ಬ್ಯಾಟರಾಯನಪುರದ ವಾರ್ಡ್‌ 7 ರಿಂದ ಎನ್‌ಎಚ್‌ 7ಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ 3,790 ಚ. ಮೀ. (9.55 ಕೋಟಿ ರೂ. ಮೌಲ್ಯ).
* ವಾರ್ಡ್‌ ನಂಬರ್‌ 8ರ ಅಮೊ ಲೇಔಟ್‌ ಮೂಲಕ ಹೆಬ್ಟಾಳ ಸರೋವರ ಲೇಔಟ್‌ನಿಂದ ಎನ್‌ಎಚ್‌ 7 ಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ 2003.88 ಚ. ಮೀ. (4.73 ಕೋಟಿ ರೂ.ಮೌಲ್ಯ).
* ಹೊಸೂರು ಲಸ್ಕರ್‌ ರಸ್ತೆ ವಿಸ್ತರಣೆಗೆ 10,637 ಚ ಮೀ. (103.92 ಕೋಟಿ ರೂ. ಮೌಲ್ಯ).
* ಹಾಸ್ಮಾಟ್‌ ಆಸ್ಪತ್ರೆಯಿಂದ ವಿವೇಕನಗರ ಮೊದಲ ಮುಖ್ಯರಸ್ತೆ ವರೆಗಿನ ಅಗರ ರಸ್ತೆ ವಿಸ್ತರಣೆಗೆ 1,699 ಚ. ಮೀ. (8.78 ಕೋಟಿ ರೂ. ಮೌಲ್ಯ).
* ಅಗರಂ ರಸ್ತೆ ವಿಸ್ತರಣೆಗೆ 331.72 ಚ. ಮೀ. (1.83 ಕೋಟಿ ರೂ.ಮೌಲ್ಯ).
* ಕಾವಲ್‌ ಭೈರಸಂದ್ರ ಮುಖ್ಯರಸ್ತೆಯಿಂದ ಮೋದಿ ಗಾರ್ಡನ್‌ ವರೆಗೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ 4,604.93 ಚ. ಮೀ. (15.36 ಕೋಟಿ ರೂ.ಮೌಲ್ಯ).
* ಈಜಿಪುರ ಮುಖ್ಯರಸ್ತೆ  ಒಳವರ್ತುಲ ರಸ್ತೆ ಜಂಕ್ಷನ್‌, ಸೋನಿ ವರ್ಲ್ಡ್ ಜಂಕ್ಷನ್‌, ಕೇಂದ್ರೀಯ ವಿದ್ಯಾಲಯ ಜಂಕ್ಷನ್‌, ಕೋರಮಂಗಲದಲ್ಲಿ ಎಲೆವೇಟೆಡ್‌ ಕಾರಿಡಾರ್‌ ಯೋಜನೆಗೆ 497.90 ಚ. ಮೀ. (4.88 ಕೋಟಿ ರೂ.ಮೌಲ್ಯ).

Advertisement

ಲೈಸೆನ್ಸ್‌ ಆಧಾರದ ಅನುಮತಿ
* ಬಾಣಸವಾಡಿಯ ಮಾರುತಿ ಸೇವಾನಗರದ ಬಳಿ ಹೆಚ್ಚುವರಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 446.85 ಚ. ಮೀ .
* ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 10,207.26 ಚ. ಮೀ. 

ಅತಿಕ್ರಮಣ ಹತ್ತಿಕ್ಕಲಾಗುತ್ತಿದೆ: ಸುದ್ದಿಗೋಷ್ಠಿಯಲ್ಲಿ ರಫೈಲ್‌ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಎಚ್‌ಎಎಲ್‌ಗೆ ಹಿನ್ನಡೆಯಾಗಿದೆಯೇ? ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಕೇಳಿದಾಗ, ಸ‌ಂಸತ್‌ ಅ ಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಡೆಯುತ್ತಿರುವ ಅತಿಕ್ರಮಣ ಪ್ರಯತ್ನವನ್ನು ಹತ್ತಿಕ್ಕಲಾಗುತ್ತಿದೆ” ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜು.18 ರಂದು ದಿಲ್ಲಿಯಲ್ಲಿ ಭೇಟಿ ಮಾಡಿ ತಾವು ಮಾಡಿದ್ದ ಮನವಿಯಂತೆ ರಕ್ಷಣಾ ಸಚಿವರು ಅ ಧಿಕಾರಿಗಳೊಂದಿಗೆ ಆಗಮಿಸಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಿದ್ದಾರೆ. ಇದರೊಂದಿಗೆ ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಕಳೆದ ನಾಲ್ಕೈದು ವರ್ಷಗಳಿಂದ ಎದುರಾಗಿದ್ದ ತೊಡಕು ನಿವಾರಣೆಯಾಗಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ 

Advertisement

Udayavani is now on Telegram. Click here to join our channel and stay updated with the latest news.

Next