Advertisement

ವಿವಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ

06:00 AM Feb 22, 2018 | Team Udayavani |

ವಿಧಾನ ಪರಿಷತ್ತು: ವಿಶ್ವವಿದ್ಯಾಲಯಗಳ ಕುಲಪತಿ ನೇಮಕಾತಿ ಹಾಗೂ ಆಡಳಿತದ ಮೇಲೆ ಸರ್ಕಾರ ಹಿಡಿತ ಸಾಧಿಸುವ ಅಂಶಗಳನ್ನು ಒಳಗೊಂಡ “ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ’ಕ್ಕೆ ಮೇಲ್ಮನೆಯಲ್ಲಿ ಬುಧವಾರ ಅನುಮೋದನೆ ದೊರೆಯಿತು.

Advertisement

ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ರಾಜ್ಯಪಾಲರಿಗೆ ಎರಡನೇ ಬಾರಿ ಶಿಫಾರಸು ಮಾಡುವ ಹೆಸರು ತಿರಸ್ಕರಿಸಲು ಅವಕಾಶ ಇಲ್ಲದಿರುವಂತೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವಂತಹ ಅಂಶವೂ ವಿಧೇಯಕದಲ್ಲಿದೆ.

ಈಗಿರುವಂತೆ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ರಾಜ್ಯ ಸರ್ಕಾರ ಮೂರು ಮಂದಿಯ ಹೆಸರು ಶಿಫಾರಸು ಮಾಡುವ ಬದಲಿಗೆ ಕೇವಲ ಒಬ್ಬರ ಹೆಸರು ಶಿಫಾರಸಿಗೆ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಆ ಹೆಸರನ್ನು ರಾಜ್ಯಪಾಲರು ಮೊದಲ ಬಾರಿ ತಿರಸ್ಕರಿಸಿದರೂ ಕಾರಣ ನಮೂದಿಸಬೇಕು. ಎರಡನೇ ಬಾರಿ ಸರ್ಕಾರ ಅದೇ ಹೆಸರು ಶಿಫಾರಸು ಮಾಡಿದರೆ, ರಾಜ್ಯಪಾಲರು ಮತ್ತೆ ವಾಪಸ್‌ ಕಳುಹಿಸುವಂತಿಲ್ಲ. ಅಲ್ಲದೇ 30 ದಿನಗಳ ಬಳಿಕ ಅನುಮೋದನೆಯಾಗಿದೆ ಎಂದು ಪರಿಗಣಿಸುವ ಅಂಶವೂ ತಿದ್ದುಪಡಿ ವಿಧೇಯಕದಲ್ಲಿದೆ.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಂಡಿಸಿದ ವಿಧೇಯಕ ಕುರಿತು ಬುಧವಾರ ಸಾಕಷ್ಟು ಚರ್ಚೆ ನಡೆಯಿತು. ಸಭಾಪತಿ ಸೇರಿದಂತೆ ಬಹುತೇಕರು ತಿದ್ದುಪಡಿ ವಿಧೇಯಕವನ್ನು ಸ್ವಾಗತಿಸಿದರೆ ರಾಜ್ಯಪಾಲರ ಅಧಿಕಾರ ಮೊಟಕಾಗಿದೆ ಎಂಬ ಅಪಸ್ವರವೂ ಕೇಳಿಬಂತು. ಆದರೆ, ಸಚಿವರು ಇದನ್ನು ಅಲ್ಲಗಳೆದು, ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿಲ್ಲ. ಸುಗಮ ಆಡಳಿತ, ಪಾರದರ್ಶಕತೆಗೆ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು. ಬಳಿಕ ಸದನ ಅನುಮೋದನೆ ನೀಡಿತು.

ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲೇ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿತ್ತು. ವಿಧಾನಪರಿಷತ್‌ನಲ್ಲಿ ಚರ್ಚೆ ನಡೆದ ಬಳಿಕ ಸದನ ಸಮಿತಿ ರಚನೆಯಾಗಿ ಅದರ ವರದಿ ಅಂಶಗಳನ್ನು ಒಳಗೊಂಡ ತಿದ್ದುಪಡಿ ವಿಧೇಯಕಕ್ಕೆ ಮೇಲ್ಮನೆ ಬುಧವಾರ ಒಪ್ಪಿಗೆ ನೀಡಿತು.

Advertisement

ಏನೇನು ಸಲಹೆಗಳು ಬಂದವು?:
ವಿಧೇಯಕ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ರಾಮಚಂದ್ರ ಗೌಡ, ಇಡೀ ದೇಶದಲ್ಲಿ ಎಲ್ಲರೂ ಮೆಚ್ಚುವ ವಿಧೇಯಕ ತಂದಿರುವುದು ಸ್ವಾಗತಾರ್ಹ. ಕುಲಪತಿ ಹುದ್ದೆ ಒಂದು ದಿನವೂ ಖಾಲಿ ಇರುವಂತಿಲ್ಲ ಎಂಬ ಕಡ್ಡಾಯ ನಿಯಮ ವಿಧಿಸಬೇಕು. ಕುಲಪತಿ ಹುದ್ದೆಗೆ ಅನರ್ಹರು ಎಂದು ರಾಜ್ಯಪಾಲರು ಕಾರಣ ನೀಡಿದರೆ ಅದನ್ನು ಕೈಬಿಡಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಸರ್ಕಾರದ ಅಧೀನದ ವಿವಿಗಳು ಮಾತ್ರವಲ್ಲದೇ ಖಾಸಗಿ ವಿವಿಗಳ ನಿಯಂತ್ರಣಕ್ಕೂ ಕಾಯ್ದೆ ರೂಪಿಸಬೇಕು. ಇಲ್ಲದಿದ್ದರೆ ಸರ್ಕಾರಿ ಶಾಲೆಗಳಿಗಾದ ಸ್ಥಿತಿಯೇ ಸರ್ಕಾರಿ ಕಾಲೇಜು, ವಿವಿಗಳಿಗೆ ಒದಗಿಬರುವ ಕಾಲ ದೂರವಿಲ್ಲ ಎಂದರು. ಜೆಡಿಎಸ್‌ನ ಪುಟ್ಟಣ್ಣ, ಖಾಲಿ ಹುದ್ದೆಗಳನ್ನು ಪ್ರತಿ ವರ್ಷ ಭರ್ತಿ ಮಾಡುವ ನಿಯಮ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿಯ ಎಸ್‌.ವಿ.ಸಂಕನೂರ, ಕುಲಪತಿಗಳ ನೇಮಕದಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದರು. ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ಐವಾನ್‌ ಡಿಸೋಜಾ, ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಜೆಡಿಎಸ್‌ನ ಅಪ್ಪಾಜಿಗೌಡ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಚಿವ ರಾಯರಡ್ಡಿ ಸ್ಪಷ್ಟನೆ:
ಇದಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ ಬಸವರಾಜ ರಾಯರಡ್ಡಿ, ವಿವಿಗಳಲ್ಲಿ ದುಬಾರಿ ಬೆಲೆಯ ವಸ್ತುಗಳನ್ನೇ ಖರೀದಿಸುವುದು ಕಂಡುಬಂದಿದೆ. ಡೈನಿಂಗ್‌ ಟೇಬಲ್‌, ದಂತದ ಹೊದಿಕೆಯಿರುವ ಮಂಚ, ಒಂದೂವರೆ ಲಕ್ಷ ರೂ. ಮೌಲ್ಯದ ಪೆನ್‌, ದುಬಾರಿ ಮೊತ್ತದ 2-3 ಕಾರುಗಳನ್ನು ಕುಲಪತಿಗಳು ಬಳಸುತ್ತಿರುವುದು ಕಂಡುಬಂದಿದೆ. ಅಂದಾಜು ವೆಚ್ಚಕ್ಕಿಂತ ಎರಡು, ಮೂರು ಪಟ್ಟು ಹೆಚ್ಚು ಮೊತ್ತ ಪಾವತಿ ಮಾಡಿರುವುದು ಕಂಡುಬಂದಿದೆ.

ಸಭಾಪತಿ ಮೆಚ್ಚುಗೆ
ವಿಧೇಯಕಕ್ಕೆ ಅನುಮೋದನೆ ದೊರೆತ ಬಳಿಕ ಮಾತನಾಡಿದ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಈ ಕಾಯ್ದೆಯ ತಿದ್ದುಪಡಿಗೆ ಪ್ರಯತ್ನ ನಡೆಸಿ ವಿಫ‌ಲನಾದೆ. ಇದೀಗ ಅತ್ಯುತ್ತಮ ತಿದ್ದುಪಡಿ ವಿಧೇಯಕ ಮಂಡನೆಯಾಗಿದ್ದು, ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಿದ್ದುಪಡಿ ವಿಧೇಯಕದ ಪ್ರಮುಖ ಅಂಶ
* ರಾಜ್ಯ ವಿಶ್ವವಿದ್ಯಾಲಯಗಳಿಗೆ ಮಾತ್ರ ಕಾಯ್ದೆ ಅನ್ವಯ. ಕನ್ನಡ ವಿಶ್ವವಿದ್ಯಾಲಯವನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವುದು.
* ವಿವಿ ಕುಲಪತಿಗಳಾಗಲು 25 ವರ್ಷ ಬೋಧನೆ ಹಾಗೂ 10 ವರ್ಷ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಕಡ್ಡಾಯ.
* ಹಾಲಿ ಕುಲಪತಿ ನಿವೃತ್ತಿಗೆ ಮೂರು ತಿಂಗಳು ಬಾಕಿ ಇರುವಂತೆಯೇ ಶೋಧನಾ ಸಮಿತಿ ರಚಿಸಬೇಕು.
* ಶೋಧನಾ ಸಮಿತಿ ಸದಸ್ಯರ ಸಂಖ್ಯೆ 4ರಿಂದ 5ಕ್ಕೆ ಏರಿಕೆ. ಮೂರು ಸದಸ್ಯರಿದ್ದರೆ ಕೋರಂ.
* ಕುಲಪತಿ ಹುದ್ದೆಗೆ ಶೋಧನಾ ಸಮಿತಿ ನೀಡುವ ಮೂರು ಹೆಸರುಗಳ ಪೈಕಿ ಒಂದನ್ನಷ್ಟೇ ಸರ್ಕಾರ ರಾಜ್ಯಪಾಲರಿಗೆ ಸಲ್ಲಿಸುವುದು.
* ಸರ್ಕಾರ ನೀಡಿರುವ ಹೆಸರನ್ನು ರಾಜ್ಯಪಾಲರು ಒಪ್ಪದಿದ್ದರೆ ಅದಕ್ಕೆ ನಿಖರ ಕಾರಣ ನಮೂದಿಸುವುದು.
* ಸರ್ಕಾರ 2ನೇ ಬಾರಿ ಅದೇ ಹೆಸರು ಶಿಫಾರಸು ಮಾಡಿದರೆ ಅದಕ್ಕೆ ರಾಜ್ಯಪಾಲರು ಅನುಮೋದನೆ ನೀಡುವುದು ಕಡ್ಡಾಯ.
* ಒಂದೊಮ್ಮೆ ರಾಜ್ಯಪಾಲರು ಅನುಮೋದನೆ ನೀಡದಿದ್ದರೆ 30 ದಿನದ ಬಳಿಕ ಯಾಂತ್ರಿಕವಾಗಿ ಅನುಮೋದನೆ ಮಾಡುವುದು.
* ಸಿಂಡಿಕೇಟ್‌ ಹೆಸರಿನ ಬದಲಿಗೆ ಕಾರ್ಯಕಾರಿ ಸಮಿತಿ ಎಂದು ಮರುನಾಮಕರಣ.
* ಕಾರ್ಯಕಾರಿ ಸಮಿತಿಯಲ್ಲಿ ಆರು ಸದಸ್ಯರಿದ್ದು, ನಾಲ್ಕು ಮಂದಿಯನ್ನು ಸರ್ಕಾರ ನೇಮಕ ಮಾಡಲಿದೆ. ಸದಸ್ಯರಾಗುವವರು ಸ್ನಾತಕೋತ್ತರ ಪದವೀಧರರು ಇಲ್ಲವೇ ವೃತ್ತಿಪರ ಪದವೀಧರರಾಗಿರುವುದು ಕಡ್ಡಾಯ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಿಂದ ಒಬ್ಬರನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತದೆ
* ರಿಜಿಸ್ಟ್ರಾರ್‌ (ಆಡಳಿತ) ಮುಂದುವರಿಯಲಿದ್ದು, 10 ವರ್ಷ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ ಕಡ್ಡಾಯ. ರಿಜಿಸ್ಟ್ರಾರ್‌ (ಮೌಲ್ಯಮಾಪನ) ಬದಲಿಗೆ ಪರೀಕ್ಷಾ ನಿಯಂತ್ರಕ ಎಂದು ಮಾರ್ಪಡಿಸಲಾಗಿದೆ. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಅದೇ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ
* “ಸಾರ್ವಜನಿಕ ಹಣಕಾಸು ವ್ಯವಸ್ಥೆ’ ಜಾರಿಗೊಳಿಸಿ ವಿವಿಗಳ ದೈನಂದಿನ ಜಮೆ, ವೆಚ್ಚದ ವಿವರ ದಾಖಲಿಸುವುದು ಕಡ್ಡಾಯ
* ಕೇಂದ್ರ ಸರ್ಕಾರ/ ಯುಜಿಸಿ ಅನುದಾನ, ರಾಜ್ಯ ಸರ್ಕಾರದ ಅನುದಾನ, ವಿವಿಯ ಆಂತರಿಕ ಆದಾಯ ಮೂಲ ಹಾಗೂ ದಾನ- ದೇಣಿಗೆ ಮೂಲಕ ಸಂಗ್ರಹವಾಗುವ ಹಣ, ಖರ್ಚಿನ ಮಾಸಿಕ ವರದಿ ಸರ್ಕಾರಕ್ಕೆ ಸಲ್ಲಿಸಬೇಕು
* ಖರೀದಿ ಸಮಿತಿ, ಅಭಿವೃದ್ಧಿ ಸಮಿತಿ ರಚನೆ
* ಕುಲಪತಿ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಚೀಫ್ ಆರ್ಕಿಟೆಕ್ಟ್, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಸದಸ್ಯರಾಗಿರಲಿದ್ದು, ಕುಲಸಚಿವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ
* ವಿವಿ ವ್ಯಾಪ್ತಿಯ ಸಿವಿಲ್‌ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ದರ ಅನುಸೂಚಿ (ಶೆಡ್ನೂಲ್‌ ಆಫ್ ರೇಟ್ಸ್‌- ಎಸ್‌.ಆರ್‌.) ನಮೂದಿಸುವುದು ಕಡ್ಡಾಯ. 10 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ಅಗತ್ಯ
* ನೇಮಕದಲ್ಲೂ ಪಾರದರ್ಶಕತೆಗಾಗಿ ಕುಲಪತಿ ಅಧ್ಯಕ್ಷತೆಯಲ್ಲಿ ನಾಲ್ಕು ಮಂದಿ ವಿಷಯ ತಜ್ಞರ ಸಮಿತಿ ರಚನೆ

Advertisement

Udayavani is now on Telegram. Click here to join our channel and stay updated with the latest news.

Next