Advertisement

ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪಿಟ್ ಲೈನ್‌ಗೆ ಅನುಮೋದನೆ

10:25 AM Jul 07, 2020 | mahesh |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಈಗಿರುವ ಪಿಟ್ ‌ಲೈನ್‌(ಬೋಗಿಗಳ ನಿರ್ವಹಣೆ ಪ್ಲಾಟ್‌ಫಾರಂ)ಗಳ ಬದಲು 7.29 ಕೋ.ರೂ. ವೆಚ್ಚದಲ್ಲಿ ಹೊಸ ಪಿಟ್‌ ಲೈನ್‌ ನಿರ್ಮಾಣಕ್ಕೆ ರೈಲ್ವೇ ಮಂಡಳಿ ಅನು ಮೋದನೆ ನೀಡಿದೆ. ಇದರೊಂದಿಗೆ ಹೆಚ್ಚು ವರಿಯಾಗಿ ಎರಡು ಪ್ಲಾಟ್‌ಫಾರಂಗಳ ನಿರ್ಮಾಣ ಕಾಮಗಾರಿಗೆ ಇದ್ದ ಸಮಸ್ಯೆ ನಿವಾರಣೆಯಾಗಿದೆ. ನಿಲ್ದಾಣದಲ್ಲಿ ಪ್ರಸ್ತುತ 18 ಬೋಗಿಗಳು ನಿಲ್ಲಬಹುದಾದ ಪಿಟ್ ಲೈನ್‌ ಇದೆ. ಆದರೆ 5ನೇ ಪ್ಲಾಟ್‌ಫಾರಂ ನಿರ್ಮಿಸಬೇಕಿದ್ದರೆ ಅದರ ಸ್ಥಳಾಂತರ ಅನಿವಾರ್ಯ. ಇ ನಿಟ್ಟಿನಲ್ಲಿ ಹೊಸ ಪಿಟ್ ಲೈನ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೊಸ ಪಿಟ್‌ ಲೈನ್ 24 ಬೋಗಿಗಳು ನಿಲ್ಲುವ ಸಾಮರ್ಥ್ಯವನ್ನು ಹೊಂದಿರಲಿದೆ.

Advertisement

ಮಂಗಳೂರು ಸೆಂಟ್ರಲ್‌ನಲ್ಲಿ ಪ್ರಸ್ತುತ 3 ಪ್ಲಾಟ್‌ಫಾರಂಗಳು ಇದ್ದು ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಹೊಸದಾಗಿ 4ನೇ ಪ್ಲಾಟ್‌ಫಾರಂ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. 2012ರಲ್ಲಿ ಪ್ಲಾಟ್‌ಫಾರಂ ಹಾಗೂ ಇತರ ಕೆಲವು ಕಾಮಗಾರಿಗಳು ಸೇರಿ 16.55 ಕೋ.ರೂ.ಗೆ ಪ್ರಸ್ತಾವನೆ ಸಿದ್ಧಪಡಿಸಿ ಮಂಡಳಿಗೆ ಸಲ್ಲಿಸಲಾಗಿತ್ತು. 2013-14ರ ಬಜೆಟ್‌ನಲ್ಲಿ ಸ್ವಲ್ಪ ಅನುದಾನ ಮಂಜೂರಾದರೂ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ನಾಲ್ಕನೆಯದರ ಜತೆಗೆ 5ನೇ ಪ್ಲಾಟ್‌ಫಾರಂನ ಕಾಮಗಾರಿಯನ್ನೂ ಕೈಗೆತ್ತಿಗೊಳ್ಳಲು ಮಂಡಳಿ ನಿರ್ಧರಿಸಿತ್ತು. ಆದರೆ ಅಲ್ಲಿರುವ ಪಿಟ್ ಲೈನ್‌ ಅಡ್ಡಿಯಾಗಿರುವುದರಿಂದ ತೆರವು ಮಾಡಬೇಕಾಗಿದೆ. ಅದು ಸ್ಥಳಾಂತರಗೊಂಡ ಬಳಿಕ ಹೊಸ ಪ್ಲಾಟ್‌ಫಾರಂ ಕಾಮಗಾರಿ ಪ್ರಾರಂಭವಾಗಲಿದೆ.

ಪ್ರಸ್ತುತ ಕೊರೊನಾ ಕಾರಣದಿಂದಾಗಿ ಮಂಗಳೂರು ಸೆಂಟ್ರಲ್‌ ಮೂಲಕ ಯಾವುದೇ ರೈಲಿನ ಸಂಚಾರವಿಲ್ಲ. ಮಂಡಳಿಯಿಂದ ಹೊಸ ಪಿಟ್‌ ಲೈನ್‌ಗೆ
ಅನುಮೋದನೆ ದೊರಕಿರುವುದಿಂದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಇದು ಸಕಾಲ. ಪಾಲಾ^ಟ್‌ ವಿಭಾಗ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್‌ ಹೆಗ್ಡೆ ತಿಳಿಸಿದ್ದಾರೆ.

ರೈಲು ವಿಸ್ತರಣೆಗೆ ಪ್ಲಾಟ್‌ಫಾರಂ ಸಮಸ್ಯೆ
ಯಶವಂತಪುರ-ಮಂಗಳೂರು ಜಂಕ್ಷನ್‌- ಯಶವಂತಪುರ (ರೈಲು ನಂ. 16575/576) ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ಕೆಲವು ಬಹುಮುಖ್ಯ ರೈಲುಗಳನ್ನು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂಬ ಆಗ್ರಹ ಇದ್ದರೂ ಪ್ಲಾಟ್‌ಫಾರಂ ಕೊರತೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಹಲವು ರೈಲುಗಳು ಮಂಗಳೂರು ಜಂಕ್ಷನ್‌ ನಿಲ್ದಾಣವನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಸೆಂಟ್ರಲ್‌ನಲ್ಲಿ 4ನೇ ಪ್ಲಾಟ್‌ಫಾರಂ ನಿರ್ಮಾಣಗೊಂಡ ಬಳಿಕ ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲನ್ನು ಆ ನಿಲ್ದಾಣಕ್ಕೆ ವಿಸ್ತರಿಸುವುದಾಗಿ ರೈಲ್ವೇ ಪಾಲ್ಗಾಟ್‌ ವಿಭಾಗ ಹೇಳುತ್ತಿದೆ.

ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ 4 ಹಾಗೂ 5ನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಮೊದಲು ಅಲ್ಲಿರುವ ಪಿಟ್‌ ಲೈನ್ನ್ನು ಸ್ಥಳಾಂತರಿಸಬೇಕು. ಪೂರಕ ಪ್ರಕ್ರಿಯೆಗಳು ನಡೆಯುತ್ತಿದ್ದು, ನೂತನ ಪಿಟ್ ಲೈನ್‌ ನಿರ್ಮಾಣವಾದ ಕೂಡಲೇ ಸುಸಜ್ಜಿತ ಹೆಚ್ಚುವರಿ ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗುವುದು.
– ಪ್ರತಾಪ್‌ಸಿಂಗ್‌ ಸಮಿ, ವಿಭಾಗೀಯ ಪ್ರಬಂಧಕರು, ಪಾಲ್ಗಾಟ್‌ ವಿಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next