Advertisement
ಹೀಗೊಂದು “ಜಲಮಾರ್ಗ’ ಯೋಜನೆ ಮಂಗಳೂರಿನಲ್ಲಿ ಫಲ್ಗುಣಿ ನದಿಯ ಮುಖೇನ ರೂಪುಗೊಳ್ಳಲಿದ್ದು, ಅಂತಿಮ ಹಂತದ ತಯಾರಿ ಸದ್ಯ ನಡೆಯುತ್ತಿದೆ. ಬಂದರಿನಿಂದ ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆವರೆಗೆ ರೋರೋ ನೌಕೆ (ಬಾರ್ಜ್) ಮೂಲಕ ವಾಹನಗಳ ಕೊಂಡೊಯ್ಯುವ ಸೇವೆ ಇದು.
ಒಟ್ಟು 29 ಕೋ.ರೂ. ವೆಚ್ಚದಲ್ಲಿ ಜಲ ಮಾರ್ಗ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಇದಕ್ಕೆ ಸಮ ಪಾಲು ಒದಗಿಸಲಿದೆ. ಪ್ರಾರಂಭಿಕವಾಗಿ 2 ಜೆಟ್ಟಿ (ಬಂದರು ಹಾಗೂ ಕೂಳೂರು) ಹಾಗೂ ಕಟ್ಟಡ ನಿರ್ಮಾಣಕ್ಕಾಗಿ 16.40 ರೂ.ಗಳಿಗೆ ಟೆಂಡರ್ ಪೂರ್ಣಗೊಂಡಿದ್ದು, ಪರಿಸರ ಹಾಗೂ ಸಿಆರ್‌ಝಡ್ ಅನುಮತಿ ದೊರೆತ ಅನಂತರ ಕಾಮಗಾರಿ ಆರಂಭವಾಗಲಿದೆ. 2 ಜೆಟ್ಟಿಗಳ ಮಧ್ಯೆ ಸುಮಾರು 8 ಕಿ.ಮೀ. ಅಂತರವಿರಲಿದೆ. ಬಾರ್ಜ್‌ಗೆ ಪ್ರತ್ಯೇಕ ಟೆಂಡರ್
ವಾಹನಗಳನ್ನು ಅತ್ತಿಂದಿತ್ತ ಕೊಂಡೊಯ್ಯಲು ಅನುಕೂಲ ವಾಗುವ ರೋರೋ ನೌಕೆಗೆ (ಬಾರ್ಜ್) ಬಂದರು ಇಲಾಖೆ ಪ್ರತ್ಯೇಕವಾಗಿ ಟೆಂಡರ್ ಕರೆಯಲಿದೆ. ಬಾರ್ಜ್ ಸೇವೆಯಲ್ಲಿ ಪರಿಣತರು ಟೆಂಡರ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಜೆಟ್ಟಿ ನಿರ್ಮಾಣ ಕಾಮಗಾರಿ ಆಗುವ ಸಮಯದಲ್ಲಿ ಬಾರ್ಜ್ ಕುರಿತ ಟೆಂಡರ್ ಅಂತಿಮ ಮಾಡುವುದು ಕರ್ನಾಟಕ ಜಲಸಾರಿಗೆ ಮಂಡಳಿ ಲೆಕ್ಕಾಚಾರ.
Related Articles
Advertisement
ಕಾರ್ಗೊ; ಸಮಯ, ಇಂಧನ ಉಳಿತಾಯಮಂಗಳೂರು ಬಂದರಿನಿಂದ ಕೂಳೂರು ಹೆದ್ದಾರಿ ಕಡೆಗೆ ರಸ್ತೆಯಲ್ಲಿ ಸರಕು ವಾಹನ ತೆರಳಲು ಸುಮಾರು 45 ನಿಮಿಷ ಅಗತ್ಯವಿದೆ. ಸರಕು ವಾಹನಗಳ ಸಂಚಾರವು ನಗರದ ಸಂಚಾರ ಒತ್ತಡದಿಂದ ಸಮಸ್ಯೆ ಎದುರಿಸುತ್ತಿದೆ. ಆದರೆ ಬಾರ್ಜ್ ಸೇವೆ ಆರಂಭವಾದರೆ 15-20 ನಿಮಿಷದಲ್ಲಿ ತೆರಳುವ ಸಾಧ್ಯತೆ ಇದೆ. ಸಮಯ, ಇಂಧನವೂ ಉಳಿತಾಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು. ನದಿಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಾವೆಗಳ ಮೂಲಕ ಪ್ರಯಾಣಿಕರ ಸಾಗಾಟ ಹಾಗೂ ನೌಕಾ ಚಟುವಟಿಕೆಗಳ ಮೂಲಕ ಸರಕು ಸಾಗಾಟಕ್ಕೆ ಅವಕಾಶ ಈ ಯೋಜನೆಯಿಂದ ದೊರೆಯಲಿದೆ. ರಸ್ತೆ ಸಂಚಾರಕ್ಕೆ ಹೋಲಿಸಿದರೆ ಜಲಮಾರ್ಗದ ಸಂಚಾರ ತುಂಬಾ ಅಗ್ಗವಾಗಲಿದೆ. “ನೇತ್ರಾವತಿ ಜಲ ಮಾರ್ಗ’ಕ್ಕೂ ಒಲವು
ಗುರುಪುರ ಜಲಮಾರ್ಗ ಯೋಜನೆ ಯಶಸ್ವಿಯಾದ ಬಳಿಕ ನೇತ್ರಾವತಿ ನದಿಯಲ್ಲಿಯೂ ಇಂತಹ ಜಲಮಾರ್ಗ ಪರಿಚಯಿಸಲು ಕರ್ನಾಟಕ ಜಲಸಾರಿಗೆ ಮಂಡಳಿ ಆಸಕ್ತಿ ವಹಿಸಿದೆ. ಉಳ್ಳಾಲ ಅಥವಾ ಜಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿಯಲ್ಲಿ ಜೆಟ್ಟಿ ನಿರ್ಮಿಸಿದರೆ ಸರಕು ಸಂಚಾರಕ್ಕೆ ಹೆಚ್ಚು ಅನುಕೂಲ ನಿರೀಕ್ಷಿಸಲಾಗಿದೆ. ಇದು ಸಾಧ್ಯವಾದರೆ ಬಂದರು ವ್ಯಾಪ್ತಿಯಿಂದ ಘನ/ಲಘುವಾಹನಗಳು ಮಂಗಳೂರು ನಗರಕ್ಕೆ ಬಾರದೆ, ಹೊರಭಾಗದಿಂದಲೇ ಹೆದ್ದಾರಿ ಸಂಪರ್ಕಿಸಲು ಅನುಕೂಲವಾಗಲಿದೆ. ಏನಿದು ಯೋಜನೆ?
ಈ ಯೋಜನೆ ಪೂರ್ಣಗೊಂಡ ಬಳಿಕ ಮಂಗಳೂರಿನ ಹಳೆಬಂದರಿನಿಂದ ಸರಕು ತುಂಬಿದ ವಾಹನ ಅಥವಾ ಇತರ ವಾಹನ ಬಾರ್ಜ್ ಮುಖೇನ ಕೂಳೂರು ಸೇತುವೆ ಪಕ್ಕದಲ್ಲಿ ನಿರ್ಮಾಣವಾಗಲಿರುವ ಜೆಟ್ಟಿಯಲ್ಲಿಗೆ ತೆರಳುತ್ತದೆ. ಬಾರ್ಜ್‌ನಿಂದ ಕೆಳಗಿಳಿದ ವಾಹನ ನೇರವಾಗಿ ಉಡುಪಿ ಅಥವಾ ಇತರ ಕಡೆಗೆ ಸಾಗಲು ಹೆದ್ದಾರಿ ಸಂಪರ್ಕವಿದೆ. ಸಾಮಾನ್ಯವಾಗಿ ಏಕಕಾಲಕ್ಕೆ 6 ಲಾರಿಗಳನ್ನು ಬಾರ್ಜ್‌ನಲ್ಲಿ ಸಾಗಿಸಲು ಅವಕಾಶ ಕಲ್ಪಿಸುವ ಸಾಧ್ಯತೆಯಿದ್ದು, ಕಾರು ಸಹಿತ ಇತರ ವಾಹನಗಳಿಗೂ ಅವಕಾಶ ಇದೆ. ಜನರು ಕೂಡ ಇದರಲ್ಲಿ ತೆರಳಬಹುದಾಗಿದೆ. ಗುರುಪುರ ಜಲಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಗುತ್ತಿಗೆ ಅಂತಿಮಗೊಳಿಸಲಾಗಿದೆ. ಪರಿಸರ ಹಾಗೂ ಸಿಆರ್‌ಝಡ್ ನಿರಾಕ್ಷೇಪಣ ಪತ್ರ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅದಾದ ಬಳಿಕ ಬಂದರು ಹಾಗೂ ಕೂಳೂರಿನಲ್ಲಿ 2 ಜೆಟ್ಟಿಗಳು ನಿರ್ಮಾಣವಾಗಲಿವೆ. ಬಾರ್ಜ್‌ಗೆ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತದೆ.
– ಪ್ರವೀಣ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಪ್ರಭಾರ), ಬಂದರು ಇಲಾಖೆ -ದಿನೇಶ್ ಇರಾ