ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿನುತಾ ಎಂಬ ಯುವತಿಯ ಕೊಲೆ ಪ್ರಕರಣದಲ್ಲಿ ಆರೋಪಿ ಸೈನೈಡ್ ಮೋಹನ್‌ಗೆ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯನ್ನಾಗಿ ಮಾರ್ಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ಸೋಮವಾರ ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಆಕ್ಷೇಪಿಸಿ ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯನ್ನಾಗಿ ಮಾರ್ಪಡಿಸುವಂತೆ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಸಲ್ಲಿಸಿರುವ ಈ ಮೇಲ್ಮನವಿಯನ್ನು ನ್ಯಾ. ರವಿ ಮಳಿಮಠ ಹಾಗೂ ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಬೇರೊಂದು ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಸೈನೈಡ್ ಮೋಹನ್‌ನನ್ನು ಪೊಲೀಸರು ಬಾಡಿ ವಾರಂಟ್ ಮೇಲೆ ಸೋಮವಾರ ನ್ಯಾಯಪೀಠದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ತನ್ನ ಪರ ಸ್ವತಃ ತಾನೇ ವಾದ ಮಂಡಿಸುವುದಾಗಿ ಈ ವೇಳೆ ಸೈನೈಡ್ ಮೋಹನ್ ನ್ಯಾಯಪೀಠಕ್ಕೆ ಲಿಖೀತ ಮನವಿ ಮಾಡಿಕೊಂಡಿದ್ದಾನೆ.
ಪ್ರಕರಣದ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿದ ಹೈಕೋರ್ಟ್, ಆ ದಾಖಲೆಗಳ ಪೇಪರ್ ಬುಕ್ ತಯಾರಿಸಿ ಒಂದು ಪ್ರತಿಯನ್ನು ಆರೋಪಿ ಸೈನೈಡ್ ಮೋಹನ್‌ಗೂ ಕೊಡುವಂತೆ ಹೇಳಿ ವಿಚಾರಣೆಯನ್ನು ಮುಂದೂಡಿತು.
ಈಗಾಗಲೇ ಬಂಟ್ವಾಳದ ಅನಿತಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಡುಗೊಳಿಸಿದ್ದ ಹೈಕೋರ್ಟ್, ಸುಳ್ಯದ ಸುನಂದಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಿದೆ. ಆದರೆ, ಬೆಳ್ತಂಗಡಿಯ ಲೀಲಾ ಕೊಲೆ ಪ್ರಕರಣದಲ್ಲಿ ಮೋಹನ್‌ನನ್ನು ಖುಲಾಸೆಗೊಳಿಸಲಾಗಿದೆ.
ಪ್ರಕರಣವೇನು?: 2009ರ ಸೆ.17ರಂದು ಮಡಿಕೇರಿ ಬಸ್ ನಿಲ್ದಾಣದ ಮಹಿಳೆಯರ ಶೌಚಗೃಹದ ಬಳಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಸೈನೈಡ್ ಮೋಹನನ್ನು ಬಂಧಿಸಿದ್ದರು. 2017ರ ಸೆ.13ರಂದು ದಕ್ಷಿಣ ಕನ್ನಡ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಗಲ್ಲು ಶಿಕ್ಷೆಯನ್ನಾಗಿ ಮಾರ್ಪಡಿಸುವಂತೆ ಕೋರಿ ಇದೀಗ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.