Advertisement

ಕಡುಬಡತನದಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸೂಕ್ತ ಕ್ರಮ : ಸಿಎಂ

03:46 PM Feb 25, 2022 | Team Udayavani |

ಬೆಂಗಳೂರು: ಅಲಸಂಖ್ಯಾತರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸಾಮಾಜಿಕ ನ್ಯಾಯದ ಜೊತೆ ಸಾಮಾಜಿಕ ಅಭಿವೃದ್ಧಿಯ ಗುರಿ ಸಾಧಿಸಲಾಗುವುದು. ಅಲ್ಪಸಂಖ್ಯಾತರ ಕೆಲ ಸಮುದಾಯಗಳು ಕಡುಬಡತನದಲಿದ್ದು, ಅವರ ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶುಕ್ರವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಅಬುಲ್ ಕಲಾಂ ಆಜಾದ್ ಭವನವನ್ನು ಉದ್ಘಾಟಿಸಿದ ನಂತರ ಮಾತನಾಡಿ,ಬದಲಾವಣೆಯ ಯುಗದಲ್ಲಿ ಬದಲಾವಣೆಯ ವೇಗವನ್ನು ಅಳವಡಿಸಿಕೊಂಡು ಅಲ್ಪಸಂಖ್ಯಾತರು ಗುರಿಯನ್ನು ಸಾಧಿಸಬೇಕು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. 21 ನೇ ಶತಮಾನ ಜ್ಞಾನದ ಶತಮಾನವಾಗಿದ್ದು, ಜಗತ್ತು ಬದಲಾವಣೆಯ ರೀತಿಯನ್ನು ಗ್ರಹಿಸಿ , ಮಕ್ಕಳನ್ನು ಸಿದ್ಧಪಡಿಸಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರ ಹಾಗೂ ಸಮಾಜ ಮಕ್ಕಳಿಗೆ ಸೂಕ್ತ ಅವಕಾಶಗಳನ್ನು ಹಾಗೂ ಸವಲತ್ತುಗಳನ್ನು ಕಲ್ಪಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸಹಕರಿಸಬೇಕು ಎಂದು ತಿಳಿಸಿದರು.

ಅಲ್ಪಸಂಖ್ಯಾತರ ಮಕ್ಕಳಿಗೆ ಶಿಕ್ಷಣ, ವೃತ್ತಿ ಮಾರ್ಗದರ್ಶನ
ಅಲ್ಪಸಂಖ್ಯಾತ ಜನಾಂಗದ ಕಟ್ಟಕಡೆಯ ವ್ಯಕ್ತಿಯನ್ನು ಬಡವರನ್ನು ಗಮನದಲ್ಲಿರಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಎಲ್ಲ ಕಾರ್ಯಕ್ರಮಗಳಿರಬೇಕು. ಮಕ್ಕಳು ಮಾನವ ಶಕ್ತಿ. ಪುಸ್ತಕ ಹಿಡಿಯುವ ಚಿಕ್ಕಮಕ್ಕಳ ಕೈಯಲ್ಲಿ ಭಾರದ ಮೂಟೆಗಳಿವೆ. ಉದ್ಯೋಗ ಬಗ್ಗೆ ಮಕ್ಕಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಹೆಚ್ಚಿನ ಮಾಹಿತಿ ದೊರೆಯಬೇಕು. ಪ್ರಮುಖವಾಗಿ 8,9,10 ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿಗಳ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ, ಮಕ್ಕಳಿಗೆ ಐಟಿ, ಇಂಜಿನಿಯರಿಂಗ್, ಐಟಿಐ, ಐಎಎಸ್, ಐಪಿಎಸ್ ಸೇರಿದಂತೆ ಮುಂತಾದ ಕ್ಷೇತ್ರದಲ್ಲಿನ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಬೇಕು. ಅಲ್ಪಸಂಖ್ಯಾತ ಮಕ್ಕಳ ಚಿಂತನೆ ಅವರ ಶಿಕ್ಷಣ ಹಾಗೂ ವೃತ್ತಿಯ ದಿಸೆಯಲ್ಲಿ ಇರಬೇಕು. ಅಲ್ಪಸಂಖ್ಯಾತರ ಹಾಗೂ ಬಡವರ ಮಕ್ಕಳು ಸೂಕ್ತ ವೃತ್ತಿ ಮಾರ್ಗದರ್ಶನದಿಂದ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಪಡೆದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗುವ ಜೊತೆಗೆ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ
ಮಕ್ಕಳ ವಿದ್ಯಾರ್ಜನೆ ವಿಚಾರದಲ್ಲಿ ಬಹಳ ಮುಕ್ತ ವಾತಾವರಣ ನಿರ್ಮಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಅವಕಾಶ ಕಲ್ಪಿಸುತ್ತದೆ. ಪ್ರಧಾನಿಯವರ ನೇತೃತ್ವದಲ್ಲಿ ನವಭಾರತದ ನಿರ್ಮಾಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಹಳಷ್ಟು ಅಧ್ಯಯನ ಮಾಡಿ ಜಾರಿಗೆ ತರಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭವನ್ನು ಅಲ್ಪಸಂಖ್ಯಾತರೂ ಪಡೆಯಬೇಕು ಎಂದರು.

ವಕ್ಫ್ ಆಸ್ತಿ ವಕ್ಫ್ ಸಮಾಜಕ್ಕೆ ಬಳಕೆ
ವಕ್ಫ್ ಆಸ್ತಿಯನ್ನು ಕಾಪಾಡಿಕೊಳ್ಳಲು ವಕ್ಫ್ ಮಂಡಳಿಗೆ ಅಧಿಕಾರ ನೀಡಲಾಗಿದೆ. ಇದರ ದುರುಪಯೋಗ ಆಗದಂತೆ ಕ್ರಮ ವಹಿಸಬೇಕು. ವಕ್ಫ್ ಸಮಾಜದ ಆಸ್ತಿಯನ್ನು ಸಮಾಜದ ಬಳಕೆಗಾಗಿ ಮೀಸಲಿಡಬೇಕು. ಈ ವಿಷಯದಲ್ಲಿ ಕಾನೂನುಬಾಹಿರವಾಗಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next