ಬೆಂಗಳೂರು: ಕರ್ನಾಟಕದ “ದೃಷ್ಟಿ ಮಾಂದ್ಯ’ ವಿದ್ಯಾರ್ಥಿಗಳಿಗೆ “ಇಪಿ ಯುಬಿ- 3′ ಮಾದರಿ ಪಠ್ಯಪುಸ್ತಕಗಳನ್ನು ಮುಂದಿನ ಶೈಕ್ಷಣಿಕ ವರ್ಷ (2020-21) ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿದೆ.
ಈ ಕುರಿತು “ದಿ ನ್ಯಾಷನಲ್ ಫೆಡ ರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾ.ಹೇಮಂತ್ ಚಂದನ ಗೌಡರ್ ಅವರಿದ್ದ ವಿಭಾಗೀಯ ನ್ಯಾಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಆಗ, ಸರ್ಕಾರದ ಪರ ವಕೀಲರಾದ ವಿ.ಶ್ರೀನಿಧಿ, ದೃಷ್ಟಿ ಮಾಂದ್ಯ ಮಕ್ಕಳ ಪಠ್ಯ ಪುಸ್ತಕಗಳ ವಿಚಾರಕ್ಕೆ ಸಂಬಂಧಿಸಿ ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಂಗ ಸಂಸ್ಥೆಯಾಗಿರುವ “ಕರ್ನಾಟಕ ಪಠ್ಯ ಪುಸ್ತಕ ಸಂಘ’ದ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ಮಾದೇಗೌಡ ಅವರು 2020ರ ಫೆ.4ರಂದು ಹೊರಡಿಸಿ ರುವ “ಜ್ಞಾಪನಾ ಪತ್ರ’ವನ್ನು ನ್ಯಾಯ ಪೀಠಕ್ಕೆ ಸಲ್ಲಿಸಿದರು.
“ದೃಷ್ಟಿಮಾಂದ್ಯ ಹಾಗೂ ವಿಶೇಷ ಸಾಮರ್ಥವುಳ್ಳ ವಿದ್ಯಾರ್ಥಿಗಳಿಗೆ ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿ ಪಠ್ಯ ಪುಸ್ತಕಗಳನ್ನು “ಇಪಿಯುಬಿ-3′ ಮಾದರಿಯಲ್ಲಿ ಒದಗಿಸುವ ಕುರಿತು ಕ್ರಮ ಕೈಗೊಳ್ಳಲು ರಾಜ್ಯ ಪಠ್ಯಪುಸ್ತಕ ಸಂಘದ ಉಪ ನಿರ್ದೇಶಕ ಕೆ.ಜಿ.ರಂಗಯ್ಯ ನೇತೃತ್ವ ದಲ್ಲಿ 10 ಮಂದಿ ಸಮಿತಿ ರಚಿಸಲಾಗಿದೆ.
ಈ ಸಮಿತಿ ತುರ್ತು ಸಭೆ ನಡೆಸಿ ವಿವಿಧ ಇಲಾಖೆಗಳಿಂದ ಅಗತ್ಯ ಮಾಹಿತಿ ಹಾಗೂ ದಾಖಲೆ ಪಡೆದು ಕ್ರಮಗಳ ಕುರಿತು ಫೆ.20ರೊಳಗೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ವರದಿ ಸಲ್ಲಿಸಲಿದೆ. ಬಳಿಕ ಸರ್ಕಾರದ ಅನುಮೋದನೆ ಪಡೆದು ಇಪಿಯುಬಿ-3 ಪಠ್ಯಪುಸ್ತಕಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ , ಅಂದರೆ 2020ರ ಜೂನ್ ವೇಳೆಗೆ ಲಭ್ಯವಾಗುವಂತೆ ಕೈಗೊಳ್ಳಲಾಗುವುದು’ ಎಂದು ಜ್ಞಾಪನ ಪತ್ರದಲ್ಲಿ ಹೇಳಲಾಗಿದೆ.
ಜ್ಞಾಪನಾ ಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಅಂಧ ವಿದ್ಯಾರ್ಥಿಗಳಿಗೆ ವಿವಿಧ ಉಲ್ಲೇಖನಾ ಪುಸ್ತಕ, ಕಲಿಕಾ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತ ವಾಗಿ ಬ್ರೈಲ್ ಲಿಪಿಯಲ್ಲಿ ಪೂರೈಸಲು ಹಾಗೂ ಅವುಗಳನ್ನು ಡಿಜಿಟಲ್ ರೂಪ ದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವ ಬಗ್ಗೆಯೂ ಪರಿಶೀಲಿಸಿ ಎಂದು ಸರ್ಕಾರಕ್ಕೆ ಮೌಖೀಕ ಸೂಚನೆ ನೀಡಿ ವಿಚಾರಣೆ ಮುಂದೂಡಿತು.