Advertisement

ಉಡುಪಿಯಲ್ಲಿ ವೈದ್ಯ ಕಾಲೇಜಿಗೆ ಪ್ರಸ್ತಾವನೆ

09:52 AM Feb 05, 2020 | mahesh |

ಉಡುಪಿ: ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಿದ್ದು, ವಾರದ ಹಿಂದೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಅನಂತರ ಶೀಘ್ರದಲ್ಲಿ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.

Advertisement

ಈ ಹಿಂದೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿ ಸರಕಾರಿ ಮೆಡಿಕಲ್‌ ಸ್ಥಾಪನೆಗೆ ಉದ್ದೇಶಿಸಲಾಗಿತ್ತಾದರೂ ಕಾರಣಾಂತರಗಳಿಂದ ಕೈಬಿಡಲಾಗಿತ್ತು. ಜಿಲ್ಲಾಸ್ಪತ್ರೆಯ 10 ಕಿ.ಮೀ. ಆಸುಪಾಸಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಇರಬೇಕೆಂಬ ನಿಯಮದಿಂದ ಈಗ ಕೊಳಲಗಿರಿಯಲ್ಲಿ 20 ಎಕರೆ ಗುರುತು ಮಾಡಲಾಗಿದೆ.

ಹೊರಜಿಲ್ಲೆ, ರಾಜ್ಯಕ್ಕೆ ಮೊರೆ
ಪ್ರಸ್ತುತ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಹೊರ ಜಿಲ್ಲೆ, ರಾಜ್ಯಗಳಿಗೆ ಹೋಗಿ ವೈದ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಖಾಸಗಿ ಮೆಡಿಕಲ್‌ ಕಾಲೇಜುಗಳ ಶುಲ್ಕ ನೋಡಿ ಬೇರೆ ಕೋರ್ಸ್‌ ಗಳನ್ನು ಆಯ್ಕೆ ಮಾಡಿರುವ ಹಲವಾರು ಪ್ರಕರಣಗಳಿವೆ. ಸರಕಾರಿ ಕಾಲೇಜು ಲಭ್ಯವಾದರೆ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಉತ್ತೇಜನ ನೀಡಿದಂತಾಗುತ್ತದೆ.

ಜಿಲ್ಲಾಸ್ಪತ್ರೆಯ ಮೂಲಸೌಕರ್ಯವೂ ಅಭಿವೃದ್ಧಿ
ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ಮುಖ್ಯವಾಗಿ ಜಿಲ್ಲಾಸ್ಪತ್ರೆಯ ಜತೆಗೆ ವೈದ್ಯ ಕಾಲೇಜುಗಳ ಸಂಪರ್ಕ ಜಾಲ ನಿರ್ಮಾಣ ಹಾಗೂ ಅಗತ್ಯ ವೈದ್ಯಕೀಯ ನೆರವು ನೀಡಬಲ್ಲ ವೃತ್ತಿಪರ ಆರೋಗ್ಯ ಅಧಿಕಾರಿಗಳು, ವೈದ್ಯರ ತಂಡ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಒಂದೇ ಕಾಲೇಜು!
ಜಿಲ್ಲೆಯಲ್ಲಿ ಪ್ರಸ್ತುತ ಮಣಿಪಾಲದಲ್ಲಿ ಮಾತ್ರ ಖಾಸಗಿ ವೈದ್ಯಕೀಯ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು, ನರ್ಸಿಂಗ್‌, ಅರೆಮೆಡಿಕಲ್‌ ಕಾಲೇಜುಗಳನ್ನು ಮಂಜೂರುಗೊಳಿಸಬೇಕು ಎಂದು ಜನಪ್ರತಿನಿಧಿಗಳು ಸರಕಾರವನ್ನು ಹಲವಾರು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದಾರೆ.

Advertisement

ಬಜೆಟ್‌ನಲ್ಲೂ ಘೋಷಣೆ
ಗುಣಮಟ್ಟದ ವೈದ್ಯಕೀಯ ಸೇವೆಯ ಜತೆಗೆ ಅರ್ಹ ವೈದ್ಯರನ್ನು ಪಡೆಯುವ ಉದ್ದೇಶದಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಜಿಲ್ಲಾಸ್ಪತ್ರೆಗಳಿಗೆ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜನ್ನು ಸಂಯೋಜಿಸಲು ಕೇಂದ್ರ ಸರಕಾರ ಮುಂದಾಗಿದೆ. ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ವಿಚಾರವನ್ನು ಮಂಡಿಸಿದ್ದಾರೆ. ವೈದ್ಯಕೀಯ ಸೇವೆಯನ್ನು ಇನ್ನಷ್ಟು ಉನ್ನತೀಕರಿಸುವ ಉದ್ದೇಶದಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಕಾಲೇಜುಗಳನ್ನು ಸಂಯೋಜಿಸುವ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.

ಎಲ್ಲ ಜಿಲ್ಲೆಗಳಲ್ಲೂ ಸ್ಥಾಪನೆ ಉದ್ದೇಶ
ವೈದ್ಯಕೀಯ ಕ್ಷೇತ್ರದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯ ಉದ್ದೇಶ ಹೊಂದಲಾಗಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿಯೂ ಕಾಲೇಜು ಸ್ಥಾಪನೆ ಸದ್ಯದಲ್ಲೇ ಆರಂಭಗೊಳ್ಳಲಿದೆ.
-ಡಾ| ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ

ಜಾಗ ಗುರುತು
ಜಿಲ್ಲೆಗೊಂದು ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸುವುದು ಬಹುದಿನಗಳ ಕನಸು. ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸದ್ಯದಲ್ಲೇ ಅನುಮೋದನೆ ದೊರಕಲಿದೆ. ಇದಕ್ಕಾಗಿ 20 ಎಕರೆ ಜಾಗವನ್ನು ಕೊಳಲಗಿರಿಯಲ್ಲಿ ನಿಗದಿಪಡಿಸಲಾಗಿದೆ.
-ಕೆ. ರಘುಪತಿ ಭಟ್‌, ಶಾಸಕ

 ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next