Advertisement

ವಿಧಾನ-ಕದನ 2023: ಕೊಪ್ಪಳ ಜಿಲ್ಲೆಯಲ್ಲಿ ಅನುಕಂಪದ ಅಲೆ, ಬಂಡಾಯ, ಪಕ್ಷಾಂತರ ಪರ್ವ

12:04 AM Apr 27, 2023 | Team Udayavani |

ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಣ ಭರ್ಜರಿ ರಂಗೇರಿದೆ. ಐದರಲ್ಲಿ ಕೊಪ್ಪಳ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೆ, ಯಲಬುರ್ಗಾ, ಕುಷ್ಟಗಿ ಹಾಗೂ ಕನಕಗಿರಿಯಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆದಿದೆ. ಎಲ್ಲ ಅಭ್ಯರ್ಥಿಗಳು ಗೆಲುವಿಗೆ ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ.

Advertisement

ಕೊಪ್ಪಳ
ಕೊಪ್ಪಳದಲ್ಲಿ ಒಟ್ಟು 12 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಜೋರಾಗಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ, ಬಿಜೆಪಿಯಿಂದ ಮಂಜುಳಾ ಕರಡಿ, ಜೆಡಿಎಸ್‌ನಿಂದ ಸಿ.ವಿ. ಚಂದ್ರಶೇಖರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮೂವರ ನಡುವೆಯೂ ಪೈಪೋಟಿ ಜೋರಾಗಿದೆ. ಸಿವಿಸಿ ಈ ಮೊದಲು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಕಮಲದ ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದು, ಜೆಡಿಎಸ್‌ ಪಕ್ಷಕ್ಕೆ ಹೋಗಿ ರಾತ್ರೋ ರಾತ್ರಿ ಟಿಕೆಟ್‌ ಪಡೆದು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಿವಿಸಿ ಅವರಿಗೆ ಅನುಕಂಪದ ಅಲೆಯೂ ಕಾಣುತ್ತಿದ್ದರೂ ಮಹಿಳಾ ಅಭ್ಯರ್ಥಿಯ ಪರವಾದ ಒಲವೂ ಅಲ್ಲಲ್ಲಿ ಕಾಣುತ್ತಿದೆ. ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ಮುಸ್ಲಿಂ, ಎಸ್‌ಸಿ, ಎಸ್‌ಟಿ ಮತಗಳು ಹೆಚ್ಚಿವೆ. ಕಾಂಗ್ರೆಸ್‌ ಶಾಸಕ ಕುರುಬ, ಸಿ.ವಿ.ಚಂದ್ರಶೇಖರ ರಡ್ಡಿ, ಮಂಜುಳಾ ಕರಡಿ ಲಿಂಗಾಯತ ಪಂಚಮಸಾಲಿ ಸಮಾಜದವರಾಗಿದ್ದಾರೆ. ಮೂವರು ತಮ್ಮದೇ ತಂತ್ರಗಾರಿಕೆ ಹೆಣೆದು ಚುನಾವಣಾ ಅಖಾಡದಲ್ಲಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ ಶಾಸಕರಾಗಿದ್ದು, ಎರಡು ಅವ ಧಿಗೆ ಕ್ಷೇತ್ರದ ಹಿಡಿತ ಹೊಂದಿ ಹ್ಯಾಟ್ರಿಕ್‌ ಕನಸು ಕಾಣುತ್ತಿದ್ದಾರೆ.

ಗಂಗಾವತಿ
ಭತ್ತದ ನಾಡು ಗಂಗಾವತಿ ಕ್ಷೇತ್ರ ಈ ಬಾರಿ ಹೈವೋಲ್ಟೆಜ್‌ ಕಣ ಎನಿಸಿದೆ. ಅಂತಿಮವಾಗಿ 19 ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌, ಬಿಜೆಪಿ ಹಾಗೂ ಕೆಆರ್‌ಪಿಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇವರಿಗೆ ದಳದ ಅಭ್ಯರ್ಥಿ ಟಕ್ಕರ್‌ ನೀಡುವ ಯತ್ನ ನಡೆಸುತ್ತಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಪರಣ್ಣ ಮುನವಳ್ಳಿ, ಕಾಂಗ್ರೆಸ್‌ನಿಂದ ಇಕ್ಬಾಲ್‌ ಅನ್ಸಾರಿ, ಕೆಆರ್‌ಪಿಪಿಯಿಂದ ಗಾಲಿ ಜನಾರ್ದನ ರೆಡ್ಡಿ ಕಣದಲ್ಲಿದ್ದಾರೆ. ಮೂವರ ನಡುವೆಯೂ ನೇರಾನೇರ ಹಣಾಹಣಿ ನಡೆದಿದ್ದು, ದಳದ ಅಭ್ಯರ್ಥಿ ಎಚ್‌.ಆರ್‌. ಚನ್ನಕೇಶವ ಟಕ್ಕರ್‌ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಎಚ್‌.ಆರ್‌.ಚನ್ನಕೇಶವ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಮತ್ತೆ ಹಾಲಿ ಶಾಸಕರಿಗೆ ಟಿಕೆಟ್‌ ದೊರೆಯುವ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಂಡಾಯವೆದ್ದು ಜೆಡಿಎಸ್‌ಗೆ ಪಕ್ಷಾಂತರಗೊಂಡು ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಕಳೆದ ಬಾರಿ ಅನ್ಸಾರಿ ಸೋಲಿನ ಬಗ್ಗೆ ಅನುಕಂಪ ಅಲ್ಲಲ್ಲಿ ಕಂಡರೂ ಕ್ಷೇತ್ರದ ತುಂಬೆಲ್ಲಾ ಇಲ್ಲ. ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ, ಕುರುಬ, ಎಸ್‌ಟಿ ಸಮುದಾಯ ಹೆಚ್ಚಿವೆ. ಹಾಲಿ ಶಾಸಕ ಪರಣ್ಣ ಮುನವಳ್ಳಿ ಬಣಜಿಗ, ಇಕ್ಬಾಲ್‌ ಅನ್ಸಾರಿ ಮುಸ್ಲಿಂ, ಜನಾರ್ದನರಡ್ಡಿ ಆಂಧ್ರ ರೆಡ್ಡಿ ಹಾಗೂ ಎಚ್‌.ಆರ್‌. ಚನ್ನಕೇಶವ ಈಳಗೇರ ಸಮಾಜದವರಾಗಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಜೋರಾಗಿದೆ.

ಯಲಬುರ್ಗಾ
ಯಲಬುರ್ಗಾ ಕ್ಷೇತ್ರದ ಚುನಾವಣಾ ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರಡ್ಡಿ ಹಾಗೂ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಹಾಲಪ್ಪ ಆಚಾರ್‌ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಬಸವರಾಜ ರಾಯರಡ್ಡಿ ಕಳೆದ ಬಾರಿ ಹೊಡೆತ ಬಿದ್ದಿದ್ದ ಕುರುಬ ಹಾಗೂ ಗಾಣಿಗ ಸಮಾಜದ ಮತಗಳ ಕ್ರೋಡೀಕರಣ ಮಾಡುವ ರಾಜಕೀಯ ಚಾಣಾಕ್ಷತನ ಮೆರೆದಿದ್ದು, ಅವರಿಗೆ ಟಕ್ಕರ್‌ ನೀಡಲು ಕ್ಷೇತ್ರವನ್ನು ಮತ್ತೆ ಹಿಡಿಯಲು ಬಿಜೆಪಿಯ ಹಾಲಪ್ಪ ಆಚಾರ್‌ ಕಾಲಿಗೆ ಚಕ್ರ ಕಟ್ಟಿಕೊಂಡು ಹಗಲಿರುಳು ಕ್ಷೇತ್ರ ಸುತ್ತುತ್ತಿದ್ದಾರೆ. ನೀರಾವರಿಯ ಜಪವೂ ಕ್ಷೇತ್ರದಲ್ಲಿ ನಡೆದಿದೆ. ಕಳೆದ ಬಾರಿ ಸೋತಿರುವ ರಾಯರಡ್ಡಿ ಮೇಲೆ ಅನುಕಂಪದ ಅಲೆಯಿದ್ದರೂ ಅಷ್ಟೊಂದು ದೊಡ್ಡಮಟ್ಟದಲ್ಲಿ ಕಾಣಿಸುತ್ತಿಲ್ಲ. ಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತ, ಗಾಣಿಗೇರ, ಕುರುಬ, ಎಸ್‌ಸಿ, ಎಸ್‌ಟಿ ಸಮಾಜದ ಮತಗಳೇ ಹೆಚ್ಚಿವೆ. ರಾಯರಡ್ಡಿ ಹಾಗೂ ಆಚಾರ್‌ ಇಬ್ಬರೂ ರಡ್ಡಿ ಸಮಾಜದವರಾಗಿದ್ದು ಇಬ್ಬರ ನಡುವೆ ಹಣಾಹಣಿ ಏರ್ಪಟ್ಟಿದೆ. ಇವರಿಬ್ಬರಿಗೆ ದಳದ ಅಭ್ಯರ್ಥಿ ಮಲ್ಲನಗೌಡ ಪೈಪೋಟಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಕುಷ್ಟಗಿ
ಕುಷ್ಟಗಿ ಕ್ಷೇತ್ರದ ರಾಜಕೀಯ ಚಿತ್ರಣವೇ ವಿಭಿನ್ನ, ವಿಶೇಷತೆಯಿಂದ ಕೂಡಿದೆ. ಒಟ್ಟು 15 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಅಮರೇಗೌಡ ಬಯ್ನಾಪುರ ಮತ್ತು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ನಡುವೆ ನೇರ ಹಣಾಹಣಿ ನಡೆದಿದೆ. ಜೆಡಿಎಸ್‌ನಿಂದ ಈ ಮೊದಲು ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ತುಕಾರಾಂ ಸುರ್ವೆ ದಳದ ಟಿಕೆಟ್‌ ಸಿಗದೆ ಒದ್ದಾಡಿ ಬೇರೆ ಪಕ್ಷದಿಂದ ನಾಮಪತ್ರ ಕೊಟ್ಟು ಮತ್ತೆ ಹಿಂಪಡೆದು ದಳದಿಂದ ಬಂಡಾಯವೆದ್ದು ಈಗ ಬಿಜೆಪಿ ಪಾಳೆಯ ಸೇರಿದ್ದಾರೆ. ಸುರ್ವೆ ಮಾತ್ರ ಬಂಡಾಯವೆದ್ದು ಕಮಲಕ್ಕೆ ಪಕ್ಷಾಂತರಗೊಂಡಿದ್ದಾರೆ. ಕಳೆದ ಬಾರಿ ಸೋಲು ಕಂಡಿರುವ ಬಿಜೆಪಿ ದೊಡ್ಡನಗೌಡ ಪಾಟೀಲ್‌ ನನ್ನ ಬಳಿ ದುಡ್ಡಿಲ್ಲ. ಶ್ರೀಮಂತನಲ್ಲ ಎನ್ನುತ್ತಲೇ ಅನುಕಂಪ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಕುರುಬ, ಪಂಚಮಸಾಲಿ ಲಿಂಗಾಯತ, ದಲಿತರು ಹೆಚ್ಚಿದ್ದಾರೆ. ದೊಡ್ಡನಗೌಡ ಪಾಟೀಲ್‌ ಕುರುಬ ಸಮಾಜದವರಾಗಿದ್ದರೆ, ಅಮರೇಗೌಡ ರಡ್ಡಿ ಸಮಾಜದವರಾಗಿದ್ದು, ಗೌಡ್ರ-ಗೌಡರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ತುಕಾರಾಂ ಸುರ್ವೆ ಬಂಡಾಯ, ಪಕ್ಷಾಂತರ ಯಾವುದೇ ಎಫೆಕ್ಟ್ ಆಗಲ್ಲ ಎಂದೆನ್ನುತ್ತಿದೆ ಜನತೆ.

Advertisement

ಕನಕಗಿರಿ
ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರದ ಚುನಾವಣಾ ಅಖಾಡ ಕಾವೇರಿದ್ದು, ಈ ಬಾರಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ ತಂಗಡಗಿ, ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಬಸವರಾಜ ದಢೇಸುಗೂರು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಶಿವರಾಜ ತಂಗಡಗಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದು ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಕಮಲದ ಅಭ್ಯರ್ಥಿ ಬಸವರಾಜ ದಢೇಸುಗೂರು ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಕ್ಷೇತ್ರದಲ್ಲಿ ನಿದ್ದೆ ಬಿಟ್ಟು ಸುತ್ತಾಡುತ್ತಿದ್ದಾರೆ. ತಂಗಡಗಿ ಒಂದು ಬಾರಿ ಸೋತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹಲವೆಡೆ ಅನುಕಂಪದ ಅಲೆ ಕಾಣುತ್ತಿದೆ. ಇಲ್ಲಿ ಪಕ್ಷಾಂತರ, ಬಂಡಾಯದ ಯಾವುದೇ ಲಕ್ಷಣವೂ ಕಂಡು ಬಂದಿಲ್ಲವಾದರೂ ಕಾರ್ಯಕರ್ತರ ಹಾಗೂ ಮುಖಂಡರ ತಂಡೋಪ ತಂಡದಲ್ಲಿ ಪಕ್ಷಾಂತರಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ದಲಿತ, ಲಿಂಗಾಯತ ಸಮಾಜದ ಮತಗಳು ಹೆಚ್ಚಿವೆ. ತಂಗಡಗಿ ಭೋವಿ ಸಮಾಜದವರಾಗಿದ್ದರೆ, ಬಸವರಾಜ ದಢೇಸುಗೂರು ಮಾದಿಗ ಸಮಾಜದವರಾಗಿದ್ದಾರೆ. ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಒಟ್ಟಿನಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರದಲ್ಲಿ ಗೆಲುವು ಕಂಡಿದ್ದರೆ, ಕಾಂಗ್ರೆಸ್‌ 2 ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಈ ಬಾರಿ ಕೈ-ಕಮಲದ ನಡುವೆ ನೇರ ಹಣಾಹಣಿಯಿಂದ ಚುನಾವಣಾ ಅಖಾಡ ರಂಗೇರಿದೆ.

ಹಿಂದಿನ ಫ‌ಲಿತಾಂಶ
ಬಿಜೆಪಿ -3
ಕಾಂಗ್ರೆಸ್‌ 2

~ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next