Advertisement

ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ

12:20 PM Jan 02, 2018 | |

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮ ಆಚರಿಸಿ ಮನೆಗೆ ತೆರಳಲು ಮಧ್ಯರಾತ್ರಿ ವಾಹನಗಳು ಸಿಗದೇ ಪರದಾಡುತ್ತಿದ್ದ ನೂರಾರು ಮಂದಿಯನ್ನು ಪೊಲೀಸ್‌ ವಾಹನದಲ್ಲಿಯೇ ಸುರಕ್ಷಿತವಾಗಿ ತಲುಪಿಸಿದ ನಗರ ಪೊಲೀಸರ ಕಾರ್ಯವೈಖರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Advertisement

ಹೊಸವರ್ಷಾಚರಣೆಗೆ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಿಯೂ ಸುರಕ್ಷತಾ ದೃಷ್ಟಿಯಿಂದ ಮಹಿಳೆಯರು, ಹೆಣ್ಣುಮಕ್ಕಳು, ಹಿರಿಯ ನಾಗರಿಕರನ್ನು ನಡುರಾತ್ರಿ ಮನೆ ತಲುಪಿಸಿದ ಪೊಲೀಸ್‌ ಸಿಬ್ಬಂದಿಗೆ ಟ್ವೀಟರ್‌ನಲ್ಲಿ ನೂರಾರು ಮಂದಿ ಅಭಿನಂದನೆ ತಿಳಿಸಿದ್ದಾರೆ. 

ಮಹದೇವಪುರ, ಕಾಡುಗೋಡಿ, ಮಾರತ್‌ಹಳ್ಳಿ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಹೊಸವರ್ಷವನ್ನು ಸ್ವಾಗತಿಸಲು ಕುಟುಂಬ ಸದಸ್ಯರು, ಯುವತಿಯರ ತಂಡಗಳು, ಮಕ್ಕಳ ಜೊತೆ ಆಗಮಿಸಿದ್ದ ಮಹಿಳೆಯರು ನೂತನ ವರ್ಷದ ಸಂಭ್ರಮದ ಬಳಿಕ ಬಹುತೇಕ ರಾತ್ರಿ 1 ಗಂಟೆ ಮೀರಿತ್ತು.

ಈ ಅವಧಿಯಲ್ಲಿ ಮನೆಗೆ ವಾಪಾಸ್‌ ತೆರಳಲು ಪರ್ಯಾಯ ವಾಹನಗಳು ಸಿಗದೆ ರೆಸ್ಟೊರೆಂಟ್‌ ಹಾಗೂ ಹೋಟೆಲ್‌ಗ‌ಳ ಸಮೀಪವೇ ನಿಂತುಕೊಂಡಿದ್ದ ಸಂಗತಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಗಮನಕ್ಕೆ ಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಹೊಯ್ಸಳ ವಾಹನಗಳು, ಸೇರಿದಂತೆ ಇನ್ನಿತರೆ ಪೊಲೀಸ್‌ ವಾಹನಗಳಲ್ಲಿ ತೆರಳಿದ ಸಿಬ್ಬಂದಿ ರಸ್ತೆಯಲ್ಲಿ, ಹೋಟೆಲ್‌ ಮುಂಭಾಗ ನಿಂತುಕೊಂಡಿದ್ದ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರನ್ನು ಮನೆಗಳಿಗೆ ತಲುಪಿಸಿದ್ದಾರೆ.

Advertisement

ಇದಲ್ಲದೆ ಈಶಾನ್ಯ ವಿಭಾಗದಲ್ಲಿನ ಸಹಕಾರ ನಗರ, ಮಾನ್ಯತಾ ಟೆಕ್‌ ಪಾರ್ಕ್‌, ಹೆಬ್ಟಾಳ, ಯಲಹಂಕ ಸೇರಿದಂತೆ ಹಲವು ಭಾಗಗಳಲ್ಲಿಯೂ ಕ್ಯಾಬ್‌ಗಳು ಸಿಗದ ಮಹಿಳೆಯರು, ಹಿರಿಯನಾಗರೀಕರನ್ನು ಸುರಕ್ಷತಾ ಹಿನ್ನೆಲೆಯಲ್ಲಿ ಅವರ ನಿವಾಸಗಳಿಗೆ ಕರೆದುಕೊಂಡು ಹೋಗಿ ಬಿಡಲಾಯಿತು ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್‌ ತಿಳಿಸಿದರು.

ಇದಲ್ಲದೆ ಇಂದಿರಾನಗರ ಸುತ್ತಮುತ್ತಲ ಭಾಗಗಳ ಪಬ್‌ ಅಂಡ್‌ ರೆಸ್ಟೋರೆಂಟ್‌ಗಳ ಮಂದೆ ಪಾನಮತ್ತರಾಗಿ ನಿಂತಿದ್ದ ಯುವತಿಯರನ್ನು ಮಹಿಳಾ ಪೊಲೀಸ್‌ ಸಿಬ್ಬಂದಿ ಮನೆ ತಲುಪಿಸಿದ್ದಾರೆ. ಅಲ್ಲದೆ ಉತ್ತರ ವಿಭಾಗಗಲ್ಲಿ ಗೊರಗುಂಟೆ ಪಾಳ್ಯ ಯಶವಂತಪುರ, ಮೈಸೂರು ರಸ್ತೆ, ಆರ್‌. ಆರ್‌ ನಗರ ಸೇರಿದಂತೆ ಹಲವು ಭಾಗಗಳಲ್ಲಿಯೂ ಕೆಲವು ಮಂದಿಯನ್ನು ಸುರಕ್ಷಿತವಾಗಿ ಮನೆ ತಲುಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹೊಸವರ್ಷಾಚರಣೆಯ ಹಾಟ್‌ಸ್ಪಾಟ್‌ಗಳಾದ ಮಹಾತ್ಮಗಾಂಧಿ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿಯೇ ಖಾಸಗಿ ಕ್ಯಾಬ್‌ಗಳು, ಆಟೋ ಡ್ರೈವರ್‌ಗಳು ಹೆಚ್ಚಿನ ಪ್ರಮಾಣದಲ್ಲಿದ್ದರು. ಹೀಗಾಗಿ, ಈ ಭಾಗದಲ್ಲಿ ಸಂಭ್ರಮಾಚರಣೆಗೆ ಬಂದಿದ್ದವರಿಗೆ ಅಷ್ಟಾಗಿ ಸಮಸ್ಯೆಯಾಗಿಲ್ಲ. ಜೊತೆಗೆ ಮೆಟ್ರೋ ಸಂಚಾರವೂ ಎರಡು ಗಂಟೆಯವರೆಗೂ ಇತ್ತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದರು.

ಟ್ವೀಟರ್‌ನಲ್ಲಿ ಅಭಿನಂದನೆಗಳ ಸುರಿಮಳೆ! 
-ಪ್ರದೀಪ್‌.ಕೆಸಿ -“ಪೊಲೀಸ್‌ ಇಲಾಖೆಯ ಕಾರ್ಯವೈಖರಿ ಅಭಿನಂದನೀಯ ” 
-ಜಿತೇಶ್‌ ಎರ್‍ನಾಚಾರಿ – “ಜನರ ಪೊಲೀಸ್‌” 
-ವೆಂಕಟೇಶನ್‌- “ಈ ಭಾಗದಲ್ಲಿ ಇಂತಹ ಪೊಲೀಸ್‌ ಸಿಬ್ಬಂದಿ ಹೊಂದಿರುವುದು ನಮ್ಮ ಅದೃಷ್ಟ” 
-ಸ್ವಾಮಿ ಕ್ರಿಷ್ಣನ್‌ – “ನಿಮ್ಮ ಉತ್ಸಾಹದಾಯಕ ಸೇವೆಗೆ ಸೆಲ್ಯೂಟ್‌” 
-ಶಬಾಜ್‌ ಅಹ್ಮದ್‌ – ” ಸಂಭ್ರಮದ ಹೊಸ ವರ್ಷಾಚರಣೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡ ನಮ್ಮ ಬೆಂಗಳೂರು ಪೊಲೀಸರ ಬದ್ಧತೆಗೆ ಹ್ಯಾಟ್ಸಾಪ್‌” 

ಹೊಸವರ್ಷಾಚರಣೆ ದಿನ ಕ್ಯಾಬ್‌ಗಳು ಸಿಗದೇ ಸಾರ್ವಜನಿಕರು ತೊಂದರೆಗೆ ಸಿಲುಕಿದರೆ ಮನೆಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಸಿಬ್ಬಂದಿಯೂ ಕಾರ್ಯಪ್ರವೃತ್ತರಾಗಿದ್ದರು. ಫಿನಿಕ್ಸ್‌ ಮಾಲ್‌ ಬಳಿ ಮತ್ತು ಇಂದಿರಾನಗರದಲ್ಲಿ ಯುವಕ – ಯುವತಿಯರನ್ನು ಹಾಗೂ ನ್ನು ಕೆಲವಡೆ ನಾಗರಿಕರನ್ನು ಸುರಕ್ಷಿತವಾಗಿ ಮನೆ ತಲುಪಿಸಲಾಗಿದೆ.
-ಸೀಮಂತ್‌ ಕುಮಾರ್‌ ಸಿಂಗ್‌, ಪೂರ್ವವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ 

ನೆರವಾದ ಟ್ವೀಟ್‌, ಟ್ರೋಲ್‌ ಫ್ರೀ ನಂಬರ್‌: ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್‌ ಅಹದ್‌, ಮನೆಗೆ ತೆರಳಲು ಕ್ಯಾಬ್‌ಗಳು ಸಿಗದೇ ಉಳಿದುಕೊಂಡಿರುವ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರನ್ನು ಪೊಲೀಸ್‌ ವಾಹನದಲ್ಲಿಯೇ ಡ್ರಾಪ್‌ ಮಾಡಲಾಗುವುದು ಎಂದು ಟ್ವೀಟ್‌ ಮಾಡಿದ್ದರು.

ಡಿಸಿಪಿಯರ ಟ್ವೀಟ್‌ ಆದ ಕೆಲವೇ ನಿಮಿಷಗಳಲ್ಲಿ ವಿವಿಧ ಭಾಗಗಳಲ್ಲಿ ಕ್ಯಾಬ್‌ಗಳು ಸಿಗದೇ ಕಂಗಾಲಾಗಿದ್ದ ನೂರಾರು ಮಂದಿ ಪೊಲೀಸರ ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ ವಿಷಯ ತಿಳಿಸಿದರು. ಅಲ್ಲದೆ ವರ್ತೂರು ಕೋಡಿ ಬಳಿಯಿದ್ದ ಪೊಲೀಸ್‌ ಹೆಲ್ಪ್ಡೆಸ್ಕ್ಗೂ ಮಾಹಿತಿ ಬರತೊಡಗಿತು.

ಈ ನಿಟ್ಟಿನಲ್ಲಿ ಫೀನಿಕ್ಸ್‌ ಮಾಲ್‌, ಮಾರತ್‌ಹಳ್ಳಿ, ಎಚ್‌ಎಎಲ್‌, ಅಲಾಫ್ಟ್ ಹೋಟೆಲ್‌ ಸೇರಿದಂತೆ ಇನ್ನಿತರೆ ಜಾಗಗಳಲ್ಲಿದ್ದ ಹಲವರನ್ನು ಮನೆಗಳಿಗೆ ಡ್ರಾಪ್‌ ಮಾಡಲಾಯಿತು. ಪೊಲೀಸ್‌ ವಾಹನಗಳಲ್ಲಿ ಸುಮಾರು 25ರಿಂದ 30 ಟ್ರಿಪ್‌ ಡ್ರಾಪ್‌ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next