ಬೀದರ: ರಾಜ್ಯ ಸರ್ಕಾರ ಅಧೀನದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿಕಾರಗಳಿಗೆ ಸದಸ್ಯರ ನಿಯೋಜನೆಯಲ್ಲಿ ಸರ್ಕಾರ ಬೀದರ ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ ಪ್ರದೇಶದ ಸಾಹಿತಿ, ಕಲಾವಿದರನ್ನು ಕಡೆಗಣಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಈ ಭಾಗದ 6 ಜಿಲ್ಲೆಯ ಕೇವಲ 10 ಜನರಿಗೆ ಮಾತ್ರ ಅಕಾಡೆಮಿ ಸದಸ್ಯತ್ವ ಸ್ಥಾನಕ್ಕೆ ಅವಕಾಶ ಸಿಕ್ಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ರಾಜ್ಯದ ಒಟ್ಟು 16 ಅಕಾಡೆಮಿ, ಪ್ರಾಧಿಕಾರಗಳಿಗೆ 2019, ಅ.15ರಂದು 150 ಜನ ಅಧ್ಯಕ್ಷ ಮತ್ತು ಸದಸ್ಯರುಗಳನ್ನು ನೇಮಕ ಮಾಡಿ ಆದೇಶಿಸಿದ್ದ ರಾಜ್ಯ ಸರ್ಕಾರ ಈಗ ಬಾಕಿ ಉಳಿದಿದ್ದ 47 ಸದಸ್ಯರನ್ನು ನೇಮಿಸಿದೆ. ಈ ಅಕಾಡೆಮಿಗಳಿಗೆ ಸದಸ್ಯರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿದ್ದು, ಸರ್ಕಾರ ಪ್ರಾದೇಶಿಕ ಅಸಮತೋಲನ ಮಾಡಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಅಧಿಕಾರದ ಅವಧಿಯಲ್ಲಿ ವಿವಿಧ ಅಕಾಡೆಮಿಗಳಿಗೆ ಬೀದರ ಜಿಲ್ಲೆಯ 5 ಜನ ಸೇರಿ ಕಲ್ಯಾಣ ಕರ್ನಾಟಕ ಪ್ರದೇಶದಿಂದ ಒಟ್ಟು 24 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಿ ಈ ಭಾಗಕ್ಕೂ ಪ್ರಾತಿನಿಧ್ಯ ಕಲ್ಪಿಸಲಾಗಿತ್ತು. ಆದರೆ, ಈ ಬಾರಿ ಗಡಿ ಜಿಲ್ಲೆ ಬೀದರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎರಡು ಹಂತದ ನೇಮಕಾತಿ ಸೇರಿ ಕೇವಲ 10 ಜನರಿಗೆ ಮಾತ್ರ ಸದಸ್ಯರಾಗುವ ಯೋಗ ಸಿಕ್ಕಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಬೀದರನ ಹಾಸ್ಯ ನಟ ವೈಜನಾಥ ಬಿರಾದಾರ ನಾಟಕ ಅಕಾಡೆಮಿಗೆ ಸದಸ್ಯರಾಗಿದ್ದಾರೆ.
ಹೆಸರಿಗಷ್ಟೇ ಕಲ್ಯಾಣ ಕರ್ನಾಟಕ: ಬೀದರ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಂದಿ ಸಾಹಿತಿಗಳು ಮತ್ತು ಬರಹಗಾರರಿದ್ದು, ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳು ಈ ನೆಲದಲ್ಲಿ ನಡೆಯುತ್ತಿವೆ. ಆದರೂ ಸರ್ಕಾರದ ಸಾಂಸ್ಕೃತಿಕ ಸಂಘಟನೆಗಳ ಜವಾಬ್ದಾರಿ ವಿಷಯದಲ್ಲಿ ಮಾತ್ರ ಈ ಪ್ರದೇಶವನ್ನು ಪರಿಗಣಿಸಿಲ್ಲ. ಈ ಕಡೆಗಣನೆಯಿಂದ ಆಯಾ ಕ್ಷೇತ್ರಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವವರಿಲ್ಲದೇ ಜಿಲ್ಲೆಗೆ ಅನ್ಯಾಯವಾಗುತ್ತದೆ. ಸರ್ಕಾರದ ಕಲ್ಯಾಣ ಕರ್ನಾಟಕ ಘೋಷಣೆ ಕೇವಲ ಹೆಸರಿಗಷ್ಟೇ ಸೀಮಿತವಾಗುತ್ತಿದೆ. ರಾಜ್ಯದ 16 ಅಕಾಡೆಮಿ, ಪ್ರಾಧಿಕಾರಗಳಿಗೆ 5ರಿಂದ 18 ಸದಸ್ಯ ಸ್ಥಾನಗಳು ಹೊಂದಿದ್ದು, ಸರ್ಕಾರ ಎರಡು ಹಂತದಲ್ಲಿ 197 ಸದಸ್ಯರನ್ನು ನೇಮಕ ಮಾಡಿದೆ. ಲಲಿತ ಕಲಾ ಅಕಾಡೆಮಿ, ಬಯಲಾಟ ಮತ್ತು ಯಕ್ಷಗಾನ ಅಕಾಡೆಮಿಯ ಕೆಲವು ಸದಸ್ಯ ಸ್ಥಾನಗಳ ನೇಮಕ ಬಾಕಿ ಉಳಿದಿದೆ. ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ವಿಚಾರದಲ್ಲಿ ಈ ಪ್ರದೇಶದವರಿಗೆ ನೇಮಕಕ್ಕೆ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಆಸಕ್ತಿ ತೋರಲಿಲ್ಲ ಎಂಬ ಆರೋಪ ಎದುರಾಗಿದ್ದು, ಪ್ರಾದೇಶಿಕ ಅಸಮಾನತೆಯಿಂದ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ನಷ್ಟವಾಗಲಿದೆ.
ಸರ್ಕಾರದ ಅಕಾಡೆಮಿ, ಪ್ರಾಧಿಕಾರಗಳಿಗೆ ಸದಸ್ಯರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನೇ ನಿರ್ಲಕ್ಷಿಸಲಾಗಿದೆ. ಕಳೆದ ಅವಧಿಯಲ್ಲಿ ಬೀದರ ಜಿಲ್ಲೆಯ 5 ಮಂದಿ ಸೇರಿ ಈ ಭಾಗದಲ್ಲಿ 24 ಜನ ಸದಸ್ಯರಿದ್ದರು. ಈ ಬಾರಿ ಕೇವಲ 10 ಜನರಿಗೆ ಅವಕಾಶ ಸಿಕ್ಕಿದ್ದು, ಬೀದರನ್ನು ಸಂಪೂರ್ಣ ನಿರ್ಲಕ್ಷಿಸಿರುವುದು ಬೇಸರದ ಸಂಗತಿ. ಇದು ಪ್ರಾದೇಶಿಕ ಅಸಮಾನತೆಗೆ ಹಿಡಿದ ಕನ್ನಡಿಯಾಗಿದೆ. –
ವಿಜಯಕುಮಾರ ಸೋನಾರೆ, ಅಧ್ಯಕ್ಷರು, ಜಿಲ್ಲಾ ಕಲಾವಿದರ ಒಕ್ಕೂಟ, ಬೀದರ
-ಶಶಿಕಾಂತ ಬಂಬುಳಗೆ