Advertisement

ಆಟೋ ಟಿಪ್ಪರ್‌ಗಳಿಗೆ ತುರ್ತಾಗಿ ತಾತ್ಕಾಲಿಕ ಚಾಲಕರ ನೇಮಕ

04:22 PM Jun 03, 2018 | |

ಹುಬ್ಬಳ್ಳಿ: ತ್ಯಾಜ್ಯ ಸಾಗಣೆ ಆಟೋ ಟಿಪ್ಪರ್‌ಗಳಿಗೆ ತುರ್ತಾಗಿ ತಾತ್ಕಾಲಿಕ ಚಾಲಕರನ್ನು ನೇಮಕ ಮಾಡಿಕೊಳ್ಳಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಮಹಾಪೌರ ಸುಧೀರ ಸರಾಫ್ ಆದೇಶಿಸಿದರು. ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅವಳಿನಗರ ಸ್ವತ್ಛತೆ ಕುರಿತ ಚರ್ಚೆಯಲ್ಲಿ ಸದಸ್ಯರಾದ ಗಣೇಶ ಟಗರಗುಂಟಿ, ಮೋಹನ ಹಿರೇಮನಿ ಅವರು ಆಟೋಟಿಪ್ಪರ್‌ಗಳಿಗೆ ಚಾಲಕರ ನೇಮಕದಲ್ಲಿ ತಾರತಮ್ಯ ತೋರಲಾಗಿದೆ ಎಂದು ಆರೋಪಿಸಿದರು.

Advertisement

ಪರಿಸರ ವಿಭಾಗದ ಗಿರೀಶ ತಳವಾರ ಮಾತನಾಡಿ, ವಲಯವಾರು ಆಟೋಟಿಪ್ಪರ್‌ಗಳ ನಿರ್ವಹಣೆಗೆ ನೀಡಲಾಗುತ್ತದೆ ಎಂದರಾದರೂ, ಚಾಲಕರ ನೇಮಕಾತಿ ಕುರಿತು ಸದಸ್ಯರ ಆಕ್ಷೇಪಗಳಿಗೆ ಸ್ಪಷ್ಟ ಉತ್ತರ ನೀಡಲಿಲ್ಲ.  ಸದಸ್ಯ ವೀರಣ್ಣ ಸವಡಿ ಮಾತನಾಡಿ, ಚಾಲಕರ ನೇಮಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಪ್ರಸ್ತಾವನೆ ಬರಲಿ ಅದು ನಿಯಮಕ್ಕೆ ವಿರುದ್ಧವಾಗಿದ್ದರೆ ತಿರಸ್ಕರಿಸೋಣ. ಆಟೋಟಿಪ್ಪರ್‌ಗಳು ಬಂದಿದ್ದರೂ ಅವುಗಳಿಗೆ ಚಾಲಕರಿಲ್ಲ ಎಂದರೆ ಪ್ರತಿ ವಾರ್ಡ್‌ನ ಸದಸ್ಯರಿಗೆ ಒಂದೊಂದು ಕೊಟ್ಟು ಬಿಡಿ ನಾವೇ ಅವುಗಳನ್ನು ಚಲಾಯಿಸಿ ತ್ಯಾಜ್ಯ ಸಂಗ್ರಹಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಸದಸ್ಯರು ಆಟೋಟಿಪ್ಪರ್‌ ಗಳು ಬಂದಿವೆ. ಅದಕ್ಕೆ ಚಾಲಕರ, ಡೀಸೆಲ್‌ ಇನ್ನಿತರ ಕುರಿತಾಗಿ ಮುಂಜಾಗ್ರತಾ ವ್ಯವಸ್ಥೆ ಕೈಗೊಂಡಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು. 

ಮಹಾಪೌರ ಸುಧೀರ ಸರಾಫ್ ಮಾತನಾಡಿ, ಆಟೋಟಿಪ್ಪರ್‌ಗಳಿಗೆ ಮುಂದೆ ಚಾಲಕರ ನೇಮಕ ಆಗುವವರೆಗೆ ತಾತ್ಕಾಲಿಕ ಚಾಲಕರನ್ನು ತುರ್ತಾಗಿ ನೇಮಕ ಮಾಡಿ ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ರವಾನಿಸಬೇಕೆಂದು ಆದೇಶಿಸಿದರು. ಪಾಲಿಕೆಗೆ ಆಗಮಿಸಿದ ಸುಮಾರು 55 ಆಟೋಟಿಪ್ಪರ್‌ಗಳಿಗೆ ಮಹಾಪೌರ ಸುಧೀರ ಸರಾಫ್ ಚಾಲನೆ ನೀಡಿದರು. ಉಪಮಹಾಪೌರ ಮೇನಕಾ ಹುರಳಿ, ವಿಪಕ್ಷ ನಾಯಕ ಗಣೇಶ ಟಗರಗುಂಟಿ, ಜೆಡಿಎಸ್‌ ಧುರೀಣ ರಾಜು ಅಂಬೋರೆ, ಮಾಜಿ ಮಹಾಪೌರರಾದ ಶಿವು ಹಿರಮೇಠ, ಡಿ.ಕೆ. ಚವ್ಹಾಣ, ಆಯುಕ್ತ ಇಬ್ರಾಹಿಂ ಮೈಗೂರು ಇನ್ನಿತರರಿದ್ದರು.

ಪೌರಕಾರ್ಮಿಕರು ನಿಗದಿತ ಸಂಖ್ಯೆಯಲ್ಲಿಲ
ಜೆಡಿಎಸ್‌ ಸದಸ್ಯ ರಾಜಣ್ಣಾ ಕೊರವಿ ಮಾತನಾಡಿ, ಪೌರಕಾರ್ಮಿಕರು ಹೇಳುವ ಸಂಖ್ಯೆ ಒಂದಾಗಿದ್ದರೆ, ವಾಸ್ತವಿಕವಾಗಿ ಕೆಲಸಕ್ಕೆ ಬರುವವರ ಸಂಖ್ಯೆ ಮತ್ತೊಂದು ಆಗಿರುತ್ತದೆ. ನನ್ನ ವಾರ್ಡ್ ನಲ್ಲಿ ಲೆಕ್ಕದ ಪ್ರಕಾರ 28 ಪೌರಕಾರ್ಮಿಕರಿರಬೇಕು. ಆದರೆ, ಬರುವುದು 7-8 ಜನ ಮಾತ್ರ. ಹೀಗಾದರೆ ಸ್ವಚ್ಛತೆ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಸದಸ್ಯರಾದ ಸುಧಾ ಮಣಿಕುಂಟ್ಲ, ದೀಪಾ ನಾಗರಾಜ ಇನ್ನಿತರರು ಇದಕ್ಕೆ ಧ್ವನಿಗೂಡಿಸಿ ತಮ್ಮ ವಾರ್ಡ್‌ಗಳಲ್ಲಿಯೂ ಇದೇ ಸ್ಥಿತಿ ಇದೆ ಎಂದರು. ಪರಿಸರ ವಿಭಾಗದ ನಯನಾ ಮಾತನಾಡಿ, ಪೌರಕಾರ್ಮಿಕರಲ್ಲಿ ಕೆಲವರು ನಿವೃತ್ತಿ ಹೊಂದಿದ್ದು, ಇನ್ನು ಕೆಲವರು ಕೆಲಸಕ್ಕೆ ಬರುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next