Advertisement

ಉಸ್ತುವಾರಿ ನೇಮಕ, ಕಾಂಗ್ರೆಸ್‌ನಲ್ಲಿ ಅಸಮಾಧಾನ

06:05 AM Aug 02, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.

Advertisement

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಹೇಳಿದಂತೆ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವರಿಗೆ ಬೇಡದ ಜಿಲ್ಲೆಗಳಿಗೆ ಹೊಣೆಗಾರಿಕೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹಾವೇರಿ ಜಿಲ್ಲಾ ಉಸ್ತುವಾರಿ ಬಯಸಿದ್ದ ಆರ್‌.ಶಂಕರ್‌ ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ನೀಡಿರುವುದು, ಬೆಂಗಳೂರು ಗ್ರಾಮಾಂತರ, ತುಮಕೂರು ಅಥವಾ ಕೋಲಾರ ಜಿಲ್ಲೆಯ ಉಸ್ತುವಾರಿ ಬಯಸಿದ್ದ ಜಮೀರ್‌ ಅಹಮದ್‌ ಅವರಿಗೆ ಹಾವೇರಿ ಉಸ್ತುವಾರಿ ನೀಡಿರುವುದರಿಂದ ಅವರು ಬೇಸರಗೊಂಡಿದ್ದಾರೆ. ಕೆ.ಜೆ.ಜಾರ್ಜ್‌ ಅವರಿಗೆ ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ನೀಡಿರುವುದಕ್ಕೆ ಸಮಾಧಾನವಿಲ್ಲ ಎಂದು ಹೇಳಲಾಗಿದೆ.

ಅದರಲ್ಲೂ ಡಾ.ಜಿ.ಪರಮೇಶ್ವರ್‌ ಅವರಿಗೆ ಬೆಂಗಳೂರು ನಗರ ಹಾಗೂ ತುಮಕೂರು, ಡಿ.ಕೆ.ಶಿವಕುಮಾರ ಅವರಿಗೆ ರಾಮನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ನೀಡಿರುವ ಬಗ್ಗೆ ಪಕ್ಷದಲ್ಲೇ ಹಲವು ಸಚಿವರಿಗೆ ಬೇಸರವಿದೆ ಎಂದು ಹೇಳಲಾಗಿದೆ. ಆದರೆ, ಬಿಜೆಪಿಯಿಂದ ಆಪರೇಷನ್‌ ಕಮಲ ಕಾರ್ಯಾಚರಣೆ ಭೀತಿ ಇರುವುದರಿಂದ ಡಿ.ಕೆ.ಶಿವಕುಮಾರ್‌ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಅಲ್ಲಿನ ಕಾಂಗ್ರೆಸ್‌ ಶಾಸಕರಾದ ಆನಂದ್‌ಸಿಂಗ್‌ ಹಾಗೂ ನಾಗೇಂದ್ರ ಅವರ ಮೇಲೆ ನಿಗಾ ವಹಿಸಲು ಹಾಗೂ ಅವರನ್ನು ಹಿಡಿದಿಟ್ಟುಕೊಳ್ಳಲು ಹೈಕಮಾಂಡ್‌ ನಿರ್ದೇಶನದ ಮೇರೆಗೆ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಡಾ.ಜಿ.ಪರಮೇಶ್ವರ್‌ ಅವರು ಬೆಂಗಳೂರು ನಗರದ ಜತೆಗೆ ತುಮಕೂರು ಜಿಲ್ಲೆಯ ಉಸ್ತುವಾರಿ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಅವರಿಗೂ ಮಣೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

Advertisement

ನಾನು ಹಾವೇರಿ ಜಿಲ್ಲೆಯವ‌ನು, ಹಾವೇರಿ ಜಿಲ್ಲೆಯ ಉಸ್ತುವಾರಿ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ನನಗೆ ಕೊಪ್ಪಳ ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಾರೆ.  ಈಗಾಗಲೇ ಹಾವೇರಿಯಿಂದ ಬೆಂಬಲಿಗರು ದೂರವಾಣಿ ಮಾಡಿ ಕೇಳುತ್ತಿದ್ದಾರೆ. ಹೀಗಾಗಿ, ಜಿಲ್ಲಾ ಉಸ್ತುವಾರಿ ಬದಲಾಯಿಸಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ಬಳಿ ಚರ್ಚಿಸುತ್ತೇನೆ.
– ಆರ್‌.ಶಂಕರ್‌,ಅರಣ್ಯ ಸಚಿವ

ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸಿರುವುದರಲ್ಲಿ ಯಾವುದೇ ಅಸಮಾಧಾನ ಇಲ್ಲ. ಆ ರೀತಿ ಏನಾದರೂ ಇದ್ದರೂ ಮುಖ್ಯಮಂತ್ರಿಯವರ ಜತೆ ಕುಳಿತು ಮಾತನಾಡುತ್ತೇವೆ. ಅದಕ್ಕೆ ಅವಕಾಶವಂತೂ ಇದೆ.
– ಡಾ.ಜಿ.ಪರಮೇಶ್ವರ್‌

ನನಗೆ ನೀಡಿರುವ ಕೊಡಗು ಜಿಲ್ಲಾ ಉಸ್ತುವಾರಿ ಸ್ಥಾನ ತೃಪ್ತಿ ತಂದಿದೆ. ಪ್ರವಾಸೋದ್ಯಮ ಇಲಾಖೆ ಬಗ್ಗೆಯಾಗಲಿ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆಯಾಗಲಿ ನನಗೆ ಬೇಸರವಿಲ್ಲ. 
-ಸಾ.ರಾ.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next