Advertisement

ಉಪ್ಪೂರು ಬಿಲ್ಲಾ ಅನುದಾನಿತ ಹಿ.ಪ್ರಾ.ಶಾಲೆಗೆ ಶಿಕ್ಷಕರ ನೇಮಕ 

06:00 AM Jul 10, 2018 | |

ಉಡುಪಿ: ಅಳಿಯುವ ಹಂತದಲ್ಲಿರುವ ಕನ್ನಡ ಶಾಲೆಯಾದ ಉಪ್ಪೂರು ಬಿಲ್ಲಾ ಅನುದಾನಿತ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕೆನ್ನುವ ಮತ್ತು ಶಾಲಾ ಉಳಿವಿಗಾಗಿ ಮಣಿಪಾಲದ ನವ್ಯಚೇತನ ಶಿಕ್ಷಣ ಸಂಶೋಧನೆ ಹಾಗೂ ಕಲ್ಯಾಣ ಟ್ರಸ್ಟ್‌ ಕಳೆದ ವರ್ಷದಿಂದ ಮೂವರು ಶಿಕ್ಷಕರನ್ನು ನೇಮಿಸಿ ಶಿಕ್ಷಣ ಸೇವೆ ನೀಡುವಲ್ಲಿ ವಿನೂತನ ಪ್ರಯೋಗ ನಡೆಸಿದೆ.

Advertisement

ಇಂಗ್ಲಿಷ್‌, ಸಂಗೀತ, ಚಿತ್ರಕಲೆ ಶಿಕ್ಷಣ
1ರಿಂದ 7ನೇ ತರಗತಿ ವರೆಗೆ ಶಿಕ್ಷಣ ನೀಡುತ್ತಿರುವ ಈ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌, ಸಂಗೀತ ಮತ್ತು ಚಿತ್ರಕಲೆ ಶಿಕ್ಷಕರನ್ನು ಟ್ರಸ್ಟ್‌ ನೇಮಿಸಿದೆ. ವಿದ್ಯಾರ್ಥಿಗಳ ಆಂಗ್ಲ ಭಾಷಾ ಜ್ಞಾನ ವೃದ್ಧಿಗೆ ಪೂರಕವಾಗುವಂತೆ ಇಂಗ್ಲಿಷ್‌ ಶಿಕ್ಷಕರಿಂದ ನ್ಪೋಕನ್‌ ಇಂಗ್ಲಿಷ್‌ ತರಗತಿ ನಡೆಸಲಾಗುತ್ತಿದೆ. ಸಂಗೀತ ಶಿಕ್ಷಕರು ಶಾಸ್ತ್ರೀಯ ಸಂಗೀತದೊಂದಿಗೆ ಪ್ರಾರ್ಥನೆ, ನಾಡಗೀತೆ, ರಾಷ್ಟ್ರಗೀತೆ, ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವಂತೆ ಕಲಿಸಿಕೊಡುತ್ತಿದ್ದಾರೆ. ಚಿತ್ರಕಲೆ ಶಿಕ್ಷಕರು ವಿದ್ಯಾರ್ಥಿಗಳ ತರಗತಿಗೆ ಅನುಗುಣವಾಗಿ ರೇಖಾಚಿತ್ರ, ವಸ್ತುಚಿತ್ರ ಇತ್ಯಾದಿಗಳನ್ನು ಕಲಿಸುತ್ತಿದ್ದಾರೆ.

ಟ್ರಸ್ಟಿನ ಸಮಾಜಮುಖೀ ಕಾರ್ಯ
ಕಳೆದ ವರ್ಷ ಶಾಲೆಯಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಿದ ಟ್ರಸ್ಟ್‌, ಅವುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿ ಕೊಂಡಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರವನ್ನೂ ನೀಡಿದೆ. 

“ಬಿಲ್ಲಾ’ ಹೆಸರಿನ ಹಿನ್ನೆಲೆ
ಹಿಂದೆ ಉಪ್ಪೂರು ಜಾತಬೆಟ್ಟು ಮಠದ ಮನೆಯಲ್ಲಿ ಶಾಲೆ ನಡೆಯುತ್ತಿದ್ದು, ವೆಂಕಟರಮಣ ಉಪಾಧ್ಯಾಯರು ಶಿಕ್ಷಕರಾಗಿದ್ದರು. ಮುಂದೆ ಜಾತಬೆಟ್ಟು ಗೌರಮ್ಮ ಮೇಲಂಟರ ಮನೆಯಲ್ಲಿ ಬಿಲ್ಲವ ಮುಖಂಡ ವೆಂಕಟ ಪೂಜಾರಿಯವರು ಶಿಕ್ಷಕರಾಗಿ ಶಾಲೆಯು ತಾತ್ಕಾಲಿಕ ಮಾನ್ಯತೆಯೊಂದಿಗೆ ಮುಂದುವರಿಯಿತು. ಅನಂತರ ಯು.ಕೆ. ಗೋವಿಂದ ಶೆಟ್ಟಿಯವರು ಶಾಲೆ ನಡೆಸಲು ಸರಕಾರದಿಂದ ಶಾಶ್ವತ ಮಾನ್ಯತೆ ಪಡೆದು ವೆಂಕಟ ಪೂಜಾರಿಯವರ ಸ್ಮರಣಾರ್ಥ ಈ ಶಾಲೆಗೆ “ಉಪ್ಪೂರು ಬಿಲ್ಲಾ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ’ ಎಂದು ಹೆಸರಿಟ್ಟು ಮುಂದುವರಿಸಿದರು. ಪ್ರಸ್ತುತ ಸಂಚಾಲಕರಾಗಿ ಹರಿಕೃಷ್ಣ ಪುನರೂರು ಕಾರ್ಯನಿರ್ವಹಿಸುತ್ತಿದ್ದಾರೆ.

ಹೊಸ ಚೈತನ್ಯ
ಟ್ರಸ್ಟ್‌ ಕಳೆದ ವರ್ಷಗಳಿಂದ ಶಾಲೆಯಲ್ಲಿ ಮೂವರು ಶಿಕ್ಷಕರನ್ನು ನೇಮಿಸಿದ ಹಿನ್ನೆಲೆಯಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆ ಮತ್ತೆ ಮುಂದುವರಿಯುವ ಹೊಸ ಚೈತನ್ಯ ಪಡೆದಿದೆ. ಶಾಲೆಯಲ್ಲಿ ದಾನಿಗಳ ನೆರವಿನಿಂದ ನಾಲ್ವರು ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. 2013-14ನೇ ಸಾಲಿನಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ (ಸರಕಾರಿ ನೇಮಕ) ಉಳಿದವರೆಲ್ಲರೂ ಗೌರವ ಶಿಕ್ಷಕರು. ಸರಕಾರಿ ಶಾಲೆಗಳಲ್ಲಿ 15 – 20 ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿದ್ದಾರೆ. ಆದರೆ ಖಾಸಗಿ ಅನುದಾನಿತ ಶಾಲೆಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು. ಇದು ಸರಕಾರದ ಮಲತಾಯಿ ಧೋರಣೆಯಾಗಿದೆ. 
– ಜಯಪ್ರಕಾಶ್‌ ಕುಮಾರ್‌,ಮುಖ್ಯೋಪಾಧ್ಯಾಯರು, ಉಪ್ಪೂರು ಬಿಲ್ಲಾ ಅ.ಹಿ.ಪ್ರಾ.ಶಾಲೆ

Advertisement

ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
ಟ್ರಸ್ಟಿನಿಂದ ಮೂವರು ಶಿಕ್ಷಕರನ್ನು ನೇಮಿಸಿದ ನೆಲೆಯಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತುಸು ಏರಿಕೆ ಕಂಡಿದ್ದಲ್ಲದೆ, ಶಾಲಾಭಿವೃದ್ಧಿಗೂ ಪೂರಕವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾದಲ್ಲಿ ಆವಶ್ಯಕತೆಗೆ ಅನುಗುಣವಾಗಿ ಇನ್ನಷ್ಟು ಶಿಕ್ಷಕರನ್ನು ಟ್ರಸ್ಟ್‌ ವತಿಯಿಂದ ನೇಮಿಸಲಾಗುವುದು.
– ಡಾ|ಶಿವಾನಂದ ನಾಯಕ್‌
ಅಧ್ಯಕ್ಷರು, ನವ್ಯಚೇತನ ಶಿಕ್ಷಣ ಸಂಶೋಧನೆ/ಕಲ್ಯಾಣ ಟ್ರಸ್ಟ್‌ ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next