Advertisement

ಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಿಸಿ

11:53 AM Jul 13, 2018 | |

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸ್ತಕ ಸಾಲಿನಿಂದ ರಂಗ ಶಿಕ್ಷಕರನ್ನು ನೇಮಿಸಿ, ರಂಗ ಪದವೀಧರರಿಗೆ ಉದ್ಯೋಗ ಒದಗಿಸುವಂತೆ ಕರ್ನಾಟಕ ನಾಟಕ ಅಕಾಡೆಮಿ ಒತ್ತಾಯಿಸಿದೆ.

Advertisement

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌, ನೀನಾಸಂ, ಸಾಣೇಹಳ್ಳಿ ಒಳಗೊಂಡಂತೆ ರಾಜ್ಯದ ವಿವಿಧ ರಂಗಶಾಲೆ ಹಾಗೂ ವಿಶ್ವವಿದ್ಯಾಲಯಗಳಿಂದ ಪ್ರತಿ ವರ್ಷ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಪ್ಲೊಮಾ ಹಾಗೂ ಪದವಿ ಪಡೆದು ಹೊರ ಬರುತ್ತಿದ್ದಾರೆ.

ಆದರೆ ಉದ್ಯೋಗ ಅವಕಾಶಗಳೇ ಇಲ್ಲದ ಕಾರಣ ರಂಗ ಪದವೀಧರರ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಸರ್ಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರಿ, ಅನುದಾನಿತ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಶಾಲಾ ಶಿಕ್ಷಣದಲ್ಲಿ ರಂಗಕಲೆ ಅಳವಡಿಸಬೇಕು, ರಂಗಕಲೆ ಮೂಲಕ ಶಿಕ್ಷಣ ನೀಡಬೇಕು, ರಂಗಭೂಮಿ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬುದು ರಂಗಕರ್ಮಿಗಳ ಬಹುದಿನಗಳ ಬೇಡಿಕೆಯಾಗಿದೆ. ಇದರಿಂದ ಶಿಕ್ಷಣದ ಚಿತ್ರಣವೇ ಬದಲಾಗುತ್ತದೆ. ಈ ನಿಟ್ಟಿನಲ್ಲಿ ರಂಗ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ರಂಗಾಸಕ್ತರು ಅನೇಕ ವರ್ಷದಿಂದ ಸರ್ಕಾರಕ್ಕೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದಾರೆ.

ದಶಕದ ಹಿಂದೆ 54 ರಂಗ ಶಿಕ್ಷಕರನ್ನು ಆಯ್ಕೆ ಮಾಡಿದ್ದು ಬಿಟ್ಟರೆ ಇದುವರೆಗೂ ನೇಮಕ ಪ್ರಕ್ರಿಯೆ ನಡೆದಿಲ್ಲ ಎಂದು ಮಾಹಿತಿ ನೀಡಿದರು. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಡಿ ಬರುವ 800ಕ್ಕೂ ಅಧಿಕ ವಸತಿ ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಸಮಾಜ ಕಲ್ಯಾಣ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಅಕಾಡೆಮಿಯಿಂದ ಪತ್ರ ಬರೆಯಲಾಗಿತ್ತು.

Advertisement

ಸಚಿವರೂ ಸ್ಪಂದಿಸಿದ್ದರು. ಇದೀಗ ಸಮ್ಮಿಶ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಲೋಕೇಶ್‌ ಮನವಿ ಮಾಡಿದರು. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಹಾಗೂ ನಾಟಕ ಅಕಾಡೆಮಿ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next