Advertisement

ಗುಪ್ತಚರ ವಿಭಾಗಕ್ಕೆ ರಾಜಕೀಯ ಗೂಢಚಾರರ ನೇಮಕ

06:35 AM Aug 17, 2017 | |

ಬೆಂಗಳೂರು: ಕಾನೂನು ಸುವ್ಯವಸ್ಥೆ ಜತೆ ರಾಜಕೀಯ ಮಾಹಿತಿಯನ್ನೂ ಸಂಗ್ರಹಿಸುವ ಉದ್ದೇಶದಿಂದ ರಾಜ್ಯ ಗುಪ್ತಚರ ಇಲಾಖೆಯ ರಾಜಕೀಯ ವಿಭಾಗಕ್ಕೆ ನಿವೃತ್ತ ಪೊಲೀಸ್‌ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ.

Advertisement

ಚುನಾವಣೆ ಹತ್ತಿರ ಬರುತ್ತಿದ್ದಂತೆ ಗುಪ್ತಚರ ಇಲಾಖೆಯ ರಾಜಕೀಯ ವಿಭಾಗಕ್ಕೆ ಮಾಹಿತಿ ಸಂಗ್ರಹಿಸುವ ಕೆಲಸ ಸಹಜವಾಗಿ ಇರುತ್ತದೆ. ಆದರೆ ಅದಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನೇನು ನೇಮಿಸಿಕೊಳ್ಳುವುದಿಲ್ಲ. ಇರುವ ಸಿಬ್ಬಂದಿಯಲ್ಲೇ ಆ ಕೆಲಸ ಮಾಡಿ ಮುಗಿಸುತ್ತಾರೆ. ಆದರೆ ಈ ಬಾರಿ ಹೆಚ್ಚುವರಿಯಾಗಿ ನಿವೃತ್ತ ಪೊಲೀಸ್‌ ಅಧಿಕಾರಿಗಳನ್ನು ಗುಪ್ತಚರ ವಿಭಾಗದ ರಾಜಕೀಯ ವಿಭಾಗಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ನಿವೃತ್ತ ಪೊಲೀಸ್‌ ಅಧಿಕಾರಿಗಳ ಮೂಲಕ “ಚುನಾವಣಾ ರಾಜಕೀಯ ‘ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಯೋಚಿಸಿದೆ.

ಸ್ಥಳೀಯವಾಗಿ ಕೆಲಸ ಮಾಡಿರುವ ನಿವೃತ್ತ ಪೊಲೀಸ್‌ ಅಧಿಕಾರಿಗಳಿಗೆ ತಾವು ಕೆಲಸ ಮಾಡಿದ ಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಅರಿವಿರುತ್ತದೆ. ಜತೆಗೆ ಅಲ್ಲಿನ ಜನರ, ಮುಖಂಡರ ಸಂಪರ್ಕವೂ ಇರುವುದರಿಂದ ರಾಜಕೀಯವಾಗಿ ಜನರ ನಾಡಿಮಿಡಿತ ತಿಳಿಯಲು ಸಹಕಾರಿಯಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ.

ನಿವೃತ್ತ ಎಸ್ಪಿ, ಡಿಸಿಪಿ ದರ್ಜೆ ಅಧಿಕಾರಿಗಳ ಬಳಕೆ
ಸಾಮಾನ್ಯವಾಗಿ ಪ್ರತಿ ಚುನಾವಣೆ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಮಾಹಿತಿ ಆಧಾರದ ಮೇಲೆಯೇ ಆಡಳಿತ ಪಕ್ಷದ ನಾಯಕರು ಚುನಾವಣಾ ಕಾರ್ಯತಂತ್ರ ರೂಪಿಸುತ್ತಾರೆ. ಈ ಬಾರಿಯೂ ಸಮೀಕ್ಷೆ ನಡೆಸಲು ಗುಪ್ತಚರ ಇಲಾಖೆ ಸಿದ್ಧತೆ ನಡೆಸಿದೆ. ವಿಶೇಷವೆಂದರೆ ಈ ಸಮೀಕ್ಷೆಗೆ ಪೊಲೀಸ್‌ ಇಲಾಖೆಯಲ್ಲಿ ಒಳ್ಳೆಯ ಹೆಸರು ಗಳಿಸಿ ನಿವೃತ್ತರಾದ ಎಸ್ಪಿ ಮತ್ತು ಡಿಸಿಪಿ ವರ್ಗದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಅವರಿಗೆ ಸ್ಥಳೀಯ ಪರಿಸ್ಥಿತಿ ಮತ್ತು ವಿದ್ಯಮಾನಗಳ ಪರಿಚಯ ಹೆಚ್ಚು ಇರುವುದರಿಂದ ಈ ನಿವೃತ್ತ ಅಧಿಕಾರಿಗಳು ನಡೆಸುವ ಸಮೀಕ್ಷೆ ಆಧರಿಸಿ ರಾಜಕೀಯ ತೀರ್ಮಾನಗಳು, ಕಾನೂನು ಸುವ್ಯವಸ್ಥೆ ಕಾಪಾಡಲು ಸಹ ನೆರವಾಗುತ್ತದೆ. ಜತೆಗೆ ಗುಪ್ತಚರ ಇಲಾಖೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಕೂಡ ಅನುಕೂಲವಾಗುತ್ತದೆ ಎಂದು ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

25 ಅಧಿಕಾರಿಗಳ ಪಟ್ಟಿ ಸಿದ್ಧ
ಈ ಸಂಬಂಧ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿರುವ ಎಎಂಎನ್‌ ಪ್ರಸಾದ್‌ ಅವರು ತಳಮಟ್ಟದಲ್ಲಿ ಮಾಹಿತಿ ಸಂಗ್ರಹಿಸುವ ಸಾಮರ್ಥಯವಿರುವ ನಿವೃತ್ತ ಅಧಿಕಾರಿಗಳ ಸುಮಾರು 25 ಮಂದಿಯ ಪಟ್ಟಿ ಸಿದ್ಧಪಡಿಸಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಗುಪ್ತಚರ ಇಲಾಖೆ, ಸಿಸಿಬಿ ಮತ್ತು ಜಿಲ್ಲೆಯಲ್ಲಿ ಕರ್ತವ್ಯನಿರ್ವಹಿಸಿದ ಅಧಿಕಾರಿಗಳು ಹಾಗೂ ತಳಮಟ್ಟದಲ್ಲಿ ಬಾತ್ಮೀದಾರರನ್ನು ಹೊಂದಿರುವ ಅಧಿಕಾರಿಗಳಿಗೆ ಆದ್ಯತೆ ನೀಡಲಾಗಿದೆ. ಈ ಅಧಿಕಾರಿಗಳಿಗೆ ಸರ್ಕಾರದಿಂದ ಮಾಸಿಕ ಗೌರವ ಧನ ನೀಡಲಾಗುತ್ತದೆ. ಈ ಮೂಲಕ ರಾಜ್ಯದ 224 ವಿಧಾನಸಭಾ ಕ್ಷೇತ್ರದ ಸರ್ವೇ ವರದಿ ಪಡೆಯಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

Advertisement

ಏನೇನು ಮಾಹಿತಿ ಸಂಗ್ರಹ
ಸ್ಥಳೀಯವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದರ ಜತೆಗೆ ಗ್ರಾಮ, ಹೋಬಳಿ ಮಟ್ಟದಲ್ಲಿ ಯಾವ ಪಕ್ಷ ಹಾಗೂ ಅಭ್ಯರ್ಥಿ ಪರವಾಗಿ ಜನರ ಪ್ರತಿಕ್ರಿಯೆ ಇದೆ? ಯಾವ ಜಾತಿ ಮತ್ತು ಧರ್ಮದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು? ಹಾಲಿ, ಮಾಜಿ ಶಾಸಕರ ಪೈಕಿ ಯಾರ ಪರವಾಗಿ ಜನರ ಒಲವು ಇದೆ? ಎಂಬಿತ್ಯಾದಿ ಮಾಹಿತಿಗಳನ್ನು ಈ ನಿವೃತ್ತ ಅಧಿಕಾರಿಗಳು ಸಂಗ್ರಹಿಸಿ ವರದಿ ನೀಡಲಿದ್ದಾರೆ.

ಬಿಜೆಪಿ ಸರ್ಕಾರವೂ ನೇಮಿಸಿತ್ತು
2013ರಲ್ಲಿ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಇದೇ ರೀತಿ ನಿವೃತ್ತ ಕೆಎಎಸ್‌ ಮತ್ತು ಪೊಲೀಸ್‌ ಅಧಿಕಾರಿಗಳನ್ನು ಗುಪ್ತಚರ ಇಲಾಖೆಗೆ ನೇಮಿಸಿಕೊಂಡು ಸಮೀಕ್ಷೆ ನಡೆಸಿತ್ತು. ಅದೇ ರೀತಿ ಈಗ ಕಾಂಗ್ರೆಸ್‌ ಕೂಡ ನಿವೃತ್ತ ಪೊಲೀಸ್‌ ಅಧಿಕಾರಿಗಳ ಮೂಲಕ ಸಮೀಕ್ಷೆ ನಡೆಸಲು ಮುಂದಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ
ಇತ್ತೀಚೆಗೆ ನಡೆದ ಮಂಗಳೂರು ಗಲಭೆ ಹಾಗೂ ಉತ್ತರ ಕರ್ನಾಟಕದಲ್ಲಿ ನಡೆದ ರೈತರ ಮೇಲಿನ ಲಾಠಿಪ್ರಹಾರ ಸೇರಿದಂತೆ ಹತ್ತಾರು ಪ್ರಮುಖ ಪ್ರಕರಣಗಳಲ್ಲಿ ಗುಪ್ತಚರ ಇಲಾಖೆ ಘಟನೆ ಪೂರ್ವ ಮಾಹಿತಿ ಸಂಗ್ರಹಿಸಲು ವಿಫ‌ಲವಾಗಿತ್ತು. ಈ ಹಿನ್ನೆಲೆಯಲ್ಲಿ ತಳಮಟ್ಟದಲ್ಲಿ ಬಾತ್ಮೀದಾರರನ್ನು ಹೊಂದಿರುವ ಅಧಿಕಾರಿಗಳನ್ನೇ ನೇಮಕ ಮಾಡಿಕೊಳ್ಳುವುದರಿಂದ ಅವರಿಂದ ಸಿಗುವ ಮಾಹಿತಿಗಳು ಹೆಚ್ಚು ವಿಶ್ವಾಸಾರ್ಹವಾಗಿರುತ್ತದೆ. ಅದನ್ನು ಆಧರಿಸಿ ಅಹಿತಕರ ಘಟನೆಗಳನ್ನು ಆರಂಭದಲ್ಲೇ ತಡೆಯಲು ಸಾಧ್ಯವಾಗುತ್ತದೆ.

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next