ಬೆಂಗಳೂರು: ಸೇವಾವಧಿಯಲ್ಲಿ ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪಕ್ಕೆ ಒಳಗಾದ ಸರಕಾರಿ ನೌಕರರ ವಿರುದ್ಧ ಲೋಕಾ
ಯುಕ್ತ ಮತ್ತು ಉಪ ಲೋಕಾ ಯುಕ್ತರು ಸಲ್ಲಿಸಿ ರುವ ವಿಚಾರಣ ವರದಿಗಳ ಮೇಲೆ ಕ್ರಮ ಕೈಗೊಂಡ ಬಗ್ಗೆ ಸಮಗ್ರ ವರದಿಯನ್ನು ನ್ಯಾಯಾ
ಲಯಕ್ಕೆ ಸಲ್ಲಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಜಂಟಿ ಕಾರ್ಯದರ್ಶಿ (ವಿಚಕ್ಷಣ) ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ವರದಿ ಸಲ್ಲಿಸಿದರು. ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪಕ್ಕೆ ಒಳಗಾಗಿರುವ ಸರಕಾರಿ ನೌಕರರ ವಿರುದ್ಧ ವಿಚಾರಣೆ ನಡೆಸಿ ಕ್ರಮ ಜರಗಿಸಲು ಶಿಫಾರಸು ಮಾಡಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು 1984ರ ಸೆಕ್ಷನ್ 12(1) ಅಡಿಯಲ್ಲಿ ಸಲ್ಲಿಸಿದ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರ ಕೈಗೊಂಡ ಕ್ರಮಗಳ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಮತ್ತು ಈ ವಿಚಾರದಲ್ಲಿ ಸಮನ್ವಯತೆ ಸಾಧಿಸಲು ಸಾಧಿಸಲು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಜಂಟಿ ಕಾರ್ಯದರ್ಶಿ (ವಿಚಕ್ಷಣ) ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಈ ಕುರಿತು 2021ರ ಆ.6ರಂದು ಆದೇಶ ಹೊರಡಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಮುಂದಿನ ಪ್ರಗತಿ ಬಗ್ಗೆ ವರದಿ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು.