ಮಂಡ್ಯ: ರಾಜ್ಯದಲ್ಲಿ ಆಡಳಿತ ಯಂತ್ರ ಸುಗಮವಾಗಿ ನಡೆಯಲು ಸಚಿವ ಸಂಪುಟ ರಚನೆಯಾಗಿದ್ದು, ಶೀಘ್ರ ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸಹಜ ಬೆಳವಣಿಗೆ: ಸಚಿವ ಸಂಪುಟ ರಚನೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಸಂಪುಟ ರಚನೆಯಾದ ವೇಳೆ ಮಂತ್ರಿಸ್ಥಾನ ಸಿಗದವರು ಅತೃಪ್ತಿ ಹೊರಹಾಕಿದರು. ಅದೆಲ್ಲವೂ ಸಹಜ ಬೆಳವಣಿಗೆ. ಈಗ, ಅದೆಲ್ಲವೂ ನಿವಾರಣೆಯಾಗಿದ್ದು ಆಡಳಿತದ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ ಎಂದರು.
ಅನುದಾನ ಕೊರತೆ ಇಲ್ಲ: ಲೋಕೋಪಯೋಗಿ ಇಲಾಖೆಯಿಂದ 400 ಕೋಟಿಗಿಂತ ಹೆಚ್ಚು ಕೆಲಸ ಕಾರ್ಯ ರಾಜ್ಯದಲ್ಲಿ ನಡೆಯುತ್ತಿವೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಉದ್ದೇಶಿತ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಹೇಳಿದರು.
ಕಾರ್ಖಾನೆಗಳ ಆರಂಭಕ್ಕೆ ಕ್ರಮ: ಜಿಲ್ಲೆಯ ಮೈಷುಗರ್ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆಗಳ ಸ್ಥಿತಿ-ಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಎರಡೂ ಕಾರ್ಖಾನೆಗಳ ಆರಂಭಕ್ಕೆ ಸರ್ಕಾರ ಶೀಘ್ರ ಕ್ರಮ ವಹಿಸಲಿದೆ ಎಂದರು.
ಮೈಸೂರು ದಸರಾ ಮಹೋತ್ಸವದ ಆಯೋಜನೆ ವಿಷಯದಲ್ಲಿ ಸ್ಥಳೀಯರನ್ನು ಕಡೆಗಣಿಸುತ್ತಿರುವ ಆರೋಪದ ಬಗ್ಗೆ ಕೇಳಿದಾಗ, ‘ನಾನು ಕನ್ನಡ ಸಂಸ್ಕೃತಿ ಇಲಾಖೆ ಸಚಿವನಾಗಿ ಕೆಲಸ ಮಾಡಿದವನು. ನಾಡಹಬ್ಬವನ್ನು ಆಚರಿಸುವ ಸಮಯದಲ್ಲಿ ಕೆಲವೊಂದು ಸಣ್ಣಪುಟ್ಟ ವ್ಯತ್ಯಾಸ ಸಹಜ. ಅದನ್ನು ಸರಿಪಡಿಸಿಕೊಂಡು ಮಾಡಬೇಕು’ ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ, ನಗರ ಘಟಕದ ಅಧ್ಯಕ್ಷ ಎಚ್.ಆರ್.ಅರವಿಂದ್, ಶಿವಕುಮಾರ ಆರಾಧ್ಯ ಮತ್ತಿತರರಿದ್ದರು.