Advertisement

ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕ?

01:20 PM Jun 25, 2022 | Team Udayavani |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ. ಸದ್ಯ ವಿದ್ಯುತ್‌ಚಾಲಿತ ಬಸ್‌ಗಳಲ್ಲಿ ಚಾಲಕರನ್ನು ಖಾಸಗಿ ಕಂಪನಿಯಿಂದ ನೇಮಿಸಲಾಗುತ್ತಿದೆ.

Advertisement

ಈಗ ಅದರ ಮುಂದುವರಿದ ಭಾಗವಾಗಿ ಗುತ್ತಿಗೆ ಆಧಾರದಲ್ಲಿ 2 ಸಾವಿರಕ್ಕೂ ಅಧಿಕ ಚಾಲಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಿದೆ. ಈ ಸಂಬಂಧ ಈಗಾಗಲೇ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಅನುಮೋದನೆಗೊಂಡಿದ್ದು, ಸರ್ಕಾರದ ಅನುಮೋದನೆಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ. ಒಂದೆಡೆ ಅಂತರ ನಿಗಮಗಳ ವರ್ಗಾವಣೆಯಿಂದ ಎರಡೂವರೆ ಸಾವಿರ ಸಿಬ್ಬಂದಿ ತೆರವಾಗಿದ್ದು, ಈ ಪೈಕಿ ಬಹುತೇಕ ಚಾಲಕರಾಗಿದ್ದಾರೆ. ಮತ್ತೂಂದೆಡೆ ಪ್ರತಿ ತಿಂಗಳು 40ರಿಂದ 50 ಜನ ನಿವೃತ್ತಿ ಹೊಂದುತ್ತಿದ್ದಾರೆ.

ಈ ಮಧ್ಯೆ ಹಣಕಾಸು ಇಲಾಖೆಯಿಂದ ನೇಮಕಾತಿ ಪ್ರಕ್ರಿಯೆಗೆ ಹಸಿರು ನಿಶಾನೆಯೂ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಮಟ್ಟಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿಗೆ ನಿರ್ಧರಿಸಲಾಗಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ. ಅತ್ತ ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾವನೆ ಸಿದ್ಧಗೊಳ್ಳುತ್ತಿದ್ದರೆ, ಇತ್ತ ಎರಡು ಸಾವಿರ ಚಾಲಕರ ನೇಮಕಕ್ಕೆ ಟೆಂಡರ್‌ ಕರೆಯಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ತಿಂಗಳಲ್ಲಿ ಈ ಸಂಬಂಧದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಒಟ್ಟಾರೆ ಅಂದಾಜು 4 ಸಾವಿರ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ವಜಾಗೊಂಡು ಮರುನೇಮಕ ಆಗದವರೂ ಇದರಲ್ಲಿ ಸೇರಿದ್ದಾರೆ.  ಆ ಖಾಲಿ ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ ಸಾವಿರ ಮತ್ತು ಎರಡನೇ ಹಂತದಲ್ಲಿ ಉಳಿದ ಒಂದು ಸಾವಿರ ಜನರನ್ನು ಗುತ್ತಿಗೆ ರೂಪದಲ್ಲಿ ಪಡೆಯಲು ಉದ್ದೇಶಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆ ಅಡಿ ರಸ್ತೆಗಿಳಿಯುತ್ತಿರುವ 90 ಹಾಗೂ ಕೇಂದ್ರದ ಫೇಮ್‌-2 ಯೋಜನೆ ಅಡಿ ರಸ್ತೆಗಿಳಿಯಲಿರುವ 300 ಎಲೆಕ್ಟ್ರಿಕ್‌ ಬಸ್‌ಗಳಲ್ಲಿ ಗುತ್ತಿಗೆ ಪಡೆದ ಕಂಪನಿಗಳೇ ಚಾಲಕರನ್ನು ನಿಯೋಜಿಸುತ್ತಿವೆ. ನಿರ್ವಾಹಕರು ಮಾತ್ರ ಬಿಎಂಟಿಸಿಯವರಾಗಿದ್ದಾರೆ. ಇದರೊಂದಿಗೆ ಖಾಸಗೀಕರಣಕ್ಕೆ ಮುನ್ನುಡಿ ಬರೆಯಲಾಯಿತು. ಇದೇ ಮಾದರಿಯನ್ನು ಉಳಿದೆಡೆಯೂ ಅನುಸರಿಸಲಾಗುತ್ತಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬಿಎಂಟಿಸಿಯ ಖಾಸಗೀಕರಣದ ಹೆಜ್ಜೆಯನ್ನು ತಕ್ಷಣ ಕೈಬಿಡಬೇಕು. ಇದರಿಂದ ಸಾವಿರಾರು ನೌಕರರು ಆತಂಕಕ್ಕೆ ಸಿಲುಕಲಿದ್ದಾರೆ. ಅಷ್ಟೇ ಅಲ್ಲ, ಪರೋಕ್ಷವಾಗಿ ಇದು ನಿರುದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಒಂದು ವೇಳೆ ಸೂಕ್ತ ಸ್ಪಂದನೆ ಸಿಗದಿದ್ದರೆ, ಈ ಕ್ರಮದ ವಿರುದ್ಧ ಮುಂಬರುವ ದಿನಗಳಲ್ಲಿ ಬಹುದೊಡ್ಡ ಹೋರಾಟ ನಡೆಸಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ಸಿದ್ಧತೆಗಳು ಕೂಡ ನಡೆದಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ (ಚಂದ್ರು) ಎಚ್ಚರಿಸಿದ್ದಾರೆ.

Advertisement

2006ರಲ್ಲೂ ನಡೆದಿತ್ತು ಪ್ರಯೋಗ? : ಈ ಪ್ರಯೋಗ 2006ರಲ್ಲೂ ನಡೆದಿತ್ತು. ಆದರೆ, ಅಪಘಾತಗಳ ಸಂಖ್ಯೆ ಹೆಚ್ಚಾಗುವುದು, ಆದಾಯ ಸೋರಿಕೆ, ಗೈರುಹಾಜರಿ ಸೇರಿದಂತೆ ಹಲವು ಸಮಸ್ಯೆಗಳು ಸೃಷ್ಟಿಯಾದವು. ಹಾಗಾಗಿ, ಸ್ವತಃ ಬಿಎಂಟಿಸಿ ಹಿಂಪಡೆಯಿತು. ಈಗ ಮತ್ತದೇ ತಪ್ಪನ್ನು ಮಾಡಲು ಹೊರಟಿದೆ ಎಂದು ಆರ್‌. ಚಂದ್ರಶೇಖರ್‌ ಮೆಲುಕು ಹಾಕಿದರು. ಅಂತರ ನಿಗಮ ವರ್ಗಾವಣೆಯಿಂದ ಆಗಿರುವ ಸಿಬ್ಬಂದಿ ಕೊರತೆ ನೀಗಿಸಲು ಹಣಕಾಸು ಇಲಾಖೆ ಸೂಚನೆ ಮೇರೆಗೆ ಗುತ್ತಿಗೆ ಆಧಾರದಲ್ಲಿ ಪಡೆಯುವ ಸಂಬಂಧ ಚರ್ಚೆ ನಡೆದಿದೆ. ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಲಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ನಂದೀಶ್‌ ರೆಡ್ಡಿ, ಅಧ್ಯಕ್ಷರು, ಬಿಎಂಟಿಸಿ 

 

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next