ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ಪುರುಷ ವೈದ್ಯರನ್ನು ನೇಮಕ ಮಾಡಬೇಕೆಂಬ ಸ್ಥಳೀಯರ ಬೇಡಿಕೆ ಮೂರು ವರ್ಷಗಳಾದರೂ ಈಡೇರಿಲ್ಲ.
ಮೂರು ವರ್ಷಗಳಿಂದ ಇಲ್ಲಿ ಖಾಯಂ ವೈದ್ಯರಿಲ್ಲದೆ ಬೆಳ್ಳಾರೆ ಹಾಗೂ ಆಸುಪಾಸಿನ ಗ್ರಾಮದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಮಹಿಳಾ ವೈದ್ಯರೊಬ್ಬರು ಗುತ್ತಿಗೆ ಆಧಾರದಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ. ವೈದ್ಯರ ವಸತಿ ಗೃಹ, ಆರೋಗ್ಯ ಸಹಾಯಕಿಯರ ಕೊಠಡಿ ಇದೆ. ಮಹಿಳಾ ವೈದ್ಯರು ಇಲ್ಲಿ ವಾಸ್ತವ್ಯ ಇರುವುದಿಲ್ಲ. ಹೀಗಾಗಿ, ರಾತ್ರಿ ವೇಳೆ ತುರ್ತು ಚಿಕಿತ್ಸೆಯ ಅಗತ್ಯ ಇರುವಾಗ ಇಲ್ಲಿ ವೈದ್ಯರು ಲಭ್ಯರಿಲ್ಲ.
ಬೆಳ್ಳಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಹೆರಿಗೆ ಮಾಡಿಸುವ ವ್ಯವಸ್ಥೆಯಿತ್ತು. ಸರಾಸರಿ 250 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ವೈದ್ಯರಿಲ್ಲದೆ ಈ ಸಂಖ್ಯೆ 120ಕ್ಕೆ ಇಳಿದಿದೆ. ಈಗ ಸುಳ್ಯ ಸಮುದಾಯ ಆರೋಗ್ಯ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ.
ಜಿ.ಪಂ.ನಿಂದ ಎ ಗ್ರೇಡ್ ಗ್ರಾ.ಪಂ. ಎಂದು ಗುರುತಿಸಿಕೊಂಡಿರುವ ಬೆಳ್ಳಾರೆ, ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಪೇಟೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸಾಕಷ್ಟು ವಿದ್ಯಾ ಕೇಂದ್ರಗಳೂ ಇವೆ. ಹೀಗಾಗಿ, ಆರೋಗ್ಯ ಇಲಾಖೆ ಇಲ್ಲಿಗೆ ಒಬ್ಬರು ಖಾಯಂ ವೈದ್ಯರನ್ನು ನೇಮಿಸಬೇಕೆಂದು ಮುಖಂಡರಾದ ಜಯರಾಮ ಬೆಳ್ಳಾರೆ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯಗಳಿದ್ದು, ಇಲ್ಲೇ ಉಳಿದುಕೊಳ್ಳುವ ಒಬ್ಬರು ಪುರುಷ ವೈದ್ಯರ ನೇಮಕವಾಗಬೇಕೆಂದು ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ನಾಗರಾಜ್ ಆಗ್ರಹಿಸಿದ್ದಾರೆ.
ಖಾಯಂ ನೇಮಕ
ಬೆಳ್ಳಾರೆಯಲ್ಲಿ ಮಹಿಳಾ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಮುಂದೆ ಬೆಳ್ಳಾರಗೆ ಖಾಯಂ ಪುರುಷ ವೈದ್ಯರ ನೇಮಕ ಆಗಬಹುದು.
–
ಡಾ| ಸುಬ್ರಹ್ಮಣ್ಯ
ತಾಲೂಕು ವೈದ್ಯಾಧಿಕಾರಿ