Advertisement

ಮರಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ

05:39 PM Dec 21, 2017 | |

ಶಿವಮೊಗ್ಗ: ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗುವಂತಾಗಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ|ಎಂ.ಲೋಕೇಶ್‌ ತಿಳಿಸಿದರು. 

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದಲ್ಲಿ ಸಾರ್ವಜನಿಕರಿಗೆ ಮರಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಸಾಫ್ಟ್‌ವೇರ್‌ ಸಿದ್ಧವಿದ್ದು, ಆದಷ್ಟು ಬೇಗನೆ ಪ್ರಾಯೋಗಿಕವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸೇವೆ ಆರಂಭಿಸಲಾಗುವುದು
ಎಂದು ಹೇಳಿದರು.

ಪ್ರತಿ ತಾಲೂಕಿನಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಇದಕ್ಕಾಗಿ ಕೌಂಟರ್‌ ತೆರೆಯಲಾಗುವುದು. ಮರಳು ಅಗತ್ಯವಿರುವವರು ಕೇಂದ್ರಕ್ಕೆ ಭೇಟಿ ನೀಡಿ ತಮಗೆ ಬೇಕಾಗಿರುವ ಮರಳಿನ ಪ್ರಮಾಣ, ಇತ್ಯಾದಿ ಮಾಹಿತಿಯನ್ನು ಅಗತ್ಯ ದಾಖಲೆಗಳೊಂದಿಗೆ ಒದಗಿಸಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಆನ್‌ಲೈನ್‌ ವಿಳಾಸದ ಮಾಹಿತಿಯನ್ನು ಸದ್ಯದಲ್ಲಿಯೇ ಸಾರ್ವಜನಿಕರಿಗೆ ನೀಡಲಾಗುವುದು ಎಂದರು. 

ಮರಳಿಗಾಗಿ ಅರ್ಜಿ ಸಲ್ಲಿಸಿರುವ ಗ್ರಾಹಕರ ದೃಢೀಕರಣಕ್ಕಾಗಿ ಆಧಾರ್‌ ಸಂಖ್ಯೆ ಅಥವಾ ಅವರ ಮೊಬೈಲ್‌ಗೆ ಒಟಿಪಿ ಕಳುಹಿಸಿ ದೃಢೀಕರಿಸಲಾಗುವುದು. ಬಳಿಕ ಸಂಬಂಧಪಟ್ಟ ತಾಲೂಕಿನಲ್ಲಿ ಈಗಾಗಲೇ ಜಿಪಿಎಸ್‌ ಅಳವಡಿಸಲಾಗಿರುವ ಲಾರಿ ನಿರ್ವಾಹಕರಿಗೆ ಸರದಿ ಪ್ರಕಾರ ಹಾಗೂ ಮರಳು ಪೂರೈಕೆದಾರರಿಗೆ ಪೂರೈಸಬೇಕಾದ ಮರಳಿನ ಪ್ರಮಾಣ ಹಾಗೂ ಮರಳು ತಲುಪಿಸಬೇಕಾಗಿರುವ ವಿಳಾಸದ ವಿವರನ್ನು ಕಳುಹಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಒಂದು ವಾರದ ಒಳಗಾಗಿ ಕೌಂಟರ್‌ ಆರಂಭಿಸುವಂತೆ ಸೂಚನೆ ನೀಡಿದರು.

ಆಯಾ ತಾಲೂಕಿನ ಮರಳು ಬ್ಲಾಕಿಗೆ ನಿಗದಿಪಡಿಸಿರುವ ದರ ವಿಧಿಸಲಾಗುವುದು. ಮರಳು ಬ್ಲಾಕಿನಿಂದ ದೂರಕ್ಕೆ ಅನುಗುಣವಾಗಿ
ಸಾಗಾಟ ವೆಚ್ಚ ಅಂತಿಮಪಡಿಸಿ ನೀಡಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಜಪ್ತಿ ಮಾಡಿದ ಮರಳಿನ ಮಾಹಿತಿ ನೀಡಲು ಸೂಚನೆ: ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಲ್ಲಿ ಜಪ್ತಿ ಮಾಡಲಾಗಿರುವ ಮರಳಿನ ಪ್ರಮಾಣದ ವರದಿಯನ್ನು ತಾಲೂಕುವಾರು
ಸಲ್ಲಿಸಬೇಕು. ಆಶ್ರಯ ಮನೆ ನಿರ್ಮಾಣಕ್ಕಾಗಿ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಈ ಮರಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ
ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಆಶ್ರಯ ಮನೆಗಳಿಗೆ ಅಗತ್ಯವಿರುವ ಮರಳಿನ ಪ್ರಮಾಣದ ಬಗ್ಗೆ ಗ್ರಾಮ ಪಂಚಾಯತ್‌ ಪಿಡಿಒ ಅಥವಾ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅವರು ಪತ್ರ ನೀಡಿದರೆ ತಕ್ಷಣ ಒದಗಿಸಲಾಗುವುದು ಎಂದು ಹೇಳಿದರು. 

Advertisement

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ದೊರೆತ ತಕ್ಷಣ ನೇರವಾಗಿ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಮಾಹಿತಿ ಒದಗಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆ ಆಗಾಗ್ಗೆ ಸಭೆ ನಡೆಸಿ ಮರಳು ಸಾಗಾಟ, ಅಕ್ರಮ ಸಾಗಾಣಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಉಪವಿಭಾಗ ಮಟ್ಟದಲ್ಲಿ
ಉಪವಿಭಾಗಾಧಿಕಾರಿಗಳು ಸಭೆ ನಡೆಸಬೇಕು. ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಭಾಗವಹಿಸಬೇಕು ಎಂದು 
ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಬಗ್ಗೊಡಿನಲ್ಲಿರುವ ಸಾಮಾನ್ಯ ಮರಳು ಬ್ಲಾಕ್‌ನಿಂದ ದಿನನಿತ್ಯ ಸಾಗಾಣಿಕೆಗೆ ಅನುಮತಿ ನೀಡಲಾಗಿರುವ
ವಾಹನ ಸಂಖ್ಯೆ ಹೆಚ್ಚಿಸಲಾಗುವುದು. ಈ ಭಾಗದಲ್ಲಿ ಮರಳುಗಾರಿಕೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು
ಎಂದು ಸೂಚನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ, ಜಿಪಂ ಸಿಇಒ ರಾಕೇಶ್‌ ಕುಮಾರ್‌,
ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಹಿರಿಯ ಭೂವಿಜ್ಞಾನಿ ರಶ್ಮಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next