Advertisement

ಆ್ಯಪಲ್ಲಿ ಮನವಿ ಮಾಡಿ, ಮನೆ ಬಳಿ ಗಿಡ ನೆಡಿ

11:56 AM May 02, 2017 | |

ಬೆಂಗಳೂರು: ನಿಮ್ಮ ಮನೆ ಸುತ್ತ ಗಿಡ ನೆಡಲು ಯೋಗ್ಯ ಸ್ಥಳವಿದ್ದು, ನೀವಲ್ಲಿ ಸಸಿ ನೆಡುವ ಆಲೋಚನೆಯಲ್ಲಿದ್ದೀರಾ? ಹಾಗಾದರೆ ಗಿಡಗಳಿಗಾಗಿ ನೀವು ಎಲ್ಲಿಗೂ ಅಲೆದಾಡುವ, ದುಡ್ಡು ಕೊಟ್ಟು ಕೊಳ್ಳುವ ಅಗತ್ಯವಿಲ್ಲ. ಸುಮ್ಮನೆ ಆನ್‌ಲೈನ್‌ ಮೂಲಕ ಮನವಿ ಮಾಡಿದರೂ ಸಾಕು, ನೀವು ಬಯಸುವ ಗಿಡವನ್ನು, ನೀವಿರುವಲ್ಲಿಗೇ ತಂದುಕೊಡುತ್ತೆ ಬಿಬಿಎಂಪಿ!

Advertisement

ಹೌದು, ನಗರದಲ್ಲಿ ಹಸಿರು ಪ್ರಮಾಣ ಹೆಚ್ಚಿಸಲು ಮುಂದಾಗಿರುವ ಪಾಲಿಕೆ, ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಉಚಿತವಾಗಿ ವಿತರಿಸಲು ತೀರ್ಮಾನಿಸಿದೆ. ಆ ಮೂಲಕ ಪರಿಸರ ಸಂರಕ್ಷಣೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು, ಪಾಲಿಕೆಯಿಂದ ಇದಕ್ಕಾಗಿಯೇ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ.

ಪಾಲಿಕೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ 10 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದ್ದು, ಈ ಪೈಕಿ 8 ಲಕ್ಷ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲು ನಿರ್ಧರಿಸಲಾಗಿದೆ. ಅದರಂತೆ ಮಳೆಗಾಲಕ್ಕೆ ಮುನ್ನ ಗಿಡಗಳನ್ನು ವಿತರಿಸಲು ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆಯಿಂದಲೇ ನರ್ಸರಿಗಳನ್ನು ಆರಂಭಿಸಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಮುಂದಿನ 15 ದಿನಗಳೊಳಗೆ ಪಾಲಿಕೆಯಿಂದ ಅಭಿವೃದ್ಧಿಪಡಿಧಿಸಲಾಗುತ್ತಿರುವ ಮೊಬೈಲ್‌ ಆ್ಯಪ್‌ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಗಿಡಗಳ ವಿತರಣೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಆ್ಯಪ್‌ ಪರೀಕ್ಷೆಯ ಹಂತದಲ್ಲಿದೆ. ಪರೀಕ್ಷೆ ಯಶಸ್ವಿಯಾದ ಕೂಡಲೇ ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಲು ಅಧಿಕಾರಿಗಳು ಮುಂದಾಗಲಿದ್ದಾರೆ. ಎಲ್ಲ ನಾಗರಿಕರಿಗೆ ಅನುಕೂಲವಾಗುವಂತೆ ಸುಲಭ ವಿಧಾನಗಳನ್ನು ಆ್ಯಪ್‌ನಲ್ಲಿ ಅಳವಡಿಕೆ ಮಾಡಲಾಗಿದ್ದು, ಕೇವಲ ಒಂದು ನಿಮಿಷದಲ್ಲಿ ಗಿಡಗಳಿಗೆ ಮನವಿ ಸಲ್ಲಿಕೆ ಮಾಡಬಹುದಾಗಿದೆ. 

ಸಾರ್ವಜನಿಕರು ಆ್ಯಪ್‌ ಮೂಲಕ ನೀಡಿದ ಮನವಿ ಹಾಗೂ ಗಿಡಗಳ ಸಂಖ್ಯೆಯ ವಿವರ ಪಾಲಿಕೆಯ ವೆಬ್‌ಪೋರ್ಟಲ್‌ನಲ್ಲಿ ಸಂಗ್ರಹವಾಗಲಿದೆ. ಅದನ್ನು ಆಧರಿಸಿ ಆಯಾ ವಾರ್ಡ್‌ಗಳಿಗೆ ಅಷ್ಟು ಗಿಡಗಳನ್ನು ಪಾಲಿಕೆಯ ಅಧಿಕಾರಿಗಳು ರವಾನೆ ಮಾಡಲಿದ್ದಾರೆ. 

Advertisement

ಆ್ಯಪ್‌ನಲ್ಲಿ ಮನವಿ ಸಲ್ಲಿಸುವುದು ಹೇಗೆ?: ಪಾಲಿಕೆಯ ಆ್ಯಪ್‌ನಲ್ಲಿ ಅತ್ಯಂತ ಸರಳ ವಿಧಾನದ ಮೂಲಕ ನಾಗರಿಕರು ಗಿಡಗಳಿಗೆ ಮನವಿ ಸಲ್ಲಿಕೆ ಮಾಡಬಹುದಾಗಿದೆ. ಪಾಲಿಕೆಯ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಂಡರೆ, ಮೊದಲಿಗೆ ನಿಮ್ಮ ಹೆಸರು ಮತ್ತು ಮೊಬೈಲ್‌ ಸಂಖ್ಯೆ ದಾಖಲಿಸಬೇಕು. ಅದಾದ ನಂತರ ಆ್ಯಪ್‌ನಲ್ಲಿ ಪಾಲಿಕೆಯಿಂದ ವಿತರಿಸುವ ಗಿಡಗಳ ಪ್ರಬೇಧಗಳನ್ನು ಹಾಗೂ ಎಷ್ಟು ಗಿಡಗಳು ಬೇಕು ಎಂಬುದನ್ನು ತೋರಿಸುತ್ತದೆ.

ನಾಗರಿಕರು ತಮಗೆ ಎಷ್ಟು ಗಿಡಗಳು ಬೇಕು ಮತ್ತು ಯಾವ ಗಿಡಗಳನ್ನು ಬೇಕು ಎಂಬುದು ದಾಖಲಿಸಿದ ನಂತರ ಜಿಪಿಎಸ್‌ ಆಧರಿಸಿ ನೀವಿರುವ ಸ್ಥಳವನ್ನು ಗೂಗಲ್‌ ಮ್ಯಾಪ್‌ನಲ್ಲಿ ತೋರಿಸಲಿದೆ. ಈ ವೇಳೆ ನಾಗರಿಕರು ತಾವು ಗಿಡ ನೆಡುವ ಸ್ಥಳವನ್ನು ಮ್ಯಾಪ್‌ನಲ್ಲಿ ಗುರುತಿಸಬೇಕು. ಕೊನೆಗೆ ನೀವು ಗಿಡಗಳನ್ನು ಪಡೆಯುವ ನಿಮ್ಮ ಸುತ್ತಲಿನ ಉದ್ಯಾನಗಳನ್ನು ಆಯ್ಕೆ ಮಾಡಿಕೊಂಡರೆ, ಉದ್ಯಾನಗಳಿಗೆ ಪಾಲಿಕೆಯಿಂದ ಗಿಡಗಳು ಬಂದ ಕೂಡಲೇ ನಾಗರಿಕರಿಗೆ ಮೊಬೈಲ್‌ ಮೂಲಕ ಸಂದೇಶ ರವಾನೆಯಾಗಲಿದೆ.  

ಜವಾಬ್ದಾರಿಯೂ ನಿಮ್ಮದೇ!: ಪಾಲಿಕೆಯಿಂದ ಪಡೆಯಲಾಗುವ ಗಿಡಗಳ ಸಂರಕ್ಷಣೆ ಹಾಗೂ ಪೋಷಣೆಯ ಸಂಪೂರ್ಣ ಜವಾಬ್ದಾರಿ ಗಿಡಗಳನ್ನು ಪಡೆದ ನಾಗರಿಕರದ್ದೇ ಆಗಿರುತ್ತದೆ. ಅದೇ ರೀತಿ ಪಾಲಿಕೆಯಿಂದಲೂ ಪ್ರತಿ ಮೂರು ತಿಂಗಳಿಗೊಮ್ಮೆ ನಾಗರಿಕರಿಗೆ ಗಿಡಗಳನ್ನು ಸಂರಕ್ಷಣೆ ಮಾಡುವಂತೆ ಮತ್ತು ಗಿಡಗಳ ಬೆಳವಣಿಗೆಯ ಕುರಿತು ಪಾಲಿಕೆಗೆ ಮಾಹಿತಿ ನೀಡುವಂತೆ ಕೋರುವ ಸಂದೇಶ ನಾಗರಿಕರ ಮೊಬೈಲ್‌ಗೆ ರವಾನೆಯಾಗಲಿವೆ. ಅದರಂತೆ ನಾಗರಿಕರು ಗಿಡದ ಬೆಳವಣಿಯ ಛಾಯಾಚಿತ್ರಗಳನ್ನು ತೆಗೆದು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡುವಂತಹ ನಾಗರಿಕರಿಗೆ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಅಭಿನಂದಿಸಲಾಧಿಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಯಾವೆಲ್ಲ ಗಿಡಗಳು ದೊರೆಯುತ್ತವೆ?: ಮಹಾಗನಿ, ಹೊಂಗೆ, ನೇರಳೆ, ಸಂಪಿಗೆ, ರೊಸಿಯಾ, ಬೇವು, ಚರಿì, ನೆಲ್ಲಿ, ಆಕಾಶ ಮಲ್ಲಿಗೆ, ಕಾಡುಬಾದಾಮಿ, ಹುಣಸೆ, ಮಾವು, ಆಲ, ಅರಳಿ, ಹೊನ್ನೆ, ಹೊಳೆದಾಸವಾಳ, ಮಳೆಧಿಮರ, ಹೊವರ್ಸಿ, ತಪಸಿ, ಬಸವನಪಾದ, ಟೆಕೊಮಾ, ಸಿಮರೂಬ, ಹಲಸು ಸೇರಿದಂತೆ ವಿವಿಧ ಪ್ರಬೇಧದ ಗಿಡಗಳನ್ನು ಪಾಲಿಕೆಯಿಂದ ನೀಡಲಾಗುತ್ತದೆ. 

ಜೂನ್‌ 15 ರಿಂದ ಗಿಡಗಳ ವಿತರಣೆ
ಪಾಲಿಕೆಯಲ್ಲಿ ಜೂನ್‌ 15 ರಿಂದ ವನಮಹೋತ್ಸವ ಅಭಿಯಾನವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಂದಿನಿಂದಲೇ ನಾಗರಿಕರಿಗೆ ಗಿಡಗಳನ್ನು ವಿತರಿಸಲು ಪಾಲಿಕೆಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಿ ನಾಗರಿಕರಿಂದ ಮನವಿಗಳನ್ನು ಸ್ವೀಕರಿಸಲು ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಪಾಲಿಕೆಯಿಂದಲೂ ನೆಡಲಾಗುತ್ತದೆ
ಪ್ರಸಕ್ತ ಸಾಲಿನಲ್ಲಿ 10 ಲಕ್ಷ ಗಿಡಗಳನ್ನು ನಗರದಲ್ಲಿ ನೆಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಅದರಂತೆ ಸಾರ್ವಜನಿಕರಿಗೆ 8 ಲಕ್ಷ ಗಿಡಗಳನ್ನು ವಿತರಣೆ ಮಾಡಲು ತೀರ್ಮಾನಿಸಲಾಗಿದ್ದು, ಉಳಿದ 2 ಲಕ್ಷ ಗಿಡಗಳನ್ನು ಪಾಲಿಕೆಯಿಂದ ಸಾರ್ವಜನಿಕ ಸ್ಥಳಗಳು, ಉದ್ಯಾನಗಳು, ರಸ್ತೆ ಬದಿ ಸೇರಿದಂತೆ ನಾಗರಿಕರು ನೆಡಲಾಗದಂತಹ ಪ್ರದೇಶಗಳಲ್ಲಿ ನೆಟ್ಟು ಸಂರಕ್ಷಿಸುವ ಜವಾಬ್ದಾರಿ ಹೊಂದಿದೆ. 

ನಾಗರಿಕರಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿ, ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಅವರೂ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಆನ್‌ಲೈನ್‌ ಮೂಲಕ ಗಿಡ ವಿತರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ನೂತನ ಆ್ಯಪ್‌ ಅಭಿವೃದ್ದಿ ಪಡಿಸಿದ್ದು, ನಾಗರಿಕರು ಆ್ಯಪ್‌ ಮೂಲಕ ಮನವಿ ಮಾಡಿ, ಆಯಾ ವಾರ್ಡ್‌ಗಳಲ್ಲಿಯೇ ಗಿಡಗಳನ್ನು ಪಡೆಯಬಹುದಾಗಿದೆ. 
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next