Advertisement

ಕಿಸಾನ್‌ ಸಮ್ಮಾನ್‌ ಸೌಲಭ್ಯಕ್ಕೆ ಮನೆಯಿಂದಲೇ ಅರ್ಜಿ ಸಲ್ಲಿಸಿ

11:39 AM Jul 29, 2019 | Suhan S |

ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆ ಸಮಯದಲ್ಲಿ ರಾಜ್ಯದ ಮೈತ್ರಿ ಸರ್ಕಾರದಿಂದ ತೀವ್ರ ವಿರೋಧಕ್ಕೆ ಗುರಿಯಾಗಿದ್ದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಕಳೆದ ಎರಡ್ಮೂರು ದಿವಸಗಳಿಂದ ಭಾರೀ ಸದ್ದು ಮಾಡುತ್ತಿರುವ ವೇಳೆಯಲ್ಲಿ ರೈತರು ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಕೆ ಮಾಡುವ ಸದಾವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಕಲ್ಪಿಸಿದ್ದಾರೆ.

Advertisement

ಅಲೆದಾಟಕಿನ್ನು ಮುಕ್ತಿ: ಮುಂಗಾರಿನ ವೇಳೆ ರೈತರು ಕೃಷಿ ಚಟುವಟಿಕೆ ಬಿಟ್ಟು ಕಿಸಾನ್‌ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಲು ತಾಲೂಕು ಇಲ್ಲವೆ ಹೋಬಳಿ ಕೇಂದ್ರ ಅಲೆಯುವಂತಾಗಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ ಫ‌ಲಾನುಭವಿಗಳು ತಾವಿದ್ದ ಸ್ಥಳದಲ್ಲಿ ನೇರವಾಗಿ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸುವ ಸದವಾಕಾಶವನ್ನು ಕಲ್ಪಿಸಿದ್ದು ಇನ್ನು ಮುಂದೆ ರೈತರು ಅರ್ಜಿ ಹಿಡಿದು ಕಚೇರಿ ಅಲೆಯುವುದನ್ನು ತಪ್ಪಿಸಲಾಗಿದೆ.

ಅರ್ಜಿ ಸ್ಥಿತಿಗತಿ ತಿಳಿಯಬಹುದು: ವೆಬ್‌ಸೈಟ್, ಮೊಬೈಲ್ ಆ್ಯಪ್‌ ಅಥವಾ ನೇರವಾಗಿ ಸರ್ಕಾರಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದ ರೈತರು, ಅರ್ಜಿ ವಿಲೇವಾರಿ ಸ್ಥಿತಿಗತಿ ತಿಳಿದುಕೊಳ್ಳಲು ಮತ್ತೆ ಕಚೇರಿಗೆ ಅಲೆಯಬೇಕಿಲ್ಲ . ವೆಬ್‌ಸೈಟಿನಲ್ಲಿ ಮೂಲಕ ಅರ್ಜಿ ಸಲ್ಲಿಕೆ ತಿರಸ್ಕೃತ ಆಗಿದೆಯೇ ಅಥವಾ ಮಂಜೂರು ಆಗಿದೆಯೇ ಎಂಬ ಅಂಶವನ್ನು ಸಹ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಜೊತೆಗೆ ತಾವು ಆಧಾರ್‌ ನಂಬರ್‌ಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ಕೂಡ ಬರುತ್ತಿದೆ.

ನೋಂದಣಿ ಹೇಗೆ? ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗೆ ರೈತರು www.fruitspmk.karnataka.gov.in ಈ ವೆಬ್‌ಸೈಟ್ ಲಿಂಕಿನ ಮೂಲಕ ಅರ್ಜಿ ಸಲ್ಲಿಸಬಹುದು, ಅಥವಾ ಗೂಗಲ್ ಪ್ಲೆ ಸ್ಟೋರ್‌ನಲ್ಲಿ ಪಿಎಂ ಕಿಸಾನ್‌ ಎಂದು ಶೋಧ ನಡೆಸಿ ಎಲೆಯ ಗುರುತಿನಲ್ಲಿ ಸಿಗುವ ಆ್ಯಪ್‌ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್ ಮಾಡಿಕೊಂಡು ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆದರೆ ತಮ್ಮ ಬಳಿ ಸ್ಮಾರ್ಟ್‌ಪೋನ್‌ ಇದ್ದರೆ ಮಾತ್ರ ಮನೆಯಲ್ಲಿ ಅರ್ಜಿ ಸಲ್ಲಿಕೆಗೆ ಮಾಡಬಹುದಾಗಿದೆ.

ಏನು ದಾಖಲೆ ಬೇಕು: ಅರ್ಜಿಯನ್ನು ಸಲ್ಲಿಸಿದ ಫ‌ಲಾನುಭವಿಗಳು ಫ‌್ರೂಟ್ ಪೋರ್ಟಲ್ನಲ್ಲಿ ದಾಖಲು ಮಾಡಿದ ಪ್ರತಿ ರೈತರಿಗೆ ನೋಂದಣಿ ಸಂಖ್ಯೆ ನೀಡಲಾಗುವುದು. ಕೇಂದ್ರ ಸರ್ಕಾದ ಪರಿಷ್ಕೃತ ಮಾರ್ಗಸೂಚಿಯನ್ವಯ ಎಲ್ಲಾ ವರ್ಗದ ರೈತರಿಗೆ ಈ ಸೌಲಭ್ಯ ವಿಸ್ತರಿಸಲಾಗಿದೆ. ರೈತರು ಜಮೀನಿನ ಪಹಣಿ, ಆಧಾರ್‌ ನಕಲು ಪ್ರತಿ ಫೋಟೋ, ಬ್ಯಾಂಕ್‌ ಪುಸ್ತಕದ ನಕಲು ಪ್ರತಿ, ಜಾತಿ ಪ್ರಮಾಣ ಪತ್ರ ದಾಖಲೆಗಳನ್ನು ಮೊದಲು ಸಿದ್ಧ ಪಡಿಸಿಟ್ಟುಕೊಂಡು ಆ್ಯಪ್‌ ಹಾಗೂ ವೈಬ್‌ ಮೂಲಕ ರೈತರೇ ಖುದ್ದು ನೋಂದಣಿ ಮಾಡಿಕೊಳ್ಳಬಹುದಾಗಿದೆ.

Advertisement

ಹೆಚ್ಚುವರಿ ಘೋಷಣೆ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಲೋಕಸಭಾ ಚುನವಣೆ ವೇಳೆ ಘೋಷಣೆ ಮಾಡುವ ಮೂಲಕ ರೈತರ ಹೆಸರಿನಲ್ಲಿ ಚುನಾವಣೆ ಮಾಡಲು ಅಮಿತ್‌ ಶಾ ಹಾಗೂ ಮೋದಿ ಜೋಡಿ ಹೊರಟಿದೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ವೇದಿಕೆ ಮೇಲೆ ಅಪಪ್ರಚಾರ ಮಾಡುವ ಮೂಲಕ ರೈತರನ್ನು ದಿಕ್ಕು ತಪ್ಪಿಸಿದ್ದರು. ಇದನ್ನು ಮನಗಂಡಿದ್ದ ಅಂದಿನ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ತಾವು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಕ್ಷಣದಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ರಾಜ್ಯ ಸರ್ಕಾರದಿಂದಲೂ ಓರ್ವ ರೈತನಿಗೆ ನಾಲ್ಕು ಸಾವಿರ ಸಹಾಯಧನ ಘೋಷಣೆ ಮಾಡಿದ್ದಾರೆ.

ವಾರ್ಷಿಕ 60 ಕೋಟಿ ತಾಲೂಕಿಗೆ: ತಾಲೂಕಿನಲ್ಲಿ 59,999 ಫ‌ಲಾನುಭವಿಗಳಿದ್ದು ಕೇಂದ್ರದಿಂದ ವಾರ್ಷಿಕ 35,99,94000ರೂ, ಗಳನ್ನು ಪಿಎಂಕೆ ಯೋಜನೆಯಿಂದ ಸಹಾಯ ಧನ ಪಡೆದರೆ, ರಾಜ್ಯ ಸರ್ಕಾರದಿಂದ 23,99,96,000ರೂ.ಗಳನ್ನು ಪಡೆಯಲಿದ್ದು ಒಟ್ಟಾರೆಯಾಗಿ 59,99,90,000 ರೂ. ಸಹಾಯ ಧನ ಪಿಎಂಕೆ ಯೋಜನೆಯಿಂದ ಕೃಷಿಕರಿಗೆ ರಾಜ್ಯ ಹಾಗೂ ಕೇಂದ್ರದಿಂದ ಹರಿದು ಬರಲಿದೆ.

ಜಿಲ್ಲೆಗೆ ತಾಲೂಕು ಪ್ರಥಮ: ಹಾಸನ ಜಿಲ್ಲೆಯ ಎಂಟು ತಾಲೂಕಿನಲ್ಲಿ ಚನ್ನರಾಯಪಟ್ಟಣ ಪ್ರಥಮ ಸ್ಥಾನದಲ್ಲಿದೆ ಈಗಾಗಲೇ ತಾಲೂಕಿನಲ್ಲಿ ಸುಮಾರು 59,999 ಅರ್ಜಿಗಳು ವೆಬ್‌ಗ ಅಪ್‌ಲೋಡ್‌ ಮಾಡಲಾಗಿದೆ, ಅರಸೀಕರೆ-49563, ಹಾಸನ-40284,ಅರಕಲಗೂರು-28587, ಬೇಲೂರು-28570,ಹೊಳೆನರಸೀಪುರ-26078, ಅಲೂರು-14629, ಸಕಲೇಶಪುರ-13985 ಒಟ್ಟಾರೆಯಾಗಿ ಜಿಲ್ಲೆಯಲ್ಲಿ 2,61,700 ಮಂದಿ ಫ‌ಲಾನುಭವಿಗಳಿದ್ದಾರೆ.

 

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next