Advertisement

ಸಾಲ ಮನ್ನಾಕ್ಕೆ ಪ್ರತೀ ರೈತನಿಂದ ಅರ್ಜಿ: ವಿನೂತನ ಚಳವಳಿ

03:49 PM Sep 05, 2017 | Team Udayavani |

ದಾವಣಗೆರೆ: ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಸರ್ಕಾರಗಳ ಮೇಲೆ ಒತ್ತಡ ಹೇರಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವಿನೂತನ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿದೆ. ಪ್ರತೀ ರೈತ ಹೊಂದಿರುವ ಸಾಲದ ಸಂಪೂರ್ಣ ವಿವರ, ಆತನ ವಿಳಾಸ, ಕೈಗಡ, ಕೃಷಿ ಮಹಿಳೆಯರು ಪಡೆದುಕೊಂಡಿರುವ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳ ಸಾಲದ ವಿವರ, ಬ್ಯಾಂಕ್‌ ಖಾತೆಯ ಸಂಖ್ಯೆ, ಮೊಬೈಲ್‌ ನಂಬರ್‌ ಸೇರಿದಂತೆ ಎಲ್ಲಾ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಿ, ಜಿಲ್ಲಾಧಿಕಾರಿ  ಮೂಲಕ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಂಘ ನಿರ್ಧರಿಸಿದೆ. ಮಂಗಳವಾರದಿಂದ ಆರಂಭವಾಗುವ ಚಳವಳಿ ಸೆ.27ರ ವರೆಗೆ ನಡೆಯಲಿದೆ. 

Advertisement

ಸೋಮವಾರ ಎಪಿಎಂಸಿ ಸಭಾಂಗಣದಲ್ಲಿ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಕುರುವ ಗಣೇಶ, ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ರೈತರ ಹೊರೆ ದಿನದಿಂದ ದಿನಕ್ಕೆ ಏರುತ್ತಾ ಹೋಗುತ್ತಿದೆ. ಸರ್ಕಾರಗಳು ನೀಡುತ್ತಿರುವ ಅಲ್ಪ ನೆರವು ಯಾವುದಕ್ಕೂ ಸಾಲುತ್ತಿಲ್ಲ. ಇದಕ್ಕೆ ಸರ್ಕಾರಗಳ ನೀತಿಯೇ ಕಾರಣ. ರೈತನ ಶ್ರಮಕ್ಕೆ ಸರಿಯಾದ ಫಲ ಸಿಗುತ್ತಿಲ್ಲ. ಹೀಗಾಗಿ ಆತನ ಮೇಲೆ ಹೊರೆ ಬೀಳುತ್ತಿದೆ. ರೈತ ಸಾಲಗಾರನಲ್ಲ. ಸರ್ಕಾರವೇ ಆತನನ್ನು ಸಾಲಗಾರನನ್ನಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈ ವರ್ಷವೂ ಸಹ ಬರ ಆವರಿಸಿದೆ. ಸತತ ನಾಲ್ಕು ವರ್ಷಗಳಿಂದ ರೈತ ನಿರೀಕ್ಷಿತ ಇಳುವರಿ ಪಡೆದುಕೊಂಡಿಲ್ಲ. ಆದಾಯ ಇಲ್ಲದ ಜೀವನ ಸಾಗಿಸುತ್ತಿದ್ದಾನೆ. ಈ ಹಂತದಲ್ಲಿ ರೈತನ ನೆರವಿಗೆ ಬರಲು ಸರ್ಕಾರಗಳು ಮೀನಾಮೇಷ ಎಣಿಸುತ್ತಿರುವುದು ದುರಂತ ಎಂದು ಅವರು
ಅಸಮಾಧಾನ ವ್ಯಕ್ತಪಡಿಸಿದರು.

ರೈತನ ಸಾಲ ಅಂದರೆ ಕೇವಲ ಬೆಳೆಸಾಲ ಮಾತ್ರ ಎಂಬುದಾಗಿ ಸರ್ಕಾರ ಹೇಳುತ್ತಿದೆ. ಟ್ರಾಕ್ಟರ್‌, ಕುರಿ, ಎಮ್ಮೆ, ಎತ್ತು ಖರೀದಿ, ಇತರೆ ಪರಿಕರ ಖರೀದಿಯನ್ನು ಸರ್ಕಾರ ಕೃಷಿ ಸಾಲ ಎಂದು ಹೇಳುವುದಿಲ್ಲ. ಬದಲಿಗೆ ವಾಣಿಜ್ಯಸಾಲ ಪರಿಗಣಿಸಿವೆ. ಅವುಗಳ ಮೇಲೆ ವಿಪರೀತ  ಬಡ್ಡಿ ಸಹ ವಿಧಿಸುತ್ತದೆ. ಇದರಿಂದ ಸಹ ರೈತ ಸಂಕಷ್ಟಕ್ಕೆ ಈಡಾಗುತ್ತಿದ್ದಾನೆ. ಟ್ರಾಕ್ಟರ್‌ ತರುವ  ರೈತ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದಿಲ್ಲ ಬದಲಿಗೆ ಹೊಲ ಹಸನು ಮಾಡಲು ಬಳಸುತ್ತಾನೆ ಎಂಬುದನ್ನು ಸರ್ಕಾರ ಅರಿಯಬೇಕು. ಕುರಿ, ಎಮ್ಮೆ, ಎತ್ತು, ದನ ಕೃಷಿಯ ಉಪ ಕಸಬು ಎಂಬುದನ್ನು ಮರೆಯಬಾರದು ಎಂದು ಅವರು ಪ್ರತಿಪಾದಿಸಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ್‌ ನಾಯ್ಕ, ಗೋಶಾಲೆ ಬಸವರಾಜ, ಹುಚ್ಚವ್ವನಹಳ್ಳಿ ಗಣೇಶ, ಆಲೂರು ನಾಗರಾಜ, ಚಿಕ್ಕನಹಳ್ಳಿ ಮಲ್ಲೇಶಪ್ಪ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

ನ್ಯಾಯಾಲಯದ ಮೊರೆ
ದೇಶದ ಆರ್ಥಿಕ ವ್ಯವಸ್ಥೆ ಬೇರಾಗಿರುವ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕ್ರಮ ವಹಿಸುವ ಜೊತೆಗೆ ಹಾಲಿ ಇರುವ ಹೊರೆ ಇಳಿಸಲು ಸಾಲ ಮನ್ನಾ ಮಾಡಬೇಕು ಎಂಬುದಾಗಿ ಚೆನ್ನೈ ಉತ್ಛ ನ್ಯಾಯಾಲಯ ಆದೇಶಿಸಿದೆ. ಈ ಆದೇಶದನ್ವಯ ನಮ್ಮ ರಾಜ್ಯ ಸರ್ಕಾರ ಸಹ ಸಾಲ ಮನ್ನಾ ಮಾಡಬೇಕಿತ್ತು. ಕೇಂದ್ರ ಸರ್ಕಾರ ಸಹ ಮಾನದಂಡ ಮಾಡಿಕೊಂಡು ಇಡೀ ದೇಶದ ರೈತರ ಸಾಲ ಮನ್ನಾ ಮಾಡಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ರೈತ ಸಂಘದಿಂದ ಅನುಭವಿ ವಕೀಲರನ್ನು ನೇಮಿಸಿ, ಈ ಕುರಿತು ನ್ಯಾಯಾಲಯದ ಮೊರೆ ಹೋಗಲು ಸಭೆಯಲ್ಲಿ ಚರ್ಚಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next