ಬೆಂಗಳೂರು: ಹೊಸ ರೇಷನ್ ಕಾರ್ಡ್‌ಗಳಿಗೆ ಎ. 1ರಿಂದ ಅರ್ಜಿ ಸ್ವೀಕರಿಸಲಾಗುತ್ತದೆ. ಈ ಬಗ್ಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಆಶ್ವಾಸನೆ ನೀಡಿ ದ್ದಾರೆ. ಬಿಪಿಎಲ್, ಎಪಿಎಲ್ ಕಾರ್ಡ್ ಗಳಿಗೆ ಸಲ್ಲಿಕೆಯಾಗಿರುವ 2.95 ಲಕ್ಷ ಅರ್ಜಿಗಳನ್ನು ಮಾ. 31ರೊಳಗೆ ವಿಲೇವಾರಿ ಮಾಡುವುದಾಗಿ ಹೇಳಿದ್ದಾರೆ.
ಮಾ.31ರೊಳಗೆ ಬಿಪಿಎಲ್ ಅರ್ಜಿ ವಿಲೇವಾರಿ
ರಾಜ್ಯಾದ್ಯಂತ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳಿಗೆ ಸಲ್ಲಿಕೆಯಾಗಿರುವ 2.95 ಲಕ್ಷ ಅರ್ಜಿಗಳನ್ನು ಮಾ.31ರೊಳಗಾಗಿ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಎ.1 ರಿಂದ ಹೊಸ ಕಾರ್ಡ್‌ಗಳಿಗೆ ಅರ್ಜಿ ಸ್ವೀಕರಿಸ ಲಾಗುವುದು ಎಂದು ಆಶ್ವಾಸನೆ ನೀಡಿದರು.
ಕಾಂಗ್ರೆಸ್‌ನ ನಯನಾ ಮೋಟಮ್ಮ ಹಾಗೂ ಬಿಜೆಪಿಯ ಯಶಪಾಲ್ ಸುವರ್ಣ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹಿಂದಿನ ಸರಕಾರದ ಅವಧಿಯಲ್ಲಿ 2,95,986 ಅರ್ಜಿ ಗಳು ಬಂದಿದ್ದು, ಇವುಗಳ ಪರಿಶೀಲನೆ ನಡೆಸ ಲಾಗುತ್ತಿದೆ. ಈ ಪೈಕಿ ಎಪಿಎಲ್ ಹಾಗೂ ಬಿಪಿಎಲ್ ಅರ್ಜಿಗಳನ್ನು ಪ್ರತ್ಯೇಕಗೊಳಿಸುತ್ತಿದ್ದು, ತುರ್ತು ವೈದ್ಯಕೀಯ ಸೇವೆಯ ಕಾರ್ಡ್‌ಗಳನ್ನು ಆದ್ಯತೆ ಮೇರೆಗೆ ವಿತರಿಸಲಾಗುತ್ತಿದೆ. ಈವರೆಗೆ 744 ಕಾರ್ಡ್ ವಿತರಿಸಲಾಗಿದೆ. 57,561 ಎಪಿಎಲ್ ಕಾರ್ಡ್‌ಗಳ ವಿತರಿಸಲಾಗಿದೆ ಎಂದರು.
ಸರಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿನ ಖಾಯಂ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, 1.20 ಲಕ್ಷ ರೂ.ಗೂ ಅಧಿಕ ವಾರ್ಷಿಕ ಆದಾಯ ಇದ್ದರೆ, ಲಕ್ಷಕ್ಕೂ ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಕೃಷಿ ಭೂಮಿ, ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಇದ್ದರೆ ಬಿಪಿಎಲ್ ಕಾರ್ಡ್ ಕೊಡುವುದಿಲ್ಲ. ಜೀವನೋಪಾಯಕ್ಕಾಗಿ ಓಡಿಸುವ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಕ್ಕೂ ಬಿಪಿಎಲ್ ಅರ್ಹತೆ ಇಲ್ಲ ಎಂದರು.
ಅಕ್ಕಿಯ ಬದಲು ತಲಾ 170 ರೂ.ಗಳೂ ನಮ್ಮಲ್ಲಿ ಅನೇಕರಿಗೆ ಸಿಕ್ಕಿಲ್ಲ. ಕೆಲವರಿಗೆ ವಿಳಂಬವಾಗಿದೆ. ವಿಳಂಬ ಆದವರಿಗೆ ಮೂರು ತಿಂಗಳ ಬಾಕಿ ನೀಡುವಂತೆ ನಯನಾ ಆಗ್ರಹಿಸಿದರು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ತುರ್ತು ವೈದ್ಯಕೀಯ ಸೇವೆಯ ಅಗತ್ಯ ಇರುವವರಿಗೆ ಬಿಪಿಎಲ್ ಕಾರ್ಡ್ ಕೊಡಿ ಎಂದು ಆಗ್ರಹಿಸಿದರು.
ಅನ್ನಭಾಗ್ಯದ ಮೂರು ತಿಂಗಳ ಬಾಕಿ ಬಗ್ಗೆ ಹಣಕಾಸು ಇಲಾಖೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವರು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ 10,738 ಅರ್ಜಿ ವಿಲೇವಾರಿ
ಬಿಜೆಪಿಯ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಗಾಗಿ 2,500ಕ್ಕೂ ಅಧಿಕ ಅರ್ಹ ಕುಟುಂಬಗಳು ಅರ್ಜಿ ಸಲ್ಲಿಸಿ ಸುಮಾರು 10 ತಿಂಗಳುಗಳಿಂದ ಕಾಯುತ್ತಿವೆ. ಈ ಕಾರ್ಡ್‌ಗಳನ್ನು ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, 2021ರ ಜನವರಿಯಿಂದ 2023ರ ಮಾರ್ಚ್‌ವರೆಗೆ 13,104 ಬಿಪಿಎಲ್ ಕಾರ್ಡ್‌ಗೆ ಉಡುಪಿ ಜಿಲ್ಲೆಯಿಂದ ಅರ್ಜಿಗಳು ಬಂದಿವೆ. ಈ ಪೈಕಿ 10,738 ಅರ್ಜಿ ವಿಲೇವಾರಿಯಾಗಿದೆ. ಕಳೆದ ಒಂದು ವರ್ಷದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗೆ ಬಂದ 134 ಅರ್ಜಿಗಳಿಗೂ ಬಿಪಿಎಲ್ ಕಾರ್ಡ್ ಕೊಡಲಾಗಿದೆ ಎಂದು ವಿವರಿಸಿದರು.