Advertisement

ಗ್ರಾಮಲೆಕ್ಕಿಗರ ಹುದ್ದೆಗೆ 41,162 ಅರ್ಜಿ ಸಲ್ಲಿಕೆ: ಮುಗಿಲಿನ್‌

03:32 PM May 12, 2022 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 102 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಗೆ 41,162 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅತೀ ಹೆಚ್ಚು ಅಂಕಗಳಿಸಿದ 500 ಜನ ಅಭ್ಯರ್ಥಿಗಳನ್ನು ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಿಕೊಂಡು, ಮೀಸಲಾತಿ ಪ್ರಕಾರ 1:5 ರಂತೆ ಅವರ ಅಂಕಪಟ್ಟಿ ಪರಿಶೀಲಿಸಿ, ವಿವಿಧ ವರ್ಗಗಳಿಗೆ ಮೀಸಲಾದ ಸ್ಥಾನಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ 87 ಮಂದಿ 100 ಕ್ಕೆ 100 ಅಂಕ ತೆಗೆದುಕೊಂಡವರಿದ್ದಾರೆ. ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 1989 ರಲ್ಲಿ 26 ಜನ ಗ್ರಾಮಲೆಕ್ಕಿಗರು ಆಯ್ಕೆಯಾಗಿದ್ದರು. ನಂತರ ಆಯ್ಕೆಯಾದವರಲ್ಲಿ ಬಿಟ್ಟು ಹೋದವರೇ ಹೆಚ್ಚು. ಹಾಗಾಗಿ ಇಲ್ಲಿ 102 ಹುದ್ದೆಗಳಿವೆ. ಅಲ್ಲದೇ ಪಿಯು ಅಂಕ ಆಧರಿಸಿ ನೇಮಕಾತಿ ನಡೆಯಲಿದೆ. ಯಾವ ಗೊಂದಲಗಳು ಇಲ್ಲಿಲ್ಲ. ಪಿಯು ಅಂಕ ಪಟ್ಟಿಗಳನ್ನು ಪಿಯು ಬೋರ್ಡ್‌ಗೆ ಕಳುಹಿಸಿ ಖಚಿತಪಡಿಸಿಕೊಳ್ಳಲಾಗುವುದು ಎಂದರು.

2017- 18, 2018- 19ರ 16 ಬ್ಯಾಕ್‌ ಲಾಗ್‌ ಹುದ್ದೆಗಳಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ- 1ರ ಅಭ್ಯರ್ಥಿಗಳಿಗೆ 18ರಿಂದ 41 ವರ್ಷ ವಯಸ್ಸು, ಸಾಮಾನ್ಯ ವರ್ಗಕ್ಕೆ 18ರಿಂದ 35, ಉಳಿದ ಹಿಂದುಳಿದ ವರ್ಗಗಳಿಗೆ 18ರಿಂದ 38 ವರ್ಷ ವಯಸ್ಸಿನವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅಲ್ಲದೇ ಈ ನೇಮಕಾತಿಗೆ ಅಭ್ಯರ್ಥಿಯ ದ್ವಿತೀಯ ಪಿಯು ಅಂಕವಷ್ಟೇ ಆಧಾರವಾಗಿದ್ದು, ಪಿಯು ಜೊತೆಗೆ ಪದವಿ, ಇನ್ಯಾವುದೇ ಕೋರ್ಸ್‌ ಮಾಡಿದ್ದರೂ ಅದು ಪರಿಗಣನೆಯಾಗುವುದಿಲ್ಲ ಎಂದು ತಿಳಿಸಲಾಗಿತ್ತು.

ಅದರಂತೆ ಮೇ 10ರಂದು ಅರ್ಜಿ ಸಲ್ಲಿಸಲು ಇದ್ದ ಕೊನೆಯ ದಿನಾಂಕ ಮುಕ್ತಾಯವಾಗಿದೆ ಎಂದು ತಿಳಿಸಿದರು.

ಆನ್‌ಲೈನ್‌ ಮುಖಾಂತರ ಅರ್ಜಿಗಳನ್ನು ಕರೆಯಲಾಗಿತ್ತು. ಕೊನೆಯ ದಿನಾಂಕದವರೆಗೆ 41,162 ಅರ್ಜಿ ಸಲ್ಲಿಕೆಯಾಗಿದ್ದು ಇವುಗಳಲ್ಲಿ ಸಾಮಾನ್ಯ ವರ್ಗದಲ್ಲಿ 2600, 2ಎನಲ್ಲಿ 11,152, ಪರಿಶಿಷ್ಟ ಜಾತಿಗೆ 9,419 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ 1:5ರಂತೆ, ಅಂದರೆ 102 ಹುದ್ದೆಗಳಿಗೆ 510 ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು.

Advertisement

ಮೆರಿಟ್‌ ಆಧಾರದಲ್ಲಿ ತಂತ್ರಾಂಶದಿಂದಲೇ ಈ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳ್ಳಲಿದ್ದು, ಅದರಂತೆ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರದ ಅಂತಿಮ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ಅಲ್ಲಿಂದ ನೇಮಕಾತಿ ಆದೇಶ ಬಂದ ಬಳಿಕ ನೇಮಕಾತಿ ಮಾಡಿಕೊಳ್ಳಲಾಗುವುದು.

ಎಲ್ಲವೂ ಆನ್‌ ಲೈನ್‌ ಮೂಲಕ ನಡೆಯುವುದರಿಂದ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಆಗಲಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದರು. ಕೋವಿಡ್‌ ಬಾಧಿತ ವರ್ಷಗಳಲ್ಲಿ ವಿದ್ಯಾರ್ಥಿಗಳು ಅತಿಹೆಚ್ಚು ಅಂಕ ಪಡೆದಿದ್ದು, ಇದಕ್ಕೆ ಇತರ ವರ್ಷಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ತಕರಾರಿದೆ. ಕೋವಿಡ್‌ ಬ್ಯಾಚ್‌ ವಿದ್ಯಾರ್ಥಿಗಳೇ ಮೆರಿಟ್‌ ಆಧಾರದಲ್ಲಿ ಚಾನ್ಸ್‌ ಪಡೆಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹಾಗೇನಿಲ್ಲ ಎಂದರು.

ಸರ್ಕಾರದ ಈ ವರೆಗಿನ ನಿಯಮಗಳ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ಮಾಡಲಾಗುವುದು. ಮೆರಿಟ್‌ ಆಧಾರದಲ್ಲಿ ಇರುವ ಕಾರಣ ಯಾರಿಗೂ ಅನ್ಯಾಯದ ಪ್ರಶ್ನೆ ಇಲ್ಲ. 87 ಜನ ಅಭ್ಯರ್ಥಿಗಳು ಮಾತ್ರ 100ಕ್ಕೆ 100 ಅಂಕಗಳಿಸಿದವರು ಇದ್ದಾರೆ. ನೇಮಕಾತಿ ಪ್ರಕ್ರಿಯೆ ನಂತರ ಸರ್ಕಾರದ ಆರ್ಥಿಕ ಇಲಾಖೆಯ ಸಮ್ಮತಿಗೆ ಕಳುಹಿಸಲಾಗುವುದು, ಅಲ್ಲದೇ ಆಯ್ಕೆಯ ನಂತರ ಪಟ್ಟಿಗೆ ಅಂತಿಮ ಒಪ್ಪಿಗೆ ನೀಡುವುದು ಸರ್ಕಾರ ಎಂದು ಜಿಲ್ಲಾಧಿಕಾರಿ ಮುಗಿಲನ್‌ ಹೇಳಿದರು. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next