Advertisement

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

06:23 PM Feb 27, 2024 | Team Udayavani |

ಬೆಂಗಳೂರು: ಸ್ಮಾರ್ಟ್ ವಾಚ್ ಗಳು ಅನಾರೋಗ್ಯದ ಸೂಚನೆ ನೀಡುವ ಮೂಲಕ ಬಳಕೆದಾರರನ್ನು ಎಚ್ಚರಿಸುವ ಕೆಲಸ ಮಾಡಿ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ ಪ್ರಸಂಗಗಳನ್ನು ಆಗಾಗ ಕೇಳುತ್ತಿರುತ್ತೇವೆ. ಅಂಥದೇ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಆಪಲ್ ವಾಚ್ ಮೂಲಕ ಸಹಜಕ್ಕಿಂತ ಹೆಚ್ಚಿನ ಹೃದಯ ಬಡಿತದ ಸೂಚನೆ ಅರಿತ ಬೆಂಗಳೂರಿನ ಟೆಕಿಯೊಬ್ಬರು ಹೃದ್ರೋಗ ತಜ್ಞರಲ್ಲಿ ಪರೀಕ್ಷಿಸಿಕೊಂಡು ಮುಂದಾಗಬಹುದಾಗಿದ್ದ ಅಪಾಯದಿಂದ ಪಾರಾದ ಘಟನೆ ನಡೆದಿದೆ.

Advertisement

ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಆಪಲ್ ವಾಚ್ ಸಹಾಯ ಮಾಡಿದ್ದಕ್ಕಾಗಿ ಆ ಟೆಕಿ, ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಇಮೇಲ್ ಮೂಲಕ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಸಾಫ್ಟ್ ವೇರ್ ಡೆವಲಪರ್ 25 ವರ್ಷದ ಶರತ್ ಶ್ರೀರಾಮ್ ಅವರು ಕಳೆದ ವರ್ಷದ ಏಪ್ರಿಲ್ ನಲ್ಲಿ ಟೆಕ್ ಕಂಪೆನಿಯೊಂದಕ್ಕೆ ಸೇರಿಕೊಂಡರು. ತಮ್ಮ ಕೋಡಿಂಗ್ ಕೆಲಸ ಕಾರ್ಯಗಳಲ್ಲಿ ಸದಾ ಬ್ಯುಸಿಯಾಗಿದ್ದರು. ಅಲ್ಲಿನ ಕೆಲಸ ಹೆಚ್ಚು ಒತ್ತಡದಿಂದ ಕೂಡಿತ್ತು. ಅಲ್ಲಿನ ಕೆಲಸದ ವಾತಾವರಣವೂ ಸ್ನೇಹಮಯಿಯಾಗಿರಲಿಲ್ಲ. ಅಕ್ಟೋಬರ್-ನವೆಂಬರ್ನಲ್ಲಿ ನಾವು ಹೊಸ ಪ್ರಾಜೆಕ್ಟ್ ಇದ್ದು, ರಾತ್ರಿ ಮತ್ತು ವಾರಾಂತ್ಯದಲ್ಲೂ ಕೆಲಸ ನಿರ್ವಹಿಸಬೇಕಿತ್ತು. ನವೆಂಬರ್ ತಿಂಗಳಲ್ಲಿ ಅಲ್ಲಿನ ಕೆಲಸ ತುಂಬಾ ಒತ್ತಡ ಮತ್ತು ಅಸಹನೀಯವಾಗಿತ್ತು. ಶರತ್ ಆಪಲ್ ವಾಚ್ 8 ಸರಣಿ ಬಳಸುತ್ತಿದ್ದರು.

ದೀಪಾವಳಿಯ ನಂತರ, ಅವರು ತಮ್ಮ ಆಪಲ್ ವಾಚ್ ನಲ್ಲಿ ಹೆಚ್ಚಿನ ಹೃದಯ ಬಡಿತದ ಸೂಚನೆಗಳನ್ನು ಪಡೆಯಲು ಪ್ರಾರಂಭಿಸಿದರು. ಪ್ರತಿ ಬಾರಿ ಅವರು ಮೀಟಿಂಗ್ ಗಳಿಗೆ ಹೋದಾಗ, ಹೃದಯದ ಬಡಿತ 130 ರಿಂದ 135 ತೋರಿಸುತ್ತಿತ್ತು. ಈ ಸಂದರ್ಭದಲ್ಲಿ ನಾಲ್ಕೈದು ನೋಟಿಫಿಕೇಷನ್ ಬರುತ್ತಿತ್ತು.

ಹೆಚ್ಚಿನ ಹೃದಯ ಬಡಿತದ ಸೂಚನೆಗಳನ್ನು ನೋಡಿ ಹೃದ್ರೋಗ ತಜ್ಞರನ್ನು ಭೇಟಿಯಾದ ಶರತ್ ಅವರಿಗೆ ವೈದ್ಯರು ಪರೀಕ್ಷೆ ಮಾಡಿದರು. ವಿಶ್ರಾಂತಿ ಸಂದರ್ಭದಲ್ಲೂ ಅವರ ಹೃದಯ ಬಡಿತ ಹೆಚ್ಚಿತ್ತು. ಸೂಕ್ತ ಸಮಯಕ್ಕೆ ಬಂದು ಪರೀಕ್ಷೆ ಮಾಡಿಸಿದ್ದೀರಿ. ಈಗಲೇ ನೀವು ಎಚ್ಚೆತ್ತುಕೊಂಡು ಜೀವನ ಶೈಲಿಯಲ್ಲಿ ಬದಲಾವಣೆ, ಒತ್ತಡ ಮುಕ್ತ ಜೀವನ ಶೈಲಿ ರೂಢಿಸಿಕೊಳ್ಳಬೇಕು ಇಲ್ಲವಾದರೆ ದೀರ್ಘಾವಧಿಯಲ್ಲಿ ಕಾಯಿಲೆ ಉಂಟಾಗಬಹುದೆಂದು ಸಲಹೆ ನೀಡಿದರು.

Advertisement

ಆಪಲ್ ವಾಚ್ನಲ್ಲಿರುವ ಆಪ್ಟಿಕಲ್ ಹಾರ್ಟ್ ಸೆನ್ಸರ್ ಫೋಟೊಪ್ಲೆಥಿಸ್ಮೋಗ್ರಫಿ ಎಂಬ ತಂತ್ರಜ್ಞಾನ ಹೊಂದಿದ್ದು, ಹೃದಯ ಸಂವೇದಕವು ಪ್ರತಿ ನಿಮಿಷಕ್ಕೆ 30 ರಿಂದ 210 ರವರೆಗಿನ ಬಡಿತಗಳವರೆಗೂ ಕೆಲಸ ನಿರ್ವಹಿಸುತ್ತದೆ.

ವೈದ್ಯರ ಸಲಹೆಯಿಂದ ಎಚ್ಚೆತ್ತ ಶರತ್ ಅವರು ತಾವಿದ್ದ ಕಂಪನಿಯಲ್ಲಿ ಮುಂದುವರಿಯುವುದು ಯೋಗ್ಯವಲ್ಲ ಎಂದು ನಿರ್ಧರಿಸಿ, ಹೊಸ ಕಂಪನಿ ಸೇರಿದರು.

“ಹಳೆಯ ಕಂಪೆನಿ ಬಿಟ್ಟ ಒಂದು ವಾರಕ್ಕೇ ನನ್ನ ವಿಶ್ರಾಂತಿ ಸಂದರ್ಭದ ಹೃದಯ ಬಡಿತ 71 ಕ್ಕೆ ಇಳಿಯಿತು! ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಂಡ ಕಾರಣ ನಾನು ಟಿಮ್ ಕುಕ್ (ಆಪಲ್ ಸಿಇಒ) ಅವರಿಗೆ ಇಮೇಲ್ ಬರೆದಿದ್ದೇನೆ. ನಾನು ಆಪಲ್ ವಾಚ್ ರೀಡಿಂಗ್ಗಳನ್ನು ಅನುಸರಿಸದಿದ್ದರೆ ಮತ್ತು ವೈದ್ಯರ ಬಳಿಗೆ ಹೋಗದಿದ್ದರೆ, ನನ್ನ ಆರೋಗ್ಯ, ಹದಗೆಡುತ್ತಿತ್ತು. ಕೆಲವು ತಿಂಗಳುಗಳಲ್ಲಿ ಇತರ ಗಂಭೀರ ಸಮಸ್ಯೆಗಳು ಉಂಟಾಗುತ್ತಿದ್ದವು” ಎಂದು ಶರತ್ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next