ವಾಷಿಂಗ್ಟನ್: ಆ್ಯಪಲ್ ವಾಚ್ ಬರೀ ಸಮಯ ನೋಡುವುದಕ್ಕಲ್ಲ. ಆ್ಯಪಲ್ ವಾಚ್ ಬಾಲಕಿಯೊಬ್ಬಳಿಗೆ ಕ್ಯಾನ್ಸರ್ ಇದೆಯೆನ್ನವುದನ್ನು ಅವಳ ಹೃದಯ ಬಡಿತದ ಹೆಚ್ಚಳದಿಂದ ಪತ್ತೆ ಹಚ್ಚಿತ್ತು. ಆ್ಯಪಲ್ ವಾಚ್ ನ ಕೆಲಸ, ಉಪಯೋಗ ಒಂದೆರೆಡಲ್ಲ. ಮಹಿಳೆಯೊಬ್ಬಳು ಸಾವಿನ ದವಡೆಯಿಂದ ಬದುಕಿ ಬರಲು ಆ್ಯಪಲ್ ವಾಚ್ ನಿಂದ ಸಹಾಯವಾಗಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಡೈಲಿ ಮೇಲ್ ವರದಿಯ ಪ್ರಕಾರ, ಯಂಗ್ ಸೂಕ್ -ಚೇ ಕ್ಯಾಂಗ್ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಇಬ್ಬರ ನಡುವೆ ಅನೇಕ ಬಾರಿ ಮನಸ್ತಾಪಗಳು ಉಂಟಾಗಿತ್ತು. ಇದೇ ಕಾರಣಕ್ಕಾಗಿ ಇಬ್ಬರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅ.16 ರ ಮಧ್ಯಾಹ್ನ ಗಂಡ ಮನೆಗೆ ಬಂದು ಹಣಕಾಸಿನ ವಿಷಯಕ್ಕೆ ತಕರಾರು ತೆಗೆದು ಪತ್ನಿ ಯಂಗ್ ಸೂಕ್ ಮೇಲೆ ಹಲ್ಲೆ ಮಾಡಿ, ಆಕೆಯ ಬಾಯಿ, ಕಣ್ಣಿಗೆ, ಕೈಗೆ ಟೇಪ್ ನಿಂದ ಕಟ್ಟಿದ್ದಾನೆ. ಆ ಬಳಿಕ ಕಾರಿನಲ್ಲಿ ಹಾಕಿಕೊಂಡು ಹೋಗಿದ್ದು, ಈ ವೇಳೆ ಅದ್ಯಾಗೋ ಯಂಗ್ ಸೂಕ್ ತನ್ನ ಕೈಯಲ್ಲಿದ್ದ ಆ್ಯಪಲ್ ವಾಚ್ ನಿಂದ 911 ( ಎಮರ್ಜೆನ್ಸಿ ನಂಬರ್) ನಂಬರ್ ಗೆ ಡಯಲ್ ಮಾಡಿದ್ದಾರೆ. ಆ್ಯಪಲ್ ವಾಚ್ ಕೂಡಲೇ ಮಗಳು ಹಾಗೂ ಯಂಗ್ ಸೂಕ್ – ಅವರ ಗೆಳತಿಗೆ ಅಪಾಯದ ನೋಟಿಫಿಕೇಷನ್ ಕಳುಹಿಸಿದೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಯಂಗ್ ಸೂಕ್ ಕೈಯಲ್ಲಿದ್ದ ಆ್ಯಪಲ್ ವಾಚ್ ಬಗ್ಗೆ ತಿಳಿದಿದ್ದ ಪತಿ, ವಾಚ್ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದ. ಆದರೆ ವಾಚ್ ಆ ವೇಳೆಗಾಗಲೇ ಅಪಾಯದ ಸೂಚನೆ ರವಾನಿಸಿ ಬಿಟ್ಟಿತ್ತು.!
ಕಾರು ಒಂದು ಕಡೆ ನಿಲ್ಲಿಸಿ, ಯಂಗ್ ಸೂಕ್ ಳನ್ನು ಜೀವಂತವಾಗಿ ಹೂಳಲು ಚೇ ಕ್ಯಾಂಗ್ ಗುಂಡಿ ತೋಡಿ, ಅದರೊಳಗೆ ಯಂಗ್ ಸೂಕ್ ರನ್ನು ಹಾಕಿ, ಸಮಾಧಿಯ ಮೇಲೆ ಮರದ ತುಂಡುಗಳನ್ನು ಹಾಕಿ ಮುಚ್ಚಿದ್ದ. ಕೆಲವು ಗಂಟೆಗಳ ಬಳಿಕ ಯಂಗ್ ಸೂಕ್ ಕಟ್ಟಿದ್ದ ಟೇಪ್ ನ್ನು ಕಷ್ಟಪಟ್ಟು ತೆಗೆದು, ಸಮಾಧಿಯಿಂದ ಹೊರ ಬಂದು ದೂರ ಓಡಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯಾಯಾಲಯದ ದಾಖಲೆಯ ಪ್ರಕಾರ, ಯಂಗ್ ಸೂಕ್ ಸಮಾಧಿಯಿಂದ ಹೊರಬಂದು , ( ಅ.17 ರಂದು) ಮನೆಯೊಂದರ ಶೆಡ್ ನಲ್ಲಿ ಅವಿತುಕೊಂಡಿದ್ದಾರೆ. ಅಲ್ಲಿ ಸ್ಥಳೀಯರು 911 ಕರೆ ಮಾಡಿ ಸ್ಥಳದ ಬಗ್ಗೆ ಹೇಳಿದ್ದಾರೆ. ವಾಚ್ ಕಳುಹಿಸಿದ ನೋಟಿಫಿಕೇಷನ್ ಆಧರಿಸಿ ಪೊಲೀಸರು ಯಂಗ್ ಸೂಕ್ ಕಿಡ್ನ್ಯಾಪ್ ಆದ ಸ್ಥಳಕ್ಕೆ ಬಂದಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಹೋಗಿರುವ ದೃಶ್ಯವನ್ನು ಪಕ್ಕದ ಮನೆಯ ಸಿಸಿ ಟಿವಿಯಲ್ಲಿ ಪೊಲೀಸರು ಪರಿಶೀಲಿಸಿದ್ದರು.
ಪೊಲೀಸರು ಸ್ಥಳಕ್ಕೆ ಬಂದ ಮೇಲೆ ಯಂಗ್ ಸೂಕ್ ತನ್ನ ಗಂಡ ಕೊಲ್ಲಲು ಬಂದಿದ್ದಾನೆ ಎಂದು ಹೇಳಿದ್ದಾರೆ. ಯಂಗ್ ಸೂಕ್ ಪತ್ತೆಯಾದ ಬಳಿಕ ಅವರ ಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಗೆ ಪೊಲೀಸರು ಕೊಲೆ ಯತ್ನ, ಕಿಡ್ನ್ಯಾಪ್ ಪ್ರಕರಣದಲ್ಲಿ ಚೇ ಕ್ಯಾಂಗ್ ನನ್ನು ಬಂಧಿಸಿದ್ದಾರೆ.