ಕ್ಯಾಲಿಫೋರ್ನಿಯಾ: ಮೊಬೈಲ್ ಫೋನ್ ಕ್ಷೇತ್ರದಲ್ಲಿ ಟಾಪ್ 1 ಬ್ರ್ಯಾಂಡ್ ಆಗಿರುವ ಆ್ಯಪಲ್ ಸಂಸ್ಥೆ, 2024ರ ವೇಳೆಗೆ ಸ್ವಯಂಚಾಲಿತ ಎಲೆಕ್ಟ್ರಾನಿಕ್ ಕಾರುಗಳನ್ನು ರಸ್ತೆಗಿಳಿಸಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಗಮನಾರ್ಹ ಸಂಗತಿಯೆಂದರೆ, ಈ ಕಾರುಗಳಿಗೆ ಮುಂದಿನ ತಲೆಮಾರಿನ ಬ್ಯಾಟರಿ ತಂತ್ರಜ್ಞಾನವನ್ನೂ ಅಳವಡಿಸಲು ಆ್ಯಪಲ್ ಸಿದ್ಧತೆ ನಡೆಸಿದೆ.
“ಮೋನೋಸೆಲ್’ ಬ್ಯಾಟರಿಗಳು ಉಳಿದ ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿಗಳಿಗಿಂತಲೂ ಹೆಚ್ಚು ಬಾಳಿಕೆ ಬರುತ್ತವೆ ಹಾಗೂ ಕಾರ್‌ನ ಮೈಲೇಜ್‌ನಲ್ಲೂ ಗಣನೀಯ ಏರಿಕೆ ಕಂಡುಬರುವ ನಿರೀಕ್ಷೆಯಿದೆ ಎನ್ನಲಾಗಿದೆ.
ಮೊಬೈಲ್ ಕ್ಷೇತ್ರದಿಂದ ಕಾರು ಉತ್ಪಾದನ ಕ್ಷೇತ್ರಕ್ಕೆ ಬರುವ ಆ್ಯಪಲ್‌ನ ಕನಸು ಈಗಿನದ್ದೇನೂ ಅಲ್ಲ. “ಪ್ರಾಜೆಕ್ಟ್ ಟೈಟನ್’ನ ಹೆಸರಲ್ಲಿ 2014ರಲ್ಲೇ ಅದು ಸ್ವಯಂಚಾಲಿತ ಎಲೆಕ್ಟ್ರಿಕ್ ಕಾರಿನ ಡಿಸೈನ್ ಆರಂಭಿಸಿತ್ತು.
ಒಂದು ಕಾಲದಲ್ಲಿ ಟೆಸ್ಲಾ ಸಂಸ್ಥೆಯ ಹಿರಿಯ ಸಂಶೋಧಕರಾಗಿದ್ದ ಡೌಗ್ ಫೀಲ್ಡ್ ಅವರು 2018ರಲ್ಲಿ ಈ ಯೋಜನೆಯ ಮೇಲುಸ್ತುವಾರಿ ವಹಿಸಿಕೊಂಡ ಅನಂತರದಿಂದ ಬ್ಯಾಟರಿ ಡಿಸೈನ್, ಸೆನ್ಸರ್ ತಂತ್ರಜ್ಞಾನ ಸೇರಿದಂತೆ ವಿವಿಧ ಸ್ತರಗಳಲ್ಲಿ ವೇಗವಾಗಿ ಕೆಲಸಗಳು ಸಾಗುತ್ತಿವೆ. ಇನ್ನು ಸ್ವಯಂ ಚಾಲಿತ ತಂತ್ರಜ್ಞಾನಕ್ಕಾಗಿ ಆ್ಯಪಲ್ ರಸ್ತೆಯ 3ಡಿ ಆಯಾಮವನ್ನು ಸೆರೆಹಿಡಿಯುವ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದು, ಈಗಾಗಲೇ ಐಫೋನ್ 12 ಪ್ರೋ ಮಾಡೆಲ್‌ಗಳಲ್ಲಿರುವ ಲಿಡಾರ್ ಸೆನ್ಸರ್ ತಂತ್ರಜ್ಞಾನವನ್ನೂ ಇದಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ ಪ್ರಾಜೆಕ್ಟ್ ಟೈಟನ್‌ನ ಭಾಗವಾಗಿರುವ ಹೆಸರು ಹೇಳಲಿಚ್ಛಿಸದ ಎಂಜಿನಿಯರ್ ಒಬ್ಬರು.