ಹೊಸದಿಲ್ಲಿ: ಮಮತಾ ಮ್ಯಾನರ್ಜಿ ವರ್ಸಸ್ ಸಿಬಿಐ ಸಂಘರ್ಷ ಪಶ್ಚಿಮ ಬಂಗಾಲದಲ್ಲಿ ಪರಾಕಾಷ್ಠೆಗೇರಿರುವಂತೆಯೇ ಇತ್ತ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಗೆ ಸಿಬಿಐ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಲು ಆದೇಶಿಸಿದೆ.
ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್, ಜಸ್ಟಿಸ್ ದೀಪಕ್ ಗುಪ್ತಾ ಮತ್ತು ಜಸ್ಟಿಸ್ ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠವು, ನ್ಯಾಯಾಂಗ ನಿಂದನೆಯ ಅರ್ಜಿಯನ್ನು ಅನಂತರ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಹೇಳಿತು.
ಈ ನಡುವೆ ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರು ಈ ಪ್ರಕರಣದಲ್ಲಿ ಕಲ್ಕತ್ತ ಹೈಕೋರ್ಟ್ ಮೆಟ್ಟಲೇರಿದ್ದು ಇಂದು ಮಂಗಳವಾರ ಪ್ರಕರಣದ ವಿಚಾರಣೆಯನ್ನು ಎತ್ತಿಕೊಂಡ ಹೈಕೋರ್ಟ್, ಈಗಾಗಲೇ ಈ ವಿಷಯವನ್ನು ಸುಪ್ರೀಂ ಕೋರ್ಟ್ ವಿಚಾರಣೆಗಾಗಿ ಎತ್ತಿಕೊಂಡಿರುವ ಕಾರಣ ಗುರುವಾರದ ವರೆಗ ಈ ಪ್ರಕರಣವನ್ನು ತಾನು ಮುಂದೂಡುತ್ತಿರುವುದಾಗಿ ಹೇಳಿತು.
ಸಿಬಿಐ ನಿನ್ನೆ ಸೋಮವಾರವೇ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ಶಾರದಾ ಚಿಟ್ ಫಂಡ್ ಹಗರಣದ ತನಿಖೆಯಲ್ಲಿ ಪಶ್ಚಿಮ ಬಂಗಾಲ ಸರಕಾರ ಸಹಕರಿಸುತ್ತಿಲ್ಲವೆಂದೂ, ಈ ಹಗರಣದ ವಿದ್ಯುನ್ಮಾನ ಸಾಕ್ಷ್ಯಗಳನ್ನು ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ನಾಶ ಮಾಡಿದ್ದು ಆ ಕುರಿತ ತನಿಖೆಗೆ ಅವರು ಸಿಗುತ್ತಿಲ್ಲವೆಂದೂ, ಹಗರಣದ ತನಿಖೆ ನಡೆಸುವಲ್ಲಿನ ಸುಪ್ರೀಂ ಕೋಟ್ ಆದೇಶವನ್ನು ಧಿಕ್ಕರಿಸುವ ಮೂಲಕ ಅವರು ಕೋರ್ಟ್ ನಿಂದನೆ ಅಪರಾಧ ಎಸಗಿರುವುದಾಗಿಯೂ ದೂರಿತ್ತು.
ಆ ಪ್ರಕಾರ ಇಂದು ಸರ್ವೋಚ್ಚ ನ್ಯಾಯಾಲಯ ಸಿಬಿಐ ನಿನ್ನೆ ಸೋಮವಾರ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಇಂದು ಮಂಗಳವಾರ ಕೈಗೊಂಡು ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್‌ಗೆ ಈ ಕ್ಷಣವೇ ಸಿಬಿಐ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಖಡಕ್ ಆದೇಶ ಹೊರಡಿಸಿತು.