Advertisement

ತಣಿಯದ ಪಾಲಿಕೆ ಅತೃಪ್ತ ಸದಸ್ಯರ ಮುನಿಸು

04:55 PM Apr 11, 2022 | Team Udayavani |

ಬಳ್ಳಾರಿ: ಇಲ್ಲಿನ ಮಹಾನಗರಪಾಲಿಕೆ ಮೇಯರ್‌ ಆಯ್ಕೆಯಿಂದ ಮುನಿಸುಗೊಂಡಿರುವ ಅತೃಪ್ತ ಸದಸ್ಯರು ಗ್ರಾಮೀಣ ಶಾಸಕ ನಾಗೇಂದ್ರರ ಮೇಲೂ ಬೇಸತ್ತಿದ್ದು, ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ವಿಧಾನ ಪರಿಷತ್‌ ಮಾಜಿ ಸದಸ್ಯ, ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ಸಿ. ಕೊಂಡಯ್ಯರನ್ನು ಭೇಟಿ ಮಾಡಿ ತಮಗಾದ ಅನ್ಯಾಯ ಹೇಳಿಕೊಂಡಿದ್ದಾರೆ.

Advertisement

ತಿರುಪತಿಗೆ ತೆರಳಿದ್ದ ಮಾಜಿ ಶಾಸಕ ಕೆ.ಸಿ. ಕೊಂಡಯ್ಯ ಶುಕ್ರವಾರ ನಗರಕ್ಕೆ ವಾಪಸ್ಸಾಗಿದ್ದು ಬೆಳಗ್ಗೆ 11 ಗಂಟೆ ಸುಮಾರಿಗೆ ಅವರ ಮನೆಗೆ ತೆರಳಿದ ಅತೃಪ್ತ 12 ಜನ ಸದಸ್ಯರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ 11, ನಗರ ವಿಧಾನಸಭಾ ಕ್ಷೇತ್ರದಲ್ಲಿ 29 ವಾರ್ಡ್‌ಗಳು ಬರಲಿವೆ. ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್‌ನ ನಾಗೇಂದ್ರ ಅವರೇ ಶಾಸಕರಾಗಿರುವುದರಿಂದ ಅಲ್ಲಿನ ವಾರ್ಡ್ ಗಳಿಗೆ ಶಾಸಕರ ಅನುದಾನ, ಡಿಎಂಎಫ್‌, 15ನೇ ಹಣಕಾಸು ಸೇರಿ ಹೆಚ್ಚಿನ ಅನುದಾನ ಸಿಗಲಿದೆ.

ನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಇಲ್ಲಿನ ಕಾಂಗ್ರೆಸ್‌ ಸದಸ್ಯರ ವಾರ್ಡ್‌ಗಳಿಗೆ ಶಾಸಕರ ಅನುದಾನ ನೀಡುತ್ತಿಲ್ಲ. ನಾವೇನಿದ್ದರೂ ಡಿಎಂಎಫ್‌ ನ 25 ಕೋಟಿ, 15ನೇ ಹಣಕಾಸು ಯೋಜನೆಯ 15-16 ಕೋಟಿ ಇದ್ದು, ಇದರಲ್ಲಿ ಪ್ರತಿವಾರ್ಡ್‌ಗೆ 60-70 ಲಕ್ಷ ಅನುದಾನ ಸಿಗಲಿದ್ದು, ಎಷ್ಟು ಅಭಿವೃದ್ಧಿ ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅತೃಪ್ತ ಸದಸ್ಯರು ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪಾಲಿಕೆ ಮೇಯರ್‌ ಸ್ಥಾನಕ್ಕೆ ಹಿಂದಿನ ಮೀಸಲಾತಿಯಂತೆ 30 ನೇ ವಾರ್ಡ್‌ ಸದಸ್ಯ ಆಸೀಫ್‌ ಹೆಸರನ್ನು ತಂದಿದ್ದ ಶಾಸಕ ನಾಗೇಂದ್ರ ಅವರು, ಮೀಸಲಾತಿ ಸಾಮಾನ್ಯ ಮಹಿಳೆಗೆ ಬದಲಾದರೂ ತಮ್ಮ ಕ್ಷೇತ್ರದ 34 ನೇ ವಾರ್ಡ್‌ ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯುಡು ಅವರನ್ನು ಪಟ್ಟು ಹಿಡಿದು ಮೇಯರ್‌ ಮಾಡಿದ್ದಾರೆ. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು ಇಲ್ಲದ ಕಾರಣ ಮೇಯರ್‌ ಸ್ಥಾನ ನೀಡಿದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಅನುಕೂಲವಾಗಲಿದೆ. ಹಾಗಾಗಿ ನಗರ ಕ್ಷೇತ್ರಕ್ಕೆ ಮೇಯರ್‌ ಸ್ಥಾನವನ್ನು ನೀಡುವಂತೆ ಕೋರಲಾಗಿತ್ತು. ಆದರೆ ನಮ್ಮ ಸಮಸ್ಯೆ ಆಲಿಸುವವರು, ಗೋಳು ಕೇಳುವವರೇ ಇಲ್ಲವಾಗಿದ್ದಾರೆ. ಹಾಗಾಗಿ ನೀವೇ ಜವಾಬ್ದಾರಿ ವಹಿಸಿಕೊಂಡು ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಕೊಂಡಯ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೊಂಡಯ್ಯ ಅವರು ಏ. 12ರವರೆಗೆ ಸಮಯ ಕೊಡಿ, ಇಲ್ಲಿನ ಎಲ್ಲ ಬೆಳವಣಿಗೆಯನ್ನು ಪಕ್ಷದ ರಾಜ್ಯ ಮುಖಂಡರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಸದಸ್ಯರೊಂದಿಗೆ ಚರ್ಚಿಸಿಲ್ಲ

Advertisement

ಮೇಯರ್‌ ಆಯ್ಕೆ ಚುನಾವಣೆಯಂದು ಸಾಕಷ್ಟು ಭಿನ್ನಮತವಿತ್ತಾದರೂ ಯಾರೂ ತೋರ್ಪಡಿಸಿಲ್ಲ. ಇದಾದ ಬಳಿಕ ಸರ್ಕಾರಿ ಅತಿಥಿಗೃಹದಲ್ಲಿ ಶಾಸಕರು ಕರೆದಿದ್ದ ಸಭೆಗೆ ನಾವ್ಯಾರು ಸದಸ್ಯರು ಹೋಗಿಲ್ಲ. ಮೊದಲೇ ಬೇಸರದಲ್ಲಿರುವ ನಾವು ಸಭೆಗೆ ಏಕೆ ಹೋಗಬೇಕು. ಇದರಿಂದ ಬೇಸತ್ತು 6ನೇ ವಾರ್ಡ್‌ ಸದಸ್ಯೆ ಎಂ.ಕೆ. ಪದ್ಮರೋಜಾ ಮತ್ತವರ ಪತಿ ಮಾಜಿ ಸದಸ್ಯ ಎಂ.ವಿವೇಕಾನಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರೂ, ಶಾಸಕರು ಕರೆದು ಸಮಸ್ಯೆ ಕೇಳಿಲ್ಲ. ಆಗಲೇ ಎಲ್ಲರನ್ನೂ ಪ್ರತ್ಯೇಕವಾಗಿ ಕರೆದು ಮಾತನಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ನಗರ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ಅವರು ನಮ್ಮೊಂದಿಗೆ ಪ್ರತ್ಯೇಕವಾಗಿ ಮಾತನಾಡಿದರೆ ಸಮಸ್ಯೆ ಇತ್ಯರ್ಥವಾಗಲಿದೆ. ನಾವೇನು ಪಕ್ಷ ಬಿಟ್ಟು ಹೋಗುವವರಲ್ಲ. ಕೂತು ಮಾತನಾಡಬೇಕು ಅಷ್ಟೇ.  -ನಂದೀಶ್‌ ಕುಮಾರ್‌, 18ನೇ ವಾರ್ಡ್‌ ಪಾಲಿಕೆ ಸದಸ್ಯರು, ಬಳ್ಳಾರಿ.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ 6ನೇ ವಾರ್ಡ್‌ ಸದಸ್ಯೆ ಎಂ.ಕೆ. ಪದ್ಮರೋಜಾ ಮತ್ತವರ ಪತಿ ಎಂ.ವಿವೇಕಾನಂದರ ರಾಜೀನಾಮೆ ಪತ್ರ ನನಗೆ ಸಿಕ್ಕಿಲ್ಲ. ಬಂದು ಕೊಡುವುದಾಗಿ ತಿಳಿಸಿದ್ದರು ಅಷ್ಟೆ. ಕೂತು ಚರ್ಚಿಸಿದರೆ ಸಮಸ್ಯೆ ಬಗೆಹರಿಯಲಿದೆ. ಸದ್ಯದ ವಾಸ್ತವಾಂಶವನ್ನು ಪಕ್ಷದ ವರಿಷ್ಠರಾದ ಡಿ.ಕೆ. ಶಿವಕುಮಾರ್‌, ಈಶ್ವರಖಂಡ್ರೆ, ಯು.ಟಿ.ಖಾದರ್‌ ಅವರ ಗಮನಕ್ಕೆ ತಂದಿದ್ದೇನೆ.  – ಜಿ.ಎಸ್‌.ಮಹ್ಮದ್‌ ರಫೀಕ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು, ಬಳ್ಳಾರಿ.

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next