Advertisement

ಪಾಲಿಕೆ ಕಮಿಷನರ್‌ ವಣಿಕ್ಯಾಳ ವಜಾಕ್ಕೆ ಅಂಬೇಸಿಂಗ್‌ ಆಗ್ರಹ

01:17 PM Jun 03, 2022 | Team Udayavani |

ಕಲಬುರಗಿ: ಬಾಕಿ ಬಿಲ್‌ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿರುವ ಪಾಲಿಕೆ ಕಮಿಷನರ್‌ ಶಂಕ್ರಣ್ಣ ವಣಿಕ್ಯಾಳ್‌ ಅವರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂದು ಎಜು ಇನ್ಫೋ ಹಬ್‌ ಬಿಪಿಒ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಹಾಗೂ ಆಮ್‌ ಆದ್ಮಿ ಪಕ್ಷದ ಮುಖಂಡ ಶರಣಬಸಪ್ಪ ಶ್ರೀಮಂತ ಅಂಬೇಸಿಂಗ್‌ ಆಗ್ರಹಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕೋವಿಡ್‌ನ‌ಲ್ಲಿ ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರ ಸ್ಥಾಪಿಸಲು ಮಹಾನಗರ ಪಾಲಿಕೆಯಿಂದ ಟೆಂಡರ್‌ ಕರೆಯಲಾಗಿತ್ತು. ತಮ್ಮ ಕಂಪನಿಗೆ 7.50 ಲಕ್ಷ ರೂ.ಗೆ ಈ ಟೆಂಡರ್‌ ಮಂಜೂರಾಗಿತ್ತು. ಈ ಹಣ ಪಡೆಯಲು (ಬಿಲ್‌ ಮಾಡಲು)ಶೇ.2 ಲಂಚ ನೀಡಲು ಒತ್ತಡ ಹೇರಲಾಯಿತು. ಲೆಕ್ಕಾಧಿಕಾರಿ ಚನ್ನಪ್ಪ ಬಳಿ ಹೋದಾಗ ಕಮಿಷನ್‌ ಕೊಡಲೇಬೇಕು. ಕಮಿಷನರ್‌ ಕೊಡಲು ಹೇಳಿದ್ದಾರೆ ಎಂದು ತಿಳಿಸಿದ್ದಾಗಿ ಹೇಳಿದರು.

ಈ ಹಣ ತನಗಲ್ಲ ಪಾಲಿಕೆ ಆಯುಕ್ತರಿಗೆ ನೀಡಬೇಕು. ಇಲ್ಲದಿದ್ದರೆ ಆರ್‌ಟಿಜಿಎಸ್‌ ಕಡತದ ಮೇಲೆ ಸಹಿ ಮಾಡಲ್ಲ ಎಂದು ಹೇಳಿದ್ದರು. ಇದು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಆಗಿತ್ತು. ಆದ್ದರಿಂದ ಎಸಿಬಿ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ ಎಂದು ಆಡಿಯೋ ರೆಕಾರ್ಡಿಂಗ್‌ ಬಿಡುಗಡೆ ಮಾಡಿದರು.

ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅದರ ಹಿಂದಿನ ಪ್ರಮುಖ ಮುಖವನ್ನು ಜನರೆದುರು ಬಯಲು ಮಾಡಿದ್ದೇನೆ. ಈ ಕುರಿತು ತನಿಖೆಯಾಗಲಿ. ಈ ಸಂಬಂಧ ನನಗೆ ಅಥವಾ ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ದಕ್ಷಿಣ ಮತಕ್ಷೇತ್ರದ ಶಾಸಕರು, ವಣಿಕ್ಯಾಳ ಮತ್ತು ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು.

ಡಾ| ರಾಘವೇಂದ್ರ ಚಿಂಚನಸೂರು, ಸಾಹೇಬ್‌ ಗೌಡ ನಾಗನಹಳ್ಳಿ, ರೇಷ್ಮಿ, ಸಂಜೀವ ಕರಿಕಲ್‌ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next