Advertisement

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

10:42 AM May 17, 2022 | Team Udayavani |

ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೃಷಿ ವಿಶ್ವ ವಿದ್ಯಾಲಯದ ದಿನಗೂಲಿ ನೌಕರರು ಹಾಗೂ ಭೂಮಿ ಕಳೆದುಕೊಂಡ ರೈತರು, ಕರ್ನಾಟಕ ಭೂಮಿ ಕಳೆದುಕೊಂಡ ರೈತರ ಸಂರಕ್ಷಣಾ ಸಮಿತಿ ವತಿಯಿಂದ ನಗರದ ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ಕೈಗೊಂಡರು.

Advertisement

ಸುಮಾರು ವರ್ಷಗಳಿಂದ ನೌಕರರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿದ್ದು, ಕೃವಿವಿ ಆಡಳಿತ ಮಂಡಳಿ ದಿನಗೂಲಿ ನೌಕರರ ಸಮಸ್ಯೆ ಆಲಿಸುತ್ತಿಲ್ಲ. ಪ್ರತಿ ಸಲವೂ ಹೋರಾಟ ನಡೆಸಿದ ಸಂದರ್ಭದಲ್ಲಿ ಇಲ್ಲಸಲ್ಲದ ನೆಪ ಹೇಳಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.

1946ರಿಂದ ಈವರೆಗೆ ತಾಲೂಕಿನ ನರೇಂದ್ರ, ಎತ್ತಿನಗುಡ್ಡ ಮತ್ತು ಮುಮ್ಮಿಗಟ್ಟಿ ಗ್ರಾಮದ ರೈತರು ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕೆ, ಕೃಷಿ ವಿಶ್ವವಿದ್ಯಾಲಯ ಇನ್ನಿತರೆ ಉದ್ದೇಶಗಳಿಗೆ ನೀಡಿದ್ದಾರೆ. ಭೂ ಸ್ವಾಧೀನದ ಸಂದರ್ಭದಲ್ಲಿ ಜಮೀನು ಕಳೆದುಕೊಂಡ ರೈತರ ಪ್ರತಿ ಕುಟುಂಬಕ್ಕೆ ಉದ್ಯೋಗ ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ಅರ್ಹತೆಗೆ ತಕ್ಕಂತೆ ಉದ್ಯೋಗ ಕಲ್ಪಿಸದೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.

ಪೂರ್ವಜರಿಂದ ಬಂದ ಬೆಲೆ ಬಾಳುವ ಜಮೀನುಗಳನ್ನು ಸರ್ಕಾರ ನಿಗದಿಪಡಿಸಿದ ಬೆಲೆಗೆ ನೀಡಲಾಗಿದೆ. ಇತ್ತ ಭೂಮಿಯೂ ಇಲ್ಲ, ಉದ್ಯೋಗವೂ ಇಲ್ಲದೆ ಬೀದಿಗೆ ಬೀಳುವಂತಾಗಿದೆ. ಸರ್ಕಾರ ಮತ್ತು ಆಡಳಿತ ಮಂಡಳಿ ಕೂಡಲೇ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ನಂತರ ಕುಲಪತಿ ಡಾ|ಎಂ.ಬಿ. ಚೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಕರೆಪ್ಪ ವಾಲೀಕಾರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗಾಣಿಗೇರ, ಖಜಾಂಚಿ ಈರಪ್ಪ ತೇಗೂರ, ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಮಡಿವಾಳಪ್ಪ ಗಾಳಿ, ಸೋಮಯ್ಯ ಪೂಜಾರ, ರಾಮಣ್ಣ ವಾಲೀಕಾರ, ಮಹಾದೇವ ಹೊಸಕೇರಿ, ಮಲ್ಲವ್ವ ತಳವಾರ, ದುಂಡಪ್ಪ ಗುಮ್ಮಗೋಳ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next