ಹೊಸಪೇಟೆ: ರಾಜ್ಯದ ವಿವಿಧ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಮಾಡುವ ಮೂಲಕ ನೌಕರಿ ಭದ್ರತೆ ಕಲ್ಪಿಸಿ ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಪ್ರವಾಸಿ ಮಿತ್ರರ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ವತಿಯಿಂದ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದೆ.
ಪ್ರವಾಸೋದ್ಯಮ ಇಲಾಖೆಯಿಂದ 2015ರಲ್ಲಿ ಸ್ಥಾಪಿತಗೊಂಡ “ಪ್ರವಾಸಿ ಮಿತ್ರ ಯೋಜನೆ” ಸುಮಾರು ಎಂಟು ವರ್ಷಗಳು ಕಳೆದರೂ ಪ್ರವಾಸಿ ಮಿತ್ರರಿಗೆ ಮೂಲಭೂತ ಸೌಕರ್ಯ,ವೇತನ ಹೆಚ್ಚಳ ಉದ್ಯೋಗ ಭದ್ರತೆಗೆ ಸರ್ಕಾರ ಈವರೆಗೆ ಕ್ರಮ ಕೈಗೊಂಡಿಲ್ಲ. ಕೂಡಲೇ ಪ್ರವಾಸಿ ಮಿತ್ರ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು, ವಾರದಲ್ಲಿ ರಾಜ್ಯದ ಪ್ರವಾಸಿ ಮಿತ್ರರ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸಿ ಮಿತ್ರರ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಕೆ ಹನುಮಂತರೆಡ್ಡಿ, ಉಪಾಧ್ಯಕ್ಷ ಅಶ್ವಥ್ ಪ್ರಧಾನ ಕಾರ್ಯದರ್ಶಿ ಗಂಗಾಧರ್, ಖಜಂಚಿ ಸುನಿತಾ ಕುಮಾರಿ,ಸಹ ಸಂಘಟನಾ ಕಾರ್ಯದರ್ಶಿ ಶಕುಂತಲಾ, ರಾಜ್ಯ ನಿರ್ದೇಶಕರಾದ ರಾಘವೇಂದ್ರ ರಾಜ, ವಿಜಯಲಕ್ಷ್ಮಿ ಸೇರಿ ಅಸೋಸಿಯೇಷನ್‌ನ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಜರಿದ್ದರು.