ಮುಳಬಾಗಿಲು: ಕೋವಿಡ್ ಲಾಕ್‌ಡೌನ್ ನಡುವೆ ಸರ್ಕಾರಿ ನೌಕರರ ವೇತನ ಬಿಡುಗಡೆ ಮಾಡಿದ್ದರೂ ಮಂಜೂರು ಮಾಡದೇ ವಿಳಂಬ ಮಾಡುತ್ತಿರುವ, ಅಧಿಕಾರಿಗಳ ವಿರುದ್ಧ ಅಬಕಾರಿ ಸಚಿವ ಎಚ್.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕ್ಷೇಮಾಭಿವೃದ್ಧಿ ಸೌಕರರಾಗಿ ಸೇವೆ ಸಲ್ಲಿಸುತ್ತಿರುವವರಿಂದ ನಗರದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು. ಪ್ರಭಾರ ವಲಯಾರಣ್ಯಾಧಿಕಾರಿ ಹರೀಶ್, ಮಾರ್ಚ್ ತಿಂಗಳ ವೇತನ ಇದುವರೆಗೂ ನೀಡದೇ ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದ ಹನುಮಪ್ಪ, ಜಿ.ಶ್ರೀರಾಮಪ್ಪ, ಆಂಜಪ್ಪ ಮತ್ತು ರಾಮಕೃಷ್ಣಪ್ಪ ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್‌ಗೆ ಮನವಿ ಮಾಡಿದಾಗ ಯಾವುದೇ ನೌಕರರ ವೇತನ ತಡೆದಿಲ್ಲ, ಬಿಡುಗಡೆ ಮಾಡಲಾಗಿದೆ ಎಂದರು.
ಆದರೆ, ಪ್ರಭಾರ ಸಾಮಾಜಿಕ ವಲಯಾರಣ್ಯಾಧಿಕಾರಿ ಹರೀಶ್ ಮಾತ್ರ ವೇತನ ನೀಡಲು ಅನುದಾನವಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಅಲವತ್ತುಕೊಂಡರು. ನಿಗದಿತ ಅವಧಿಯಲ್ಲಿ ಬಿಲ್ ಮಾಡದೇ ನಿರ್ಲಕ್ಷ್ಯ ತೋರಿದ್ದರಿಂದ ಅನುದಾನವೂ ವಾಪಸ್ ಹೋಗಿದೆ. ಹಿಂದೊಮ್ಮೆ ಮೂರು ತಿಂಗಳ ವೇತನ ನೀಡದೇ ಇದೇ ರೀತಿ ಸತಾಯಿಸುತ್ತಿದ್ದಾರೆಂದು ನೌಕರರು ಸಚಿವರಿಗೆ ತಿಳಿಸಿದರು.
ಈ ವೇಳೆ ಸಚಿವ ಎಚ್.ನಾಗೇಶ್, ಪ್ರಭಾರ ವಲಯಾರಣ್ಯಾಧಿಕಾರಿ ಹರೀಶ್ ಅವರನ್ನು ದೂರವಾಣಿ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ವೇತನ ನೀಡುವಂತೆ ತಾಕೀತು ಮಾಡಿದರು.