ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ತರಿಗೆ ಉದ್ಯಮ-ಉದ್ಯೋಗ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ನಗರಕ್ಕೆ ಆಗಮಿಸಿದ್ದ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು, ನವನಗರ ಅಗ್ರೋಟೆಕ್ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿ ಮೆ: ಗ್ರೀನ್‌ಫುಡ್ ಪಾರ್ಕ್ ಲಿಮಿಟೆಡ್‌ಗೆ ಹಂಚಿಕೆಯಾದ 100 ಎಕರೆ ಜಮೀನನ್ನು ಗುತ್ತಿಗೆಯನ್ನು ರದ್ದುಪಡಿಸಿ ಕೈಗಾರಿಕಾ ಇಲಾಖೆಗೆ ಹಸ್ತಾಂತರಗೊಳಿಸಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ನಿರ್ಮಿಸಲು ಬಾಗಲಕೋಟೆ ನಗರದ ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಕಾರ್ಯದರ್ಶಿ ವೆಂಕಟಾಚಲಪತಿ ಮಾತನಾಡಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಅಕ್ರಮವಾಗಿ ಗುತ್ತಿಗೆ ಮುಂದುವರಿಸಿರುವಕುರಿತು ಮಾಹಿತಿಯನ್ನು ವಿವರಿಸಿ ಗುತ್ತಿಗೆ ರದ್ದುಗೊಳಿಸುವಂತೆ ಮನವಿ ಮಾಡಿದರು.
ಸಮಿತಿಯ ಅಧ್ಯಕ್ಷ ಗೋವಿಂದರಾಜ ಬಳ್ಳಾರಿ, ಉತ್ತರ ಕರ್ನಾಟಕದವರಾದ ತಾವು ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಯಾವ ರೀತಿ ಕೈಗಾರಿಕೆ ಹಾಗೂ ವಾಣಿಜ್ಯ ಅಭಿವೃದ್ಧಿಗೊಳಿಸಿದ್ದೀರಿ. ಬಾಗಲಕೋಟೆ ನಗರವು ಮುಳುಗಡೆ ಪ್ರದೇಶವಾಗಿರುವುದರಿಂದ ನಗರವನ್ನು ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶದಿಂದ ಅಭಿವೃದ್ಧಿ ಪಡಿಸಲು ವಿನಂತಿಸಿಕೊಂಡರು.
ಸದಸ್ಯರಾದ ಪಡಿಯಪ್ಪ ಕಟಗೇರಿ, ಮಹಮ್ಮದ ರಫೀಕ ನದಾಫ್, ಪ್ರಯಾಗ ಮಗಜಿ, ಮೆಹಬೂಬ ಸಂದಿಮನಿ ಹಾಗೂ ಸಲಹಾ ಸಮಿತಿ ಸದಸ್ಯರಾದ ಸದಾಶಿವ ಕೆಂಬಾವಿ, ಎಸ್.ಎಸ್.ಜಿಡಗಿ, ಆಸೀಫ್ ಹುಬ್ಬಳ್ಳಿ, ಮಂಜು, ಅಹಮದ್ ಹನಮಸಾಗರ, ಪ್ರದೀಪ ಮಿರಜಕರ ಉಪಸ್ಥಿತರಿದ್ದರು.