ಯಾದಗಿರಿ: ನೆರೆಯ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಟಗಾ ಗ್ರಾಮದ ಚರ್ಚ್ ಮೇಲೆ ನಡೆದ ದಾಳಿ ಖಂಡಿಸಿ ಹಾಗೂ ದುಷ್ಕರ್ಮಿಗಳ ಠವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಇಲ್ಲಿನ ಮೆಥೋಡಿಸ್ಟ್ ಚರ್ಚ್ ಸಭಾಪಾಲಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಇಲ್ಲಿನ ಚರ್ಚ್ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೌನ ಮೆರವಣಿಗೆ ನಡೆಸಿ ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಸತ್ಯಮಿತ್ರ ಮಾತನಾಡಿ, ಘಟನೆಯನ್ನು ತೀವ್ರವಾಗಿ ಖಂಡಿಸಿ ಇಂತಹ ಘಟನೆಗಳಿಂದ ಕ್ರೈಸ್ತ ಸಮುದಾಯಕ್ಕೆ ನೋವಾಗಿದ್ದು, ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಡಾ| ಸುನೀಲ್ ಕುಮಾರ ರೆಡ್ ಸನ್ ಮಾತನಾಡಿ, ಇಂತಹ ಘಟನೆಯಿಂದ ಸಮುದಾಯಕ್ಕೆ ನೋವಾಗಿದೆ. ಕ್ರೈಸ್ತರು ಪ್ರಾರ್ಥನೆ ಮಾಡುತ್ತಿರುವ ಸಂದರ್ಭದಲ್ಲಿಯೇ ದುಷ್ಕರ್ಮಿಗಳು ಚರ್ಚ್‌ನಲ್ಲಿ ನುಗ್ಗಿ ಗಲಾಟೆ ನಡೆಸಿ ಅವಾಚ್ಯ ನಿಂದಿಸಿದ್ದಾರೆ, ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಇಂತಹ ಘಟನೆಗಳು ಅಲ್ಪಸಂಖ್ಯಾತರಲ್ಲಿ ಅಭದ್ರತೆ ಮೂಡಿಸುವುದರಿಂದ ಸರ್ಕಾರ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಜೆಡಿಎಸ್ ಕ್ರೈಸ್ತ ಘಟಕದ ಜಿಲ್ಲಾಧ್ಯಕ್ಷ ಬಾಲಮಿತ್ರ ಎಬೆಲ್, ರೇವರೆಂಡ್ ಯೇಸುನಾಥ ನಂಬಿ, ದಿಲೀಪ್ ಮುಳ್ಳಗಸಿ, ಷಡ್ರಕ್ ಬಡಿಗೇರ, ವೈ.ಎಸ್. ಸಾಮುವೆಲ್, ಜಾನ್‌ಸನ್, ಉದಯಕುಮಾರ, ಆನಂದ, ಜಾನಿ ಕಂದಕೂರು, ಯೇಸು ಬೆಳಗುಂದಿ, ಇಮಾನುವೆಲ್ ಕಾಳೆಬೆಳಗುಂದಿ, ವಿವಿಧ ಗ್ರಾಮಗಳ ಪಾಸ್ಟರ್‌ಗಳು ಸಭಾ ಪಾಲಕರು, ಸಭಾ ಸದಸ್ಯರು, ಸ್ವಯಂ ಸೇವಕರು ಪಾಲ್ಗೊಂಡಿದ್ದರು.